ನ್ಯೂಸ್

ನಿಯಮ ಬಿಗಿಯಾದರೂ ನಿಲ್ಲದ ನಕಲು!; ಡಿಪ್ಲೊಮಾದಲ್ಲಿ ಕಾಪಿ ಹೊಡೆದ 402 ವಿದ್ಯಾರ್ಥಿಗಳು; ಕಳೆದ ವರ್ಷಕ್ಕಿಂತ ಈ ಬಾರಿ ಜಾಸ್ತಿ

ಬೆಂಗಳೂರು: ಕರೊನಾ ರಜೆ ಮತ್ತು ಪ್ರಮೋಟ್ ಮೂಡ್​ನಲ್ಲಿದ್ದ ವಿದ್ಯಾರ್ಥಿಗಳು ಪರೀಕ್ಷೆಗೆ ಓದುವುದನ್ನು ಮರೆತು ಪರೀಕ್ಷೆಯಲ್ಲಿ ಕಾಪಿ ಹೊಡೆದು ಪಾಸ್ ಆಗಲು ಮುಂದಾದ ಪರಿಣಾಮ ಈ ವರ್ಷ ನಕಲು ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ ಡಿಪ್ಲೊಮಾ ಪರೀಕ್ಷೆಯಲ್ಲಿ 278 ವಿದ್ಯಾರ್ಥಿಗಳು ನಕಲು ಮಾಡಿದ್ದರು. ಈ ವರ್ಷ 402 ವಿದ್ಯಾರ್ಥಿಗಳು ಸಿಕ್ಕಿ ಬಿದ್ದಿದ್ದಾರೆ. ಇದು ಕೇವಲ ಒಂದು ಅವಧಿಯ ಪರೀಕ್ಷೆಯಾಗಿದೆ. ಮತ್ತೊಂದು ಅವಧಿಯ ಪರೀಕ್ಷೆ ಇತ್ತೀಚೆಗಷ್ಟೇ ಆರಂಭವಾಗಿದ್ದು, ಇದರಲ್ಲಿ ಎಷ್ಟು ವಿದ್ಯಾರ್ಥಿಗಳು ನಕಲು ಮಾಡಿ ಸಿಕ್ಕಿ ಬಿಳುತ್ತಾರೋ ನೋಡಬೇಕಿದೆ.

ಆಗಸ್ಟ್​ನಲ್ಲಿ 2021ರ ಡಿಪ್ಲೊಮಾ ಪರೀಕ್ಷೆಗಳು ನಡೆದಿದ್ದು, 3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದರು. ಪರೀಕ್ಷೆ ವೇಳೆ ವಿದ್ಯಾರ್ಥಿಗಳು ನಕಲು ಮಾಡುವುದಕ್ಕೆ ಚೀಟಿ, ಮೊಬೈಲ್ ಫೋನ್ ಬಳಕೆ, ಎಲೆಕ್ಟ್ರಾನಿಕ್ಸ್ ಉಪಕರಣಗಳ ಬಳಕೆ, ಕ್ಯಾಲಿಕ್ಯುಲೇಟರ್ ಬಳಕೆ ಮಾಡಿರುವುದನ್ನು ಆಧಾರ ಸಮೇತ ಪರೀಕ್ಷಾ ಮೇಲ್ವಿಚಾರಣಾಧಿಕಾರಿಗಳು ಪತ್ತೆ ಹಚ್ಚಿ ಅವರ ಮೇಲೆ ಪರೀಕ್ಷಾ ದುರಾಚಾರದ ಕೇಸ್ ದಾಖಲಿಸಿದ್ದರು.

ಇದನ್ನು ಪರಿಶೀಲಿಸಿದ ತಜ್ಞರ ತಂಡ 402 ವಿದ್ಯಾರ್ಥಿಗಳ ಪೈಕಿ 27 ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಕಾಪಿ ಮಾಡಿಲ್ಲವೆಂಬುದನ್ನು ತಿಳಿದು ಬಂದ ಕಾರಣ ಆ ವಿದ್ಯಾರ್ಥಿಗಳನ್ನು ದೋಷ ಮುಕ್ತ ಮಾಡಿದೆ. ಆದರೆ, ಉಳಿದ 375 ವಿದ್ಯಾರ್ಥಿಗಳಲ್ಲಿ ಕಾಪಿಯ ಗಂಭೀರತೆ ಪರಿಗಣಿಸಿ 332 ವಿದ್ಯಾರ್ಥಿಗಳು ಒಂದು ವಿಷಯಕ್ಕೆ ಮಾತ್ರ ಡಿಬಾರ್ ಮಾಡಲಾಗಿದೆ. 37 ವಿದ್ಯಾರ್ಥಿಗಳಿಗೆ ಸಂಪೂರ್ಣ ಪರೀಕ್ಷೆಯನ್ನೇ ರದ್ದು ಮಾಡಿದೆ.

ಕರೊನಾ ಮೊದಲ ಅಲೆಯಲ್ಲಿ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಲಾಗಿತ್ತು. ಎರಡನೇ ಅಲೆಯಲ್ಲೂ ಪ್ರಮೋಟ್ ಮಾಡುವಂತೆ ಒತ್ತಾಯ ವಿದ್ಯಾರ್ಥಿಗಳಿಂದ ಕೇಳಿ ಬಂದಿತ್ತು. ಆದರೆ, ತಾಂತ್ರಿಕ ಶಿಕ್ಷಣ ಇಲಾಖೆಯು ಆಗಸ್ಟ್​ನಲ್ಲಿ ಪರೀಕ್ಷೆ ನಡೆಸಿತ್ತು. ವಿದ್ಯಾರ್ಥಿಗಳು ಪ್ರಮೋಟ್ ಮಾಡುತ್ತಾರೆ ಎಂಬ ಭ್ರಮೆಯಲ್ಲೇ ಕಾಲ ಕಳೆದು ಓದುವುದರ ಕಡೆ ಗಮನ ನೀಡದೆ, ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಾರೆಂದು ಖಾಸಗಿ ಪಾಲಿಟೆಕ್ನಿಕ್​ನ ಪ್ರಾಂಶುಪಾಲರೊಬ್ಬರು ತಿಳಿಸಿದ್ದಾರೆ.

ನಕಲು ಪ್ರಮಾಣ ಕಮ್ಮಿ: ಒಂದು ಒಳ್ಳೆಯ ವಿಚಾರ ಏನೆಂದರೆ, ಕಳೆದ ಐದು ವರ್ಷದ ಅಂಕಿ-ಅಂಶಗಳನ್ನು ಗಮನಿಸಿದಾಗ ಪ್ರತಿ ವರ್ಷ ನಕಲು ಮಾಡುವ ವಿದ್ಯಾರ್ಥಿಗಳ ಪ್ರಮಾಣ ಕಡಿಮೆಯಾಗುತ್ತಿದೆ. 2017ರಲ್ಲಿ 1247 ವಿದ್ಯಾರ್ಥಿಗಳು ಕಾಪಿ ಮಾಡಿ ಸಿಕ್ಕಿ ಬಿದ್ದಿದ್ದರು. 2021ರಲ್ಲಿ 402 ಇದ್ದಾರೆ. ಮುಂದಿನ ಪರೀಕ್ಷೆಯಲ್ಲಿ ಮತ್ತೆ 400 ವಿದ್ಯಾರ್ಥಿಗಳು ಸಿಕ್ಕರೂ ಸಹ ಅದು ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ, ಕಡಿಮೆಯೇ ಎನ್ನಬಹುದು.

ವಿದ್ಯಾರ್ಥಿಗಳಿಗೆ ಶಿಕ್ಷೆ: ಇಲ್ಲಿ ವಿದ್ಯಾರ್ಥಿಗಳಿಗೆ ದಂಡ ಶುಲ್ಕ ವಿಧಿಸುವುದಿಲ್ಲ. ಬದಲಾಗಿ ಮುಂದಿನ ಪರೀಕ್ಷೆ ಹಾಜರಾತಿಗೆ ಅವಕಾಶ ನೀಡುವುದನ್ನು ರದ್ದು ಮಾಡುತ್ತದೆ. ವಿದ್ಯಾರ್ಥಿಗಳ ದುರಾಚಾರದ ಬಗ್ಗೆ ಶಿಕ್ಷೆ ನೀಡುವ ಪ್ರಮಾಣವನ್ನು 21 ಹಂತದಲ್ಲಿ ನೀಡಲಿದೆ. ಪರೀಕ್ಷೆಯಲ್ಲಿ ಕಾಪಿ ಮಾಡಲು ಚೀಟಿ ತಂದು ಸಿಕ್ಕಿ ಬಿದ್ದು, ಕಾಪಿ ಮಾಡಿಲ್ಲವಾದರೆ ಅವರಿಗೆ ವಿನಾಯಿತಿ ದೊರೆಯಲಿದೆ. ಕಾಪಿ ಮಾಡಿರುವುದು ಖಚಿತವಾದರೆ ಕನಿಷ್ಠ 1 ವಿಷಯದ ಪರೀಕ್ಷೆ ರದ್ದು ಮಾಡುತ್ತದೆ. ಬದಲಿ ವಿದ್ಯಾರ್ಥಿ ಪರೀಕ್ಷೆ ಬರೆದ ಪಕ್ಷದಲ್ಲಿ ಪೊಲೀಸ್ ದೂರು ದಾಖಲು ಮಾಡಿ ಆ ವಿದ್ಯಾರ್ಥಿಗೆ 4 ವರ್ಷ ಪರೀಕ್ಷೆ ಹಾಜರಾಗದಂತೆ ಡಿಬಾರ್ ಮಾಡಲಾಗುತ್ತದೆ.

ಕಾಪಿಯ ವಿವಿಧ ಬಗೆಗಳು: ಪರೀಕ್ಷೆ ಸಮಯದಲ್ಲಿ ನಕಲು ಮಾಡುವುದನ್ನು ತಪ್ಪಿಸಬೇಕೆಂದು ಶಿಕ್ಷಣ ಇಲಾಖೆ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಸೂಚನೆ ನೀಡಿ. ಇದನ್ನು ಕಾರ್ಯರೂಪಕ್ಕೂ ತಂದಿದೆ. ಆದರೂ, ಕಾಪಿ ಮಾಡುವವರು ಮಾತ್ರ ಹೆಚ್ಚಿನ ನಿಯಂತ್ರಣಕ್ಕೆ ಬಂದಿಲ್ಲ. ಇಂದಿಗೂ ವಿದ್ಯಾರ್ಥಿಗಳು ಚೀಟಿ ಬರೆದುಕೊಂಡು ಕಾಪಿ ಮಾಡುತ್ತಿದ್ದಾರೆ. ಸ್ಮಾರ್ಟ್ ವಾಚ್, ಬ್ಲೂಟೂತ್ ಕೋಟ್ ಈ ರೀತಿ ಕಾಪಿ ಹೊಡೆಯುವುದರ ಮಧ್ಯೆಯೂ ಪತ್ರದಲ್ಲಿ ಬರೆದುಕೊಂಡು ಕಾಪಿ ಮಾಡುವ ಹಳೇ ಸಾಂಪ್ರದಾಯವನ್ನು ವಿದ್ಯಾರ್ಥಿಗಳು ಇಂದಿಗೂ ಬಿಟ್ಟಿಲ್ಲ.