ನ್ಯೂಸ್

ರಷ್ಯಾ-ಯೂಕ್ರೇನ್ ಸಂಘರ್ಷವಲ್ಲ ಮೋದಿ ಯುದ್ಧ ಎಂದ ಅಮೆರಿಕ!

ವಾಷಿಂಗ್ಟನ್: ಭಾರತದ ಸರಕುಗಳ ರಫ್ತಿನ ಮೇಲೆ ಅಮೆರಿಕ ಶೇ.50 ಸುಂಕ ಜಾರಿಗೊಳಿಸಿದ ಬೆನ್ನಿಗೇ ಶ್ವೇತ ಭವನದ ವಹಿವಾಟು ಸಲಹೆಗಾರ ಪೀಟರ್ ನವಾರೊ, ರಷ್ಯಾ-ಯೂಕ್ರೇನ್ ಸಂಘರ್ಷವನ್ನು ‘ಮೋದಿ ಯುದ್ಧ’ ಎಂದು ಕರೆದಿದ್ದಾರೆ. ರಷ್ಯಾದ ಇಂಧನವನ್ನು ಭಾರತ ಖರೀದಿಸುವುದನ್ನು ಮುಂದುವರಿಸಿರುವುದು ಮಾಸ್ಕೋದ ಸೇನಾ ಆಕ್ರಮಣಶೀಲತೆಯನ್ನು ಉತ್ತೇಜಿಸಿದೆ ಎಂದೂ ಪೀಟರ್ ಹೇಳಿದ್ದಾರೆ.

ರಷ್ಯಾದಿಂದ ಇಂಧನ ಖರೀದಿಸುವುದನ್ನು ಭಾರತ ಸ್ಥಗಿತಗೊಳಿಸಿದರೆ ಸುಂಕದಲ್ಲಿ ಶೇ.25 ಕಡಿತ ಆಗಲಿದೆ ಎನ್ನುವ ಮೂಲಕ ಅವರು ಭಾರತದ ಮೇಲೆ ಪರೋಕ್ಷವಾಗಿ ಒತ್ತಡವನ್ನೂ ಹೇರಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಭಾರತದ ತೈಲ ಖರೀದಿ ಹಣವನ್ನು ರಷ್ಯಾ ತನ್ನ ಯುದ್ಧ ಯಂತ್ರಗಳ ಖರೀದಿಗೆ ಬಳಸುತ್ತಿದೆ. ಭಾರತದ ಕೃತ್ಯದಿಂದ ಅಮೆರಿಕದಲ್ಲಿ ವರ್ತಕರು ಹಾಗೂ ಗ್ರಾಹಕರು ಎಲ್ಲರೂ ಕಳೆದುಕೊಳ್ಳುತ್ತಿದ್ದಾರೆ. ಭಾರತದ ಅಧಿಕ ಸುಂಕದಿಂದ ನಮ್ಮ ಉದ್ಯೋಗ, ಕಾರ್ಖಾನೆ, ಆದಾಯ ಮತ್ತು ಅಧಿಕ ವೇತನಕ್ಕೆ ಕುತ್ತಾಗುವುದರಿಂದ ಕಾರ್ವಿುಕರ ನಷ್ಟವೂ ಆಗುತ್ತಿದೆ. ಅಲ್ಲದೆ ಮೋದಿ ಯುದ್ಧಕ್ಕೆ ನಾವು ಹಣ ತೆರಬೇಕಾದ್ದರಿಂದ ತೆರಿಗೆದಾರರೂ ನಷ್ಟ ಅನುಭವಿಸುತ್ತಿದ್ದಾರೆ ಎಂದು ಪೀಟರ್ ಹೇಳಿದ್ದಾರೆ. ನಾವು ಯಾರಿಂದಾದರೂ ತೈಲ ಖರೀದಿಸುತ್ತೇವೆ ಎಂದು ಭಾರತದವರು ತೋರುತ್ತಿರುವ ದುರಹಂಕಾರ ನಮಗೆ ಸಮಸ್ಯೆಯಾಗಿದೆ ಎಂದೂ ಪೀಟರ್ ಭಾರತವನ್ನು ಉದ್ದೇಶಿಸಿ ಹೇಳಿದ್ದಾರೆ.

ಟ್ರಂಪ್ ವಿರುದ್ಧ ಅಮೆರಿಕದಲ್ಲೇ ಟೀಕೆ

ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕಾಗಿ ಅಮೆರಿಕ ಭಾರತವನ್ನು ಪ್ರತ್ಯೇಕಿಸಿದ್ದಕ್ಕಾಗಿ ಅಮೆರಿಕದ ವಿದೇಶಾಂಗ ವ್ಯವಹಾರಗಳ ಸದನ ಸಮಿತಿಯ ಡೆಮಾಕ್ರಾಟ್​ಗಳು ಡೊನಾಲ್ಡ್ ಟ್ರಂಪ್ ಮತ್ತು ಅವರ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೀನಾ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿದ್ದರೂ ಚೀನಾ ವಿರುದ್ಧ ಅಮೆರಿಕ ಅಂಥ ಯಾವುದೇ ದಂಡನಾತ್ಮಕ ಕ್