ನ್ಯೂಸ್

ಟ್ವಿಟರ್​ನ ಹೊಸ ನಿಯಮ ಘೋಷಿಸಿದ ಎಲಾನ್​ ಮಸ್ಕ್​: ದ್ವೇಷದ ಟ್ವೀಟ್​ಗಳಿಗೆ ಬೀಳಲಿದೆ ಕಡಿವಾಣ

ನವದೆಹಲಿ: ಉದ್ಯೋಗಿಗಳ ಸಾಲು ಸಾಲು ರಾಜೀನಾಮೆ ನಡುವೆಯೇ ಟ್ವಿಟರ್​ನ ನೂತನ ಮಾಲೀಕ ಎಲಾನ್​ ಮಸ್ಕ್​, ಹೊಸ ಟ್ವಿಟರ್​ ನೀತಿಯನ್ನು ಘೋಷಣೆ ಮಾಡಿದ್ದಾರೆ.

ಹೊಸ ನೀತಿಯಲ್ಲಿ ವಾಕ್ ಸ್ವಾತಂತ್ರ್ಯ ಇರುತ್ತದೆ ಹೊರತು, ತಲುಪುವ ಸ್ವಾತಂತ್ರ್ಯ ಇರುವುದಿಲ್ಲ ಎನ್ನುವ ಮೂಲಕ ದ್ವೇಷಪೂರಿತ ಟ್ವೀಟ್​ಗಳಿಗೆ ಕಡಿವಾಣ ಹಾಕಲು ಮಸ್ಕ್​ ಮುಂದಾಗಿದ್ದಾರೆ. ನಿನ್ನೆಯಷ್ಟೇ ನೂರಾರು ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ. ಕಠಿಣ ಕೆಲಸದ ನೀತಿ ಹಿನ್ನೆಲೆಯಲ್ಲಿ ಉದ್ಯೋಗಿಗಳು ಟ್ವಿಟರ್​ನಿಂದ ಹೊರ ಬಂದಿದ್ದಾರೆ. ಈಗಾಗಲೇ ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ ಅರ್ಧದಷ್ಟು ಕಡಿತಗೊಳಿಸಲಾಗಿದೆ.

ಹೊಸ ಟ್ವಿಟರ್​ ನೀತಿಯ ಪ್ರಕಾರ ದ್ವೇಷದ ಟ್ವೀಟ್​ಗಳನ್ನು ಡಿಬೂಸ್ಟ್​ ಮತ್ತು ಡಿಮಾನಿಟೈಸ್​ ಮಾಡಲಾಗುತ್ತದೆಯಂತೆ. ಇಲ್ಲಿ ವಾಕ್​ ಸ್ವಾತಂತ್ರ್ಯ ಇರುತ್ತದೆ. ಆದರೆ, ತಲುಪುವ ಸ್ವಾತಂತ್ರ್ಯ (ದ್ವೇಷದ ಟ್ವೀಟ್​ಗಳು) ಇರುವುದಿಲ್ಲ. ನೆಗಿಟಿವ್​​​ ಮತ್ತು ದ್ವೇಷದ ಟ್ವೀಟ್​ಗಳನ್ನು ಡಿಬೂಸ್ಟ್​ ಮತ್ತು ಡಿಮಾನಿಟೈಸ್​ ಮಾಡಲಾಗುವುದು. ಜಾಹೀರಾತು ಮತ್ತು ಇತರೆ ಆದಾಯಗಳನ್ನು ತಡೆಹಿಡಿಯಲಾಗುವುದು. ನೀವು ನಿರ್ದಿಷ್ಟವಾಗಿ ಅದನ್ನು ಹುಡುಕದ ಹೊರತು ನಿಮ್ಮ ಟ್ವೀಟ್ ಅನ್ನು ಕಂಡುಹಿಡಿಯಲಾಗುವುದಿಲ್ಲನ ಮತ್ತು ಇಂಟರ್ನೆಟ್‌ನ ಉಳಿದ ಭಾಗಗಳಿಗಿಂತ ಇದು ಭಿನ್ನವಾಗಿರುವುದಿಲ್ಲ ಎಂದು ಮಸ್ಕ್​ ಅವರು ಟ್ವೀಟ್ ಮಾಡಿದ್ದಾರೆ.

ಈ ನಿಯಮ ವೈಯಕ್ತಿಕ ಟ್ವೀಟ್‌ಗೆ ಮಾತ್ರ ಅನ್ವಯಿಸುತ್ತದೆ ಹೊರತು ಸಂಪೂರ್ಣ ಖಾತೆಗೆ ಅಲ್ಲ ಎಂದು ಮಸ್ಕ್​ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ಕ್ಯಾಪಿಟಲ್ ಹಿಂಸಾಚಾರದ ನಂತರ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಖಾತೆಯನ್ನು​ ನಿಷೇಧ ಮಾಡಲಾಗಿತ್ತು. ಇದೀಗ ಆ ಖಾತೆಯನ್ನು ಹಿಂತೆಗೆದುಕೊಳ್ಳುವ ಭರವಸೆ ನೀಡಿದ ತಿಂಗಳುಗಳ ನಂತರ, ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸಬೇಕೆ ಎಂಬುದರ ಕುರಿತು ಮಸ್ಕ್ ಟ್ವಿಟರ್ ಸಮೀಕ್ಷೆಯನ್ನು ಪೋಸ್ಟ್ ಮಾಡಿದ್ದಾರೆ. (ಏಜೆನ್ಸೀಸ್​)