ಮುಂಬೈ: ಬಾಲಿವುಡ್ ಚಿತ್ರರಂಗದ ಹಿರಿಯ ನಟ, 'ಬಿಗ್ ಬಿ' ಎಂದೇ ಕರೆಯಲ್ಪಡುವ ಅಮಿತಾಭ್ ಬಚ್ಚನ್ (Amitabh Bachchan), ಸದ್ಯ ಚಿತ್ರಗಳಿಂದ ದೂರವಿದ್ದರೂ 'ಕೌನ್ ಬನೇಗಾ ಕರೋಡ್ಪತಿ' ಕಾರ್ಯಕ್ರಮದ ಮೂಲಕ ಅಭಿಮಾನಿಗಳ ಮುಂದೆ ಇಂದಿಗೂ ಹಾಜರಾಗುತ್ತಿರುವುದು ಗಮನಾರ್ಹ. ಹಲವಾರು ಸೂಪರ್ಹಿಟ್, ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ನಟಿಸಿರುವ ಅಮಿತಾಭ್, 1980ರಲ್ಲಿ ತಮ್ಮ ಪಾಲಿಗೆ ಬಂದಿದ್ದ ಸಿನಿಮಾವನ್ನು ಕಥೆ ಕೇಳ್ತಿದ್ದಂತೆ ಬೇಡ ಎಂದಿದ್ದರು.
ಚಿತ್ರದ ಕಥೆ ಕೇಳುತ್ತಿದ್ದಂತೆ ಆಫರ್ ರಿಜೆಕ್ಟ್ ಮಾಡಿದ್ದ ಬಿಗ್ ಬಿ, ನಂತರದಲ್ಲಿ ಸ್ನೇಹಿತನ ಮಾತಿಗೆ, ಸ್ನೇಹಕ್ಕೆ ಬೆಲೆ ಕೊಟ್ಟು ಸಿನಿಮಾಗೆ ಸಹಿ ಹಾಕಿದರು. ಆ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟ ಆರಂಭದಲ್ಲಿ ಫ್ಲಾಪ್ ಆಯಿತು ಎನ್ನುವ ಹಂತಕ್ಕೆ ಹೋಗಿದ್ದೇ ಆದರೂ, ಜಾದೂ ಎಂಬಂತೆ ಪ್ರೇಕ್ಷಕರಿಂದ ತುಂಬಿ, ಬ್ಲಾಕ್ಬಸ್ಟರ್ ಆಗಿದ್ದು ಬಾಲಿವುಡ್ ಚಿತ್ರರಂಗದಲ್ಲಿ ಇತಿಹಾಸ ಬರೆಯಿತು.
ಅದು 1980ರಲ್ಲಿ ತೆರೆಕಂಡ 'ಡು ಔರ್ ಡು ಪಾಂಚ್' ಸಿನಿಮಾ. ಇದರ ಕಥೆಯನ್ನು ಕೇಳಿಯೇ ಅಮಿತಾಭ್ ಒಪ್ಪಿರಲಿಲ್ಲ. ಆದರೆ, ಚಿತ್ರದಲ್ಲಿ ಬಿಗ್ ಬಿ ಆಪ್ತ ಸ್ನೇಹಿತ, ನಿರ್ದೇಶಕ ರಾಕೇಶ್ ಕುಮಾರ್ ಅವರು ಕಾಲಿಟ್ಟಿದ್ದೇ ತಡ ಲೆಕ್ಕಾಚಾರಗಳು ಬದಲಾಯಿತು. ರಿಜೆಕ್ಟ್ ಮಾಡಿದ ಚಿತ್ರವನ್ನು ಮಾಡುವುದಾಗಿ ಬಚ್ಚನ್ ಒಪ್ಪಿಕೊಂಡರು. ಈ ಹಿಂದೆ ಎರಡು ಸೂಪರ್ಹಿಟ್ ಸಿನಿಮಾಗಳನ್ನು ನೀಡಿದ್ದ ಇವರ ಜೋಡಿ, ಮತ್ತೇ ಡು ಔರ್ ಡು ಪಾಂಚ್ ಮೂಲಕ ಒಂದಾಗಿ, ಸಿನಿಮಾದ ದಿಕ್ಕನ್ನೇ ಬದಲಿಸಿದ್ದು ರೋಚಕ.
ಶಶಿಕುಮಾರ್, ಹೇಮಾ ಮಾಲಿನಿ, ಪ್ರವೀನ್ ಬಾಬಿ, ಅಮಿತಾಭ್ ಬಚ್ಚನ್ ಸೇರಿ ಮುಂತಾದವರು ಅಭಿನಯದ ಈ ಚಿತ್ರಮಂದಿರದಲ್ಲಿ ಭರ್ಜರಿ ಓಪನಿಂಗ್ ಪಡೆಯಿತು. ಆದರೆ, ಮೊದಲ ವಾರದಲ್ಲಿ ಬೆರಳೆಣಿಕೆಯಷ್ಟು ಪ್ರೇಕ್ಷಕರಿಂದ ಸೋಲಿನ ಹಾದಿ ಹಿಡಿದಿದ್ದ ಈ ಸಿನಿಮಾ, ನಂತರದಲ್ಲಿ ಹೌಸ್ಫುಲ್ ಪ್ರದರ್ಶನ ಕಂಡು ಚಿತ್ರತಂಡವನ್ನು ಅಚ್ಚರಿಗೆ ದೂಡಿತು. ಅಂದು 1.5 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣಗೊಂಡ ಸಿನಿಮಾ, 3 ಕೋಟಿ ರೂ. ಆದಾಯವನ್ನು ಗಳಿಸಿತು,(ಏಜೆನ್ಸೀಸ್).