ಓಂಕಾರವದನಾ ದೇವೀ ವಾಯಕಾರಭುಜದ್ವಯೀ | ಶಿಕಾರದೇಹಮಧ್ಯಾ ಚ ನಮಃಕಾರಪದದ್ವಯೀ || ಪಂಚಾಕ್ಷರೀ ಪರಾ ವಿದ್ಯಾ ಸತಾರಾ ಲಿಂಗರೂಪಿಣೀ | ಅಧಿಕಾರಯುಜಾಂ ತಾರೇ ಧ್ಯೇಯಾ ಸಾ ಮಂತ್ರರೂಪಿಣೀ || ಇಲ್ಲಿ ಪಂಚಾಕ್ಷರಿಮಂತ್ರವನ್ನು ದೇವಿಯ ರೂಪದಲ್ಲಿ ವಿವರಿಸಲಾಗಿದೆ. ‘ಓಂ’ಕಾರವೇ ಮುಖವಾಗಿರುವವಳೂ, ‘ವಾ’ ಮತ್ತು ‘ಯ’ಕಾರಗಳನ್ನು ಎರಡು ಭುಜಗಳಾಗಿ ಉಳ್ಳವಳೂ, ‘ಶಿ’ಕಾರವೇ ಮಧ್ಯದೇಹವಾದವಳೂ, ‘ನ’ ಮತ್ತು ‘ಮಃ’ಕಾರಗಳೇ ಎರಡು ಪಾದಗಳಾಗಿ ಉಳ್ಳವಳೂ ಆಗಿ ಪ್ರಣವಸಹಿತ ಪಂಚಾಕ್ಷರೀ ಅಥವಾ ಷಡಕ್ಷರ ಎಂದು ಕರೆಯಲ್ಪಡುವ ಈ ಮಂತ್ರದೇವಿಯು ಲಿಂಗರೂಪಿಣಿಯಾಗಿ ಶೋಭಿಸುತ್ತಾಳೆ. ಪ್ರಣವಕ್ಕೆ ಅಧಿಕಾರವುಳ್ಳವರೆಲ್ಲ ಇವಳನ್ನು ಧ್ಯಾನಿಸಬಹುದು. ಮಂತ್ರಕ್ಕೆ ದೇಹದ ಆಕಾರ ಕೊಟ್ಟು ಧ್ಯಾನ, ಜಪ ಮಾಡುವುದರಿಂದ ಮನಸ್ಸು ಆ ಮಂತ್ರದಲ್ಲಿ ತಲ್ಲೀನವಾಗಲು ಸಹಾಯವಾಗುತ್ತದೆ.
| ಚಂದ್ರಜ್ಞಾನಾಗಮ (11.39-40) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು