Narendra Modi: ತಮ್ಮ 75 ನೇ ಹುಟ್ಟುಹಬ್ಬಕ್ಕೆ ಕರೆ ಮಾಡಿ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಧನ್ಯವಾದ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ-ಅಮೆರಿಕ ಸಂಬಂಧಗಳನ್ನು ಉತ್ತಮಗೊಳಿಸುವ ಬದ್ಧತೆ ಮತ್ತು ಉಕ್ರೇನ್ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕಾದ ನಿಲುವಿಗೆ ಬೆಂಬಲ ನೀಡುತ್ತೇನೆ ಎಂದರು.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ನಿಮ್ಮಂತೆಯೇ, ನಾನು ಕೂಡ ಭಾರತ-ಯುಎಸ್ ಸಮಗ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಬದ್ಧನಾಗಿದ್ದು. ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರದತ್ತ ನಿಮ್ಮ ಉಪಕ್ರಮಗಳನ್ನು ಭಾರತ ಬೆಂಬಲಿಸುತ್ತದೆ ಎಂದು ಭರವಸೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ರಂಪ್, ಪ್ರಧಾನಿ ಮೋದಿಯವರೊಂದಿಗೆ ಅದ್ಬುತ ಮಾತುಕತೆ ನಡೆದಿದ್ದು, ನಡೆಯುತ್ತಿರುವ ಯುದ್ಧವನ್ನು ಪರಿಹರಿಸುವಲ್ಲಿ ಅಮೆರಿಕಾಗೆ ಬೆಂಬಲ ನೀಡುವುದಾಗಿ ತಿಳಿಸಿರುವುದಕ್ಕೆ ಧನ್ಯವಾಧಗಳನ್ನು ಅರ್ಪಿಸಿದ್ದಾರೆ.
ಇದನ್ನೂ ಓದಿ:ರಕ್ತ ದಾನಮಾಡಿ ಜೀವ ಉಳಿಸಿ
ಭಾರತದ ಮೇಲೆ ಅಮೆರಿಕವು ಭಾರೀ ಸುಂಕಗಳನ್ನು ವಿಧಿಸಿರುವ ನಡುವೆ ಪ್ರಧಾನಿ ಮೋದಿ ಕಡೆಯಿಂದ ಈ ಸಂದೇಶವು ಬಂದಿದೆ, ಇತ್ತೀಚೆಗೆ ಮಾತನಾಡಿದ್ದ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ಅಮೆರಿಕದಲ್ಲಿ ಬೆಳೆದ ಜೋಳವನ್ನು ಖರೀದಿಸಲು ಭಾರತ ನಿರಾಕರಿಸಿದರೆ, ಇಲ್ಲಿನ ಮಾರುಕಟ್ಟೆಯ ತನ್ನ ಪ್ರವೇಶವನ್ನು ಕಳೆದುಕೊಳ್ಳಬಹುದು ಎಂದು ಎಚ್ಚರಿಕೆ ನೀಡಿದ್ದರು.
ಸುಂಕ ವಿಧಿಸಿದ ನಂತರ ಮೊದಲ ಬಾರಿಗೆ, ಉಭಯ ದೇಶಗಳ ಮುಖ್ಯಸ್ಥರು, ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳ ಮುಂದಿನ ಹಂತಗಳ ಕುರಿತು ಚರ್ಚಿಸಿದ್ದು, ಇದನ್ನು ಅಮೆರಿಕಾ "ಸಕಾರಾತ್ಮಕ" ಎಂದು ಬಣ್ಣಿಸಿದೆ. ವ್ಯಾಪಾರ ಒಪ್ಪಂದದ ಮಾತುಕತೆಗಳ ಪುನರಾರಂಭವು, ಸಂಬಂಧಗಳಲ್ಲಿನ ಕುಸಿತವನ್ನು ಪರಿಶೀಲಿಸುವ ಪ್ರಯತ್ನಗಳ ನಡುವೆ, ಸಾಮಾನ್ಯ ನೆಲೆಯನ್ನು ಕಂಡುಕೊಳ್ಳುವ ಮತ್ತು ಹಲವಾರು ವಿಷಯಗಳ ಕುರಿತು ತಮ್ಮ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುವ ಎರಡೂ ಕಡೆಯವರ ಉದ್ದೇಶವನ್ನು ಸೂಚಿಸುತ್ತದೆ.
ಅಮೆರಿಕಾ ಮತ್ತು ಭಾರತದ "ವ್ಯಾಪಾರ ಅಡೆತಡೆಗಳನ್ನು" ಪರಿಹರಿಸುವ ಪ್ರಯತ್ನಗಳ ಕುರಿತು ಕಳೆದ ವಾರ ಟ್ರಂಪ್ ಹೇಳಿಕೆಗಳಿಗೆ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ ಹಿನ್ನೆಲೆಯಲ್ಲಿ ವ್ಯಾಪಾರ ಮಾತುಕತೆ ನಡೆಸುವ ನಿರ್ಧಾರ ಬಂದಿದ್ದು, ಮೋದಿಯವರೊಂದಿಗೆ ಮಾತನಾಡಲು ಎದುರು ನೋಡುತ್ತಿರುವುದಾಗಿ ಟ್ರಂಪ್ ಹೇಳಿದ್ದರು.(ಏಜೆನ್ಸೀಸ್)