ನ್ಯೂಸ್

ಬೆಂಗಳೂರಿನ ಉತ್ಪನ್ನ..ವಿಶ್ವದ ಅತ್ಯುತ್ತಮ ವಿಸ್ಕಿ!

ಲಂಡನ್​: ಬೆಂಗಳೂರು ಮೂಲದ ಅಮೃತ್ ಡಿಸ್ಟಿಲರೀಸ್ ಲಂಡನ್‌ನಲ್ಲಿ ನಡೆದ 2024 ರ ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಚಾಲೆಂಜ್‌ನಲ್ಲಿ "ವಿಶ್ವದ ಅತ್ಯುತ್ತಮ ವಿಸ್ಕಿ" ಪ್ರಶಸ್ತಿಯನ್ನು ಗೆದ್ದಿದೆ.

ಅಮೃತ್ ಡಿಸ್ಟಿಲರೀಸ್ ನ ಫ್ಯೂಷನ್ ಸಿಂಗಲ್ ಮಾಲ್ಟ್ ವಿಸ್ಕಿ, ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ಜಪಾನ್‌ನ ವಿಶ್ವಪ್ರಸಿದ್ಧ ವಿಸ್ಕಿ ಬ್ರಾಂಡ್‌ಗಳನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಅಮೃತ್ ಸಿಂಗಲ್ ಮಾಲ್ಟ್ ವಿಸ್ಕಿಗೆ ಹೆಸರುವಾಸಿಯಾದ ಬ್ರಾಂಡ್ ಆಗಿದೆ. 29 ನೇ ಆವೃತ್ತಿ ಸ್ಪರ್ಧೆಯಲ್ಲಿ  ಐದು ಚಿನ್ನದ ಪದಕಗಳನ್ನು ಗಳಿಸಿದೆ. ಇದರೊಂದಿಗೆ ಅಮೃತ್ ಡಿಸ್ಟಿಲರೀಸ್ ಐಷಾರಾಮಿ ಸ್ಪಿರಿಟ್‌ಗಳ ಪ್ರಮುಖ ಉತ್ಪಾದಕರಾಗಿ ಜಾಗತಿಕವಾಗಿ ಗಮನ ಸೆಳೆದಿದೆ.

ಅಮೃತ್ ಡಿಸ್ಟಿಲರೀಸ್‌ ಅನ್ನು 1948 ರಲ್ಲಿ ಕರ್ನಾಟಕದವರಾದ ರಾಧಾಕೃಷ್ಣ ಜಗದಾಳೆ ಅವರು ಸ್ಥಾಪಿಸಿದರು. ಇದರ ಬ್ರಾಂದಿ, ವಿಸ್ಕಿಯನ್ನು ಜಪಾನ್, ನೆದರ್ಲ್ಯಾಂಡ್ಸ್, ನಾರ್ವೆ, ಸಿಂಗಾಪು‌ರ್, ಸ್ಪೇನ್, ದಕ್ಷಿಣ ಆಫ್ರಿಕಾ, ಸ್ವೀಡನ್, ಸ್ವಿಟ್ಸರ್ಲೆಂಡ್, ತೈವಾನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ 23 ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಈ ಬ್ರಾಂಡ್‌ಗೆ ಅಂತರರಾಷ್ಟ್ರೀಯ ಅನುಮೋದನೆ ಇದೇ ಮೊದಲಲ್ಲ. 2019 ರಲ್ಲಿ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ 2019 ರ ಬಾರ್ಟೆಂಡರ್ ಸ್ಪಿರಿಟ್ಸ್ ಪ್ರಶಸ್ತಿಗಳಲ್ಲಿ "ವರ್ಷದ ವಿಶ್ವ ವಿಸ್ಕಿ ಪ್ರಶಸ್ತಿ" ಮತ್ತು ಅಮೃತ್ ಡಿಸ್ಟಿಲರೀಸ್ "ವರ್ಷದ ವಿಶ್ವ ವಿಸ್ಕಿ ನಿರ್ಮಾಪಕ' ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.