ನ್ಯೂಸ್

ಸೂಸೈಡ್ ಪಾಡ್​ ಬಳಸಿ ಸಾವಿಗೆ ಶರಣಾದ ಮಹಿಳೆ! ಇದೇ ಮೊದಲ ಕೇಸ್​, ಬಟನ್​ ಒತ್ತಿದ ಬೆನ್ನಲ್ಲೇ ನಡೆದಿದ್ದಿಷ್ಟು…

ನ್ಯೂಯಾರ್ಕ್​​: ಅಮೆರಿಕ ಮೂಲದ 64 ವರ್ಷದ ಮಹಿಳೆಯೊಬ್ಬರು ಸ್ವಿಟ್ಜರ್​ಲೆಂಡ್​ನಲ್ಲಿ (Switzerland) ಸೂಸೈಡ್ ಪಾಡ್ (Suicide Pod) ಬಳಸಿ ಸಾವಿಗೆ ಶರಣಾಗಿದ್ದಾರೆ. ಈ ಯಂತ್ರವನ್ನು ಬಳಸಿ ಮೃತಪಟ್ಟ ಮೊದಲ ಪ್ರಕರಣ ಇದಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹಲವರನ್ನು ಬಂಧಿಸಲಾಗಿದೆ.

ಅಂದಹಾಗೆ ಈ ಸೂಸೈಡ್​ ಪಾಡ್​ (Sarco pod) ಅಥವಾ ಆತ್ಮಹತ್ಯೆ ಕ್ಯಾಪ್ಸುಲ್​ ಅನ್ನು ಹಿಂದೆಂದೂ ಕೂಡ ಬಳಸಿಲ್ಲ. ಮೂಲಗಳ ಪ್ರಕಾರ ಸೋಮವಾರ (ಸೆ.24) ಈ ಸೂಸೈಡ್​ ಪಾಡ್​ ಅನ್ನು ಮೊದಲ ಬಾರಿಗೆ ಬಳಸಲಾಗಿದೆ. ಈ ಪ್ರಕರಣದಲ್ಲಿ ಹಲವರನ್ನು ವಶಕ್ಕೆ ಪಡೆಯಲಾಗಿದ್ದು, ಮಹಿಳೆಯ ಆತ್ಮಹತ್ಯೆಗೆ ಸಹಕರಿಸಿರುವ ಆರೋಪ ಕೇಳಿಬಂದಿದೆ. ಸದ್ಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಸಾರ್ಕೋ ಪಾಡ್​ ಒಂದು ವಿವಾದಾತ್ಮಕ ಸೂಸೈಡ್​ ಪಾಡ್ ಆಗಿದೆ. ಇದನ್ನು ಆತ್ಮಹತ್ಯೆ ಕ್ಯಾಪ್ಸುಲ್​ ಅಂತಾನೂ ಕರೆಯುಲಾಗುತ್ತದೆ. ಇದರೊಳಗೆ ಒಬ್ಬರು ಪ್ರವೇಶಿಸಿ ಬಟನ್ ಒತ್ತಿದ ತಕ್ಷಣ ಸಾವು ಸಂಭವಿಸುತ್ತದೆ. ಸ್ವಿಸ್-ಜರ್ಮನ್ ಗಡಿಯ ಸಮೀಪದಲ್ಲಿರುವ ಮೆರಿಚೌಸೆನ್ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಸೋಮವಾರ ಈ ಸೂಸೈಡ್​ ಪಾಡ್​ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ವಿಟ್ಜರ್​ಲೆಂಡ್​ನಲ್ಲಿ ಅಸಿಸ್ಟೆಡ್ ಡೈಯಿಂಗ್ ದಶಕಗಳಿಂದ ಕಾನೂನುಬದ್ಧವಾಗಿದೆ. ಆದಾಗ್ಯೂ, ಇದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ. ಆದರೆ, ದಯಾಮರಣ ವಿರೋಧಿಗಳು ಈ ಯಂತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪಾಡ್ ಒಳಗಿರುವ ಬಟನ್ ಬಳಸಿ ಆಪರೇಟ್ ಮಾಡಬಹುದು. ಯಾವುದೇ ವೈದ್ಯಕೀಯ ಮೇಲ್ವಿಚಾರಣೆಯಿಲ್ಲದೆ ತಮ್ಮ ಜೀವನವನ್ನು ಕೊನೆಗೊಳಿಸಲು ಇದು ಅನುಮತಿಸುತ್ತದೆ.

ಅಸಿಸ್ಟೆಡ್ ಡೈಯಿಂಗ್ ಗ್ರೂಪ್ ದಿ ಲಾಸ್ಟ್ ರೆಸಾರ್ಟ್ ಸಂಸ್ಥೆಯು ಜುಲೈನಲ್ಲಿ ಜ್ಯೂರಿಚ್‌ನಲ್ಲಿ ಸಾರ್ಕೋ ಪಾಡ್ ಅನ್ನು ಪ್ರಸ್ತುತಪಡಿಸಿತು. ಈ ಕ್ಯಾಪ್ಸೂಲ್​ನಲ್ಲಿ ಆಮ್ಲಜನಕ ಮಟ್ಟ ತೀರಾ ಕಡಿಮೆಯಾಗಿ ಹೈಪೋಕ್ಸಿಯಾ (ಜೀವಕೋಶಕ್ಕೆ ಆಮ್ಲಜನಕ ಲಭ್ಯತೆ ಕುಸಿಯುವುದು) ಮೂಲಕ ಸಾವು ಬರುತ್ತದೆ. ದಯಾ ಮರಣ ಬಯಸಿದವರು ಇಚ್ಛಿಸಿದ ಜಾಗಕ್ಕೆ ಕ್ಯಾಪ್ಸೂಲ್ ಒಯ್ಯಲಾಗುತ್ತದೆ ಎಂದು ಈ ಕ್ಯಾಪ್ಸೂಲ್ ತಯಾರಿಸಿರುವ ಕಂಪನಿ ಹೇಳಿದೆ. ಜೈವಿಕವಿಘಟನೆಯ (ಬಯೋಡಿಗ್ರೆಡೇಬಲ್) ಕ್ಯಾಪ್ಸೂಲ್ ಅನ್ನು ಶವಪೆಟ್ಟಿಗೆಯಾಗಿ ಕಾರ್ಯ ನಿರ್ವಹಿಸುವಂತಾಗಲು ಅದನ್ನು ಬೇಸ್​ನಿಂದ ಬೇರ್ಪಡಿಸಲಾಗುತ್ತದೆ.

‘ಡಾಕ್ಟರ್ ಡೆತ್’: ಆತ್ಮಹತ್ಯೆ ಕೋಶ (ಸೂಸೈಡ್ ಪಾಡ್) ‘ಡಾಕ್ಟರ್ ಡೆತ್’ ಎಂದೇ ಕುಖ್ಯಾತನಾಗಿರುವ ಫಿಲಿಪ್ ನಿಶ್ಚೆಕ್ ಈ ಚಿಂತನೆಯ ಕೂಸು ಈ ಕ್ಯಾಪ್ಸೂಲ್ ಎಂದು ಹೇಳಲಾಗಿದೆ. ನ್ಯೂಜಿಲೆಂಡ್​ನಲ್ಲಿ ಅಸಿಸ್ಟೆಡ್ ಸೂಸೈಡ್ ಕಾನೂನುಬದ್ಧ ವಾಗಿದ್ದು ಕಳೆದ ವರ್ಷ ಸುಮಾರು 1,300 ಜನರು ದಯಾಮರಣ ಸಂಸ್ಥೆಗಳ ಸೇವೆಯನ್ನು ಬಳಸಿಕೊಂಡಿದ್ದಾರೆ. (ಏಜೆನ್ಸೀಸ್​)