ಮುಲ್ಲನ್‌ಪುರ: ಐಪಿಎಲ್ 2026ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಸೋತಿರಬಹುದು. ಆದರೆ, ಆ ಪಂದ್ಯದಲ್ಲಿ ಕೇವಲ 15 ವರ್ಷದ ಬಿಹಾರದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಬಾರಿಸಿದ ಆ ಒಂದು ಇನಿಂಗ್ಸ್ ಇಡೀ ಕ್ರಿಕೆಟ್ ಲೋಕವೇ ತಿರುಗಿ ನೋಡುವಂತೆ ಮಾಡಿದೆ. ಗುಜರಾತ್‌ನ ಬಲಿಷ್ಠ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡಿ 47 ಎಸೆತಗಳಲ್ಲಿ 96 ರನ್ ಚಚ್ಚಿದ ಸೂರ್ಯವಂಶಿ ಆಟಕ್ಕೆ ಈಗ ದಿಗ್ಗಜ ಆಟಗಾರರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಲೆಬಾಗಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿರುವ ಈ ಯುವ ಆಟಗಾರನ ಪ್ರದರ್ಶನಕ್ಕೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್(Amitabh Bachchan) ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಮಿತಾಭ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ಈ ವಯಸ್ಸಿನಲ್ಲಿ ನಾವು ಗಲ್ಲಿ ಕ್ರಿಕೆಟ್ ಕೂಡ ಸರಿಯಾಗಿ ಆಡುತ್ತಿರಲಿಲ್ಲ. ಆದರೆ ಈ ಹುಡುಗ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾನೆ” ಎಂದು ಪ್ರಶಂಸಿಸಿದ್ದಾರೆ. ಅವರ ಈ ಮಾತುಗಳು ಈಗ ಅಭಿಮಾನಿಗಳ ನಡುವೆ ವ್ಯಾಪಕ ಚರ್ಚೆಗೆ ಕಾರಣವಾಗಿವೆ.
ಬಿಹಾರ ಮೂಲದ ವೈಭವ್ ಸೂರ್ಯವಂಶಿ ಈಗಾಗಲೇ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಐಪಿಎಲ್ 2026ರಲ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಅನೇಕ ಮಾಜಿ ಆಟಗಾರರು ಮತ್ತು ತಜ್ಞರಿಂದ ಮೆಚ್ಚುಗೆ ಪಡೆದಿದೆ. ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ವೈಭವ್ ಆಟವನ್ನು “ಗಲ್ಲಿ ಕ್ರಿಕೆಟ್ ಆಡಿದಂತೆ ನಿರ್ಭಯವಾಗಿ ಆಡುತ್ತಾರೆ” ಎಂದು ಹೊಗಳಿದ್ದರು.
ಇನ್ನೊಂದೆಡೆ, ಭಾರತದ ಹಿರಿಯ ಬ್ಯಾಟರ್ ಕೆ.ಎಲ್. ರಾಹುಲ್ ಕೂಡ ಹೊಸ ತಲೆಮಾರಿನ ಕ್ರಿಕೆಟಿಗರ ಧೈರ್ಯಶಾಲಿ ಮನೋಭಾವವನ್ನು ಶ್ಲಾಘಿಸಿದ್ದಾರೆ. ವೈಭವ್ ಸೇರಿದಂತೆ ಯುವ ಆಟಗಾರರು ಯಾವುದೇ ಒತ್ತಡವಿಲ್ಲದೆ ವಿಶ್ವದ ಶ್ರೇಷ್ಠ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಆಟವಾಡುತ್ತಿರುವುದು ಭಾರತೀಯ ಕ್ರಿಕೆಟ್‌ನ ಹೊಸ ಬದಲಾವಣೆಯ ಸಂಕೇತ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ವೈಭವ್ ಸೂರ್ಯವಂಶಿ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನೇಕ ಅಭಿಮಾನಿಗಳು ಅವರನ್ನು ಭಾರತದ ಭವಿಷ್ಯದ ಸೂಪರ್‌ಸ್ಟಾರ್ ಎಂದು ಕರೆಯುತ್ತಿದ್ದಾರೆ. ಕ್ರಿಕೆಟ್ ವಲಯದಲ್ಲೂ ಈ ಯುವ ಪ್ರತಿಭೆಯ ಭವಿಷ್ಯದ ಬಗ್ಗೆ ದೊಡ್ಡ ನಿರೀಕ್ಷೆಗಳು ಮೂಡಿವೆ.
ಕೇವಲ 15 ವರ್ಷದಲ್ಲೇ ದೇಶದಾದ್ಯಂತ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ಗೆ ದೊಡ್ಡ ಆಸ್ತಿಯಾಗುವ ಸಾಧ್ಯತೆ ಇದೆ ಎಂದು ಕ್ರೀಡಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).