ಕೋಲಾರ ನಗರಸಭೆ ಸಾಮಾನ್ಯ ಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಭಾರಿ ಪೌರಾಯುಕ್ತ ಪವನ್ ಇದ್ದರು. 
ನ್ಯೂಸ್

ಅಮೃತ್ ಕಾಮಗಾರಿ ಅಪೂರ್ಣ, ಹಸ್ತಾಂತರಕ್ಕೆ ಆಕ್ಷೇಪ; ನಗರಸಭೆಯಲ್ಲಿ ಸದಸ್ಯರ ಆಕ್ರೋಶ

 ಕೋಲಾರ: ಅಮೃತ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಅಪೂರ್ಣ ಮತ್ತು ಕಳಪೆಯಾಗಿದ್ದರೂ ನಗರಸಭೆಗೆ ಹಸ್ತಾಂತರಿಸುವ ವಿಷಯ ಅಜೆಂಡಾದಲ್ಲಿ ಪ್ರಸ್ತಾಪಿಸಿದ್ದಕ್ಕೆ ಸದಸ್ಯರು ಪಕ್ಷಭೇದ ಮರೆತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪದ್ಮನಾಭರೆಡ್ಡಿ ಮತ್ತು ಅಧಿಕಾರಿಗಳ ವಿರುದ್ಧ ಅಸವಾಧಾನ ವ್ಯಕ್ತಪಡಿಸಿದರು.

ಇದರ ಜತೆಗೆ ವರ್ಷವಾದರೂ ರಸ್ತೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರನನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಶ್ವೇತಾ ಶಬರೀಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಾವಾನ್ಯ ಸಭೆಯಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕೈದು ವರ್ಷದ ಹಿಂದೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈಗೊಂಡಿರುವ ನೀರು ಸರಬರಾಜು, ಒಳಚರಂಡಿ ಕೊಳವೆ, ವೆಟ್‌ವೆಲ್, ಎಸ್ಟಿಪಿ, ಗಹಸಂಪರ್ಕಗಳನ್ನು ನಗರಸಭೆಗೆ ಹಸ್ತಾಂತರಿಸುವ ವಿಚಾರ ಚರ್ಚೆಗೆ ಬಂದಾಗ ಧ್ವನಿಯೆತ್ತಿದ ಪ್ರವೀಣ್‌ಗೌಡ, ರಾಕೇಶ್, ಮುರಳಿಗೌಡ, ಅಂಬರೀಶ್, ಮುಬಾರಕ್ ಪಕ್ಷಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರ ಕಳಪೆ, ಅವೈಜ್ಞಾನಿಕ ಕಾಮಗಾರಿ: ಹಿಂದಿನ ಕೌನ್ಸಿಲ್ ಇದ್ದಾಗ ಕಾಮಗಾರಿ ಕೈಗೊಳ್ಳಲಾಗಿದೆ. 15 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಸಹ ಒದಗಿಸಲಾಗಿದೆ. ಆದರೆ ಗುತ್ತಿಗೆದಾರ ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿ ನಡೆಸಿ ಶೇ.90ರಷ್ಟು ಹಣ ಜೇಬಿಗಿಳಿಸಿ ನಾಪತ್ತೆಯಾಗಿದ್ದಾನೆ. ಆತನ ಕಚೇರಿಯೂ ಕೋಲಾರದಲ್ಲಿಲ್ಲ.

10 ಕೋಟಿ ರೂಪಾಯಿ ಸಹ ಖರ್ಚುವಾಡಿಲ್ಲ. ಹೀಗಿರುವಾಗ 3ನೇ ಸಂಸ್ಥೆ(ತಟಸ್ಥ)ಯಿಂದ ಪರಿಶೀಲನೆ ನಡೆಸಲು ಒತ್ತಾಯಿಸಿದ್ದರೂ ಕ್ರಮ ಕೈಗೊಂಡಿಲ್ಲ. ಯುಜಿಡಿ ಪೈಪ್‌ಲೈನ್‌ಗಿಂತ ಮನೆ ಸಂಪರ್ಕ ಪೈಪ್‌ಗಳು ತಗ್ಗಿನಲ್ಲಿದ್ದು ಕಲುಷಿತ ನೀರು ಸರಾಗವಾಗಿ ಹಾದು ಹೋಗುತ್ತಿಲ್ಲ. ಇನ್ನು ತ್ಯಾಜ್ಯ ನೀರನ್ನು ಒಂದೆಡೆ ತೆಗೆದುಕೊಂಡು ಹೋಗಿ ಸಂಗ್ರಹಿಸಬೇಕಿತ್ತಾದರೂ ಆ ಕೆಲಸ ವಾಡದೆ ಕೋಲಾರಮ್ಮ ಕೆರೆಗೆ ಹರಿಸಿದ್ದಾರೆ.

