ನ್ಯೂಸ್

ಐಸಿಸ್ ಸೇರಲು ಹೊರಟಿದ್ದ ಅಮೆರಿಕನ್ ದಂಪತಿ ! ಮಾರ್ಗದಲ್ಲೇ ಬಂಧನ

ನ್ಯೂ ಜೆರ್ಸಿ : ಐಸಿಸ್ ಆತಂಕವಾದಿ ಸಂಘಟನೆಯನ್ನು ಸೇರುವ ಉದ್ದೇಶದಿಂದ ಅಮೆರಿಕದಿಂದ ಯೆಮೆನ್​ಗೆ ಹೊರಟಿದ್ದ ದಂಪತಿಯನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ. ಐಸಿಸ್​​ನ ಇಸ್ಲಾಮಿಕ್ ರಾಜ್ಯ ಸ್ಥಾಪನೆಯ ವಿಚಾರದಿಂದ ಪ್ರಭಾವಿತನಾಗಿದ್ದ ಎನ್ನಲಾದ 20 ವರ್ಷದ ಜೇಮ್ಸ್ ಬ್ರ್ಯಾಡ್ಲಿ ಮತ್ತು ಆತನ ಹೆಂಡತಿ ಅರ್ವಾ ಮುತಾನಾ(29) ಎಂಬುವರು ಬಂಧಿತ ಆರೋಪಿಗಳು.

ಕಳೆದ ವರ್ಷದಿಂದ, ಜೇಮ್ಸ್ ಬ್ರಾಡ್ಲಿ ರಹಸ್ಯ ಏಜೆಂಟ್​ ಒಬ್ಬನ ಸಂಪರ್ಕದಲ್ಲಿದ್ದು, ಇಸ್ಲಾಮಿಕ್ ಸ್ಟೇಟ್​ನ ಧ್ಯೇಯದಲ್ಲಿ ನಂಬಿಕೆಯನ್ನು ಪುನರುಚ್ಚರಿಸಿದ್ದ. ಅಮೆರಿಕದಲ್ಲಿ ದಾಳಿ ನಡೆಸಲು ಸಿದ್ಧರಿರುವುದಾಗಿ ಹೇಳಿದ್ದು, ವೆಸ್ಟ್ ಪಾಯಿಂಟ್‌ನಲ್ಲಿರುವ ಯುಎಸ್ ಮಿಲಿಟರಿ ಅಕಾಡೆಮಿಯ ಮೇಲೆ ದಾಳಿಯ ಬಗ್ಗೆ ಸಂಭಾಷಣೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ರ್ಯಾಡ್ಲಿ, 2019 ರಿಂದ ‘ಹಿಂಸಾತ್ಮಕ ಉಗ್ರಗಾಮಿ ಅಭಿಪ್ರಾಯಗಳನ್ನು’ ವ್ಯಕ್ತಪಡಿಸಿದ್ದ. ಬ್ರ್ಯಾಡ್ಲಿಯ ಸ್ನೇಹಿತನೊಬ್ಬನನ್ನು 2019 ರಲ್ಲಿ ತಾಲಿಬಾನ್ ಸೇರಲು ಅಫ್ಘಾನಿಸ್ತಾನಕ್ಕೆ ಪ್ರಯಾಣಿಸುವ ಪ್ರಯತ್ನದಲ್ಲಿ ಬಂಧಿಸಿದ್ದ ಎಫ್​ಬಿಐ, ಆಗಿನಿಂದ ಆತನ ಚಲನವಲನಗಳನ್ನು ಗಮನಿಸುತ್ತಾ ಬಂದಿತ್ತು ಎನ್ನಲಾಗಿದೆ. ಕಳೆದ ಜನವರಿ ತಿಂಗಳಲ್ಲಿ ಬ್ರ್ಯಾಡ್ಲಿ ಮುತಾನಾರನ್ನು ವಿವಾಹವಾಗಿದ್ದು, ಇಬ್ಬರೂ ಐಸಿಸ್ ಸಂಘಟನೆಯನ್ನು ಸೇರಲು ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಜರ್ಸಿಯ ನೇವಾರ್ಕ್​ನಿಂದ ಯೆಮೆನ್​​ಗೆ ಹೊರಟಿದ್ದ ಹಡಗನ್ನು ಹತ್ತುವ ಪ್ರಯತ್ನದಲ್ಲಿದ್ದಾಗ ಈ ದಂಪತಿಯನ್ನು ಬಂಧಿಸಿರುವ ಪೊಲೀಸರು, 'ವಿದೇಶಿ ಭಯೋತ್ಪಾದಕ ಸಂಘಟನೆಗೆ ಬೆಂಬಲ ಒದಗಿಸುವ ಸಂಚು' ನಡೆಸಿದ ಆರೋಪ ಹೊರಿಸಿದ್ದಾರೆ. ಅಮೆರಿಕದ ಕಾನೂನಿನಡಿ ಆರೋಪ ಸಾಬೀತಾದಲ್ಲಿ, 20 ವರ್ಷದವರೆಗಿನ ಜೈಲು ಶಿಕ್ಷೆಯ ಅವಕಾಶವಿದೆ ಎನ್ನಲಾಗಿದೆ. (ಏಜೆನ್ಸೀಸ್)