ನ್ಯೂಸ್

ಅಮೆರಿಕದಿಂದ ಬೆಂಗಳೂರಿಗೆ ಬರಲಿದೆ ಮೊದಲ ನಾನ್​ ಸ್ಟಾಪ್​ ವಿಮಾನ

ಬೆಂಗಳೂರು: ಅಕ್ಟೋಬರ್​ ತಿಂಗಳಿನಿಂದ ಬೆಂಗಳೂರು ಮತ್ತು ಅಮೆರಿಕ ನಡುವೆ ನಾನ್​ಸ್ಟಾಪ್​ ವಿಮಾನವೊಂದು ಹಾರಾಟ ನಡೆಸಲಿದೆ. ಅಮೆರಿಕದ ಟಾಪ್​ 3ನೇ ಸ್ಥಾನದಲ್ಲಿರುವ ಅಮೆರಿಕ ಏರ್​ಲೈನ್​ ಸಂಸ್ಥೆಯು ಬೆಂಗಳೂರಿನೊಂದಿಗೆ ವಿಮಾನ ಸಂಪರ್ಕ ಮಾಡಿಕೊಳ್ಳಲಿದೆ.

285 ಸೀಟುಗಳಿರುವ ಅಮೆರಿಕ ಏರ್​ಲೈನ್​ನ ಬೋಯಿಂಗ್​ 787-9 ವಿಮಾನವು ಅಕ್ಟೋಬರ್​ ತಿಂಗಳಿನಿಂದ ಪ್ರತಿದಿನ ಬೆಂಗಳೂರಿನಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದೆ. ಭಾರತದಿಂದ ಅಮೆರಿಕಕ್ಕೆ ತೆರಳಲಿರುವ ಮೊದಲ ನಾನ್​ ಸ್ಟಾಪ್​ ವಿಮಾನ ಎನ್ನುವ ಕೀರ್ತಿ ಈ ವಿಮಾನಕ್ಕೆ ಸಿಗಲಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನವು ಸಿಯಾಟಲ್​ ಟೊಕೊಮಾ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲಿದೆ. ಈ ವಿಮಾನದಿಂದಾಗಿ ಅಮೆರಿಕದ ಸಿಯಾಟಲ್​, ಸ್ಯಾನ್​ ಫ್ರಾನ್ಸಿಸ್ಕೊ, ಸಿಲಿಕಾನ್​ ವ್ಯಾಲಿ, ಡೆನ್ವರ್​ ಸೇರಿ ಅನೇಕ ಸ್ಥಳಗಳಿಗೆ ತೆರಳಲು ಅನುಕೂಲವಾಗಲಿದೆ.

285 ಸೀಟುಗಳ ಈ ವಿಮಾನದಲ್ಲಿ 30 ಸೀಟುಗಳು ಬಿಸಿನೆಸ್​ ಸೀಟುಗಳಾಗಿದ್ದು, 21 ಪ್ರೀಮಿಯಂ ಎಕಾನಮಿ, 36 ಮೈನ್​ ಕ್ಯಾಬಿನ್​ ಎಕ್ಸ್​ಟ್ರಾ ಮತ್ತು 198 ಸೀಟುಗಳು ಮೈನ್​ ಕ್ಯಾಬಿನ್​ ಸೀಟುಗಳಾಗಿರಲಿವೆ. ಇದು ಅಮೆರಿಕ ಏರ್​ಲೈನ್​ ನಡೆಸುವ ಎರಡನೇ ಅತ್ಯಂತ ಉದ್ದದ ಹಾರಾಟವಾಗಿರಲಿದೆ. ಈಗಾಗಲೇ ಡಲ್ಲಾಸ್​ ಹಾಂಗ್​ ಕಾಂಗ್​ಗೆ ವಿಮಾನ ಹಾರಾಟ ನಡೆಸಲಾಗುತ್ತಿದ್ದು ಅದು ಮೊದಲ ಸ್ಥಾನದಲ್ಲಿದೆ.

ಭಾರತದ ವಿಮಾನ ನಿಲ್ದಾಣಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2015ರಲ್ಲಿ ಚೆನ್ನೈನ ವಿಮಾನ ನಿಲ್ದಾಣವನ್ನು ಹಿಂದಿಕ್ಕುವ ಮೂಲಕ ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. (ಏಜೆನ್ಸೀಸ್​)