ಇದರಿಂದಾಗಿ ಕೆರೆಯಲ್ಲಿ ಹುಳುಗಳು ಬಿದ್ದಿದ್ದು ಪರಿಸರ ಕಲುಷಿತಗೊಳ್ಳುವಂತಾಗಿದೆ. ಪರಿಸ್ಥಿತಿ ಹೀಗಿದ್ದರೂ ಕಾಮಗಾರಿಗಳನ್ನು ಹಸ್ತಾಂತರಿಸಿಕೊಳ್ಳಲು ಹೇಗೆ ಸಾಧ್ಯ? ಅಜೆಂಡಾದಲ್ಲಿ ಇಂತಹ ಅಸಂಬದ್ಧ ವಿಷಯ ಪ್ರಸ್ತಾಪಿಸಲು ಸೂಚಿಸಿದವರು ಯಾರು ಎಂದು ತರಾಟೆಗೆ ತೆಗೆದುಕೊಂಡರು.

ಸಭೆ ಕರೆಯಲು ಅಧ್ಯಕ್ಷೆ ಸೂಚನೆ: ಅಜೆಂಡಾದಲ್ಲಿ ವಿಷಯ ಪ್ರಸ್ತಾಪಿಸಿರುವುದನ್ನೇ ಗುತ್ತಿಗೆದಾರ ದಾಖಲೆಯಾಗಿಟ್ಟುಕೊಂಡು ನ್ಯಾಯಾಲಯಕ್ಕೆ ತೆರಳಿ ಬಾಕಿ ಇರುವ ಶೇ.30ರಷ್ಟು ಹಣ ಮತ್ತು ಠೇವಣೆ ಹಣ ಪಡೆದುಕೊಳ್ಳಲು ಯತ್ನಿಸಿದರೆ ನಗರಸಭೆ ಯಾರ ಮೊರೆಹೋಗಬೇಕು? ನೀವೇನಾದರೂ ಅವರಿಗೆ ಅನುಕೂಲ ವಾಡಿಕೊಡಲು ಯತ್ನಿಸುತ್ತಿದ್ದೀರಾ? ಅಧ್ಯಕ್ಷೆ ಒಳಗೊಂಡಂತೆ ತಟಸ್ಥ ಸಂಸ್ಥೆಯಿಂದ ಪರಿಶೀಲಿಸಿ ಎಲ್ಲವೂ ಸಮರ್ಪಕವಾಗಿದೆ ಎಂದು ಮನವರಿಕೆಯಾದ ನಂತರವೇ ಹಸ್ತಾಂತರಿಸಿಕೊಳ್ಳಬೇಕು. ಈ ಕುರಿತು ವಿಶೇಷ ಸಭೆ ಕರೆದು ಚರ್ಚಿಸುವ ಅಗತ್ಯವಿದೆ ಎಂದು ಪ್ರಸಾದ್ ಬಾಬು ಮತ್ತಿತರರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ, ಪ್ರಭಾರಿ ಪೌರಾಯುಕ್ತ ಪವನ್‌ಗೆ ಸಭೆ ಕರೆಯಲು ಸೂಚಿಸಿದರು.

ನಗರಸಭೆಗೆ ಸಾಮರ್ಥ್ಯವಿಲ್ಲ: ಅಮೃತ್ ಯೋಜನೆ ನಿರ್ವಾಣಗಳನ್ನು ನಗರಸಭೆಗೆ ಹಸ್ತಾಂತರಿಸಿಕೊಂಡರೆ ನಿರ್ವಹಣೆ ಕಷ್ಟ. ಎಸ್‌ಟಿಪಿ ಪ್ಲಾಂಟ್‌ಗಳ ಸ್ಥಳಾಂತರ ಮತ್ತು ನಿರ್ವಾಣ, ಅವೈಜ್ಞಾನಿಕವಾಗಿ ಅಳವಡಿಸಿರುವ ಒಳಚರಂಡಿ ಪೈಪ್‌ಗಳನ್ನು ಸರಿಪಡಿಸುವುದು, ಛೇಂಬರ್‌ಗಳ ಮೇಲಿನ ಕಳಪೆ ಮುಚ್ಚಳಗಳನ್ನು ಬದಲಿಸಬೇಕಾದರೆ 20 ರಿಂದ 30 ಕೋಟಿ ರೂಪಾಯಿ ಖರ್ಚು ವಾಡಿದರೂ ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗುತ್ತಿಗೆದಾರರ ಪರ ಕೆಲಸ ವಾಡುತ್ತಿರುವ ಅಧಿಕಾರಿ ವರ್ಗದ ನಡೆ ಅಕ್ಷಮ್ಯ ಅಪರಾಧ. ಕಸ ವಿಲೇವಾರಿಗೆ ಕರೆ ವಾಡಿದರೆ ಅಧಿಕಾರಿ ನವಾಜ್ ಮತ್ತಿತರರು ಉತ್ತರಿಸುವುದಿಲ್ಲ ಎಂದು ಪ್ರಸಾದ್ ಬಾಬು, ಅಂಬರೀಶ್ ಬೇಸರಿಸಿದರು.

ಗುತ್ತಿಗೆದಾರನ ಪರ ಸದಸ್ಯರು: ಇಟಿಸಿಎಂ ಪಕ್ಕದ ರಸ್ತೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರ ಜಿ.ಸೊಣ್ಣೇಗೌಡಗೆ ಅಂತಿಮ ನೋಟಿಸ್ ನೀಡಿದ್ದು, ಯಾವುದೇ ಪ್ರತಿಕ್ರಿಯೆ ನೀಡದಿರುವುದರಿಂದ ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಂಡು ಬ್ಲಾಕ್ ಲಿಸ್ಟ್‌ಗೆ ಸೇರಿಸಲು ಶಿಫಾರಸ್ಸು ವಾಡಬೇಕೆಂಬ ಪ್ರಸ್ತಾಪಕ್ಕೆ ರಾಕೇಶ್ ಮತ್ತಿತರರು ವಿರೋಧ ವ್ಯಕ್ತಪಡಿಸಿ, ಆ ವಾರ್ಗದಲ್ಲಿ ಮೊದಲು ಯುಜಿಡಿ ಕಾಮಗಾರಿ ಪೂರ್ಣಗೊಳಿಸಿ, ಸ್ಥಳೀಯ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡರೆ ಬೇರೆಯವರು ಕಾಮಗಾರಿ ನಡೆಸಲು ಬರುವುದಿಲ್ಲ ಎಂದರು.

ಎಂಎಲ್ಸಿ ಹೆಸರು ಹಾಕದಿದ್ದಕ್ಕೆ ಆಕ್ಷೇಪ: ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲಾ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಗೆ ಕೊಳವೆಬಾವಿ ಕೊರೆಸಲು ಅನುದಾನ ಒದಗಿಸಿರುವ ಎಂಎಲ್ಸಿ ಇಂಚರ ಗೋವಿಂದರಾಜು ಹೆಸರು ಅಜೆಂಡಾ ಪ್ರತಿಯಲ್ಲಿ ಕೈಬಿಟ್ಟಿದ್ದಕ್ಕೆ ರಾಕೇಶ್, ಮುರಳಿಗೌಡ ಮತ್ತಿತರರು ಆಕ್ಷೇಪವ್ಯಕ್ತಪಡಿಸಿದರು. ಕ್ಲಾಕ್ ಟವರ್, ಹಳೆಯ ಬಸ್ ನಿಲ್ದಾಣದಲ್ಲಿ ದೊಡ್ಡಗಡಿಯಾರಗಳನ್ನು ಅಳವಡಿಸುವುದು, ಟಿ.ಚನ್ನಯ್ಯರಂಗಮಂದಿರ ಆವರಣದಲ್ಲಿ ಶುದ್ಧ ನೀರಿನ ಟಕ ಸ್ಥಾಪನೆ, ವಿವಿಧೆಡೆ ಕೊಳವೆ ಬಾವಿಗಳಿಗೆ ಪಂಪ್‌ಸೆಟ್, ಪೈಪ್‌ಗಳನ್ನು ಅಳವಡಿಸುವುದು, ವಿವಿಧೆಡೆ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಸಭೆ ಒಪ್ಪಿಗೆ ನೀಡಿತು. ಸಿಬ್ಬಂದಿ ನಟರಾಜ್ ವಿಷಯ ಪ್ರಸ್ತಾಪಿಸಿದರು.