ನ್ಯೂಸ್

ವಿವಾದದ ನಡುವೆ ಭಾರತ- ನೇಪಾಳ ಗಡಿಯಲ್ಲಿ ಹುಟ್ಟಿಕೊಂಡ ಮತ್ತೊಂದು 'ಬಾರ್ಡರ್​'

ನವದೆಹಲಿ: ಸದ್ಯ ಭಾರತದೊಂದಿಗೆ ನೆರೆ ರಾಷ್ಟ್ರಗಳದ್ದು ಗಡಿ ತಂಟೆ. ಅತ್ತ ಲಡಾಖ್​ನಲ್ಲಿ ಚೀನಾ ಸೇನೆಯನ್ನೇ ಜಮಾಸಿದ್ದರೆ, ಇತ್ತ ನೇಪಾಳ ಸಂಸತ್ತಿನಲ್ಲಿ ಭಾರತದ ಭೂಪ್ರದೇಶವನ್ನು ಒಳಗೊಂಡ ನಕ್ಷೆಯನ್ನು ಮಂಡಿಸಲಾಗಿದೆ.

ಈ ಗಡಿ ವಿವಾದಗಳ ನಡುವೆಯೇ, ನೇಪಾಳ ಹಾಗೂ ಭಾರತದ ನಡುವಿನ ನೋ ಮ್ಯಾನ್ಸ್​ ಲ್ಯಾಂಡ್​ ಅಥವಾ ಅಂತಾರಾಷ್ಟ್ರೀಯ ಗಡಿಯಲ್ಲಿ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇನ್ನೂ ವಿಶೇಷವೆಂದರೆ, ಈ ಮಗುವಿಗೆ ದಂಪತಿ 'ಬಾರ್ಡರ್​' ಎಂದು ಹೆಸರಿಟ್ಟಿದ್ದಾರೆ.

ದಂಪತಿ ಮೂಲತಃ ಉತ್ತರಪ್ರದೇಶದ ಮಹಾರಾಜಾಗಂಜ್​ ಜಿಲ್ಲೆಯವರು. ನೇಪಾಳದ ನವಾಲ್​ಪಾರಸಿಯಲ್ಲಿರುವ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸಕ್ಕೆಂದು ತೆರಳಿದ್ದರು. ಆದರೆ, ಲಾಕ್​ಡೌನ್​ ಕಾರಣದಿಂದಾಗಿ ಕೆಲಸ ಸ್ಥಗಿತವಾಗಿತ್ತು. ಈ ಕಾರಣದಿಂದಾಗಿ ತಮ್ಮೂರಿಗೆ ತೆರಳಲು ಗಡಿ ಭಾಗಕ್ಕೆ ಆಗಮಿಸಿದ್ದರು.

ಪರಿಶೀಲನೆಗಾಗಿ ಗಡಿಯಲ್ಲಿ ನಿಂತಿದ್ದಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಪತಿ ಲಾಲಾರಾಮ್​ ಹಾಗೂ ಸರದಿಯಲ್ಲಿ ನಿಂತಿದ್ದ ಮತ್ತೊಬ್ಬ ಮಹಿಳೆ ಆಕೆಗೆ ಹೆರಿಗೆ ಮಾಡಿಸಿದ್ದಾರೆ. ಬಳಿಕ ಆಕೆಯನ್ನು ನೇಪಾಳದ ನೌತಾನ್ವಾ ಸಮುದಾಯಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಯಿ ಜಮ್​ತಾರಾ ಹಾಗೂ ಗಂಡು ಮಗು ಆರೋಗ್ಯದಿಂದ ಇದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಇದಲ್ಲದೇ, ಈ ದಂಪತಿಗೆ ಇನ್ನಿಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಪುತ್ರ ಇದ್ದಾನೆ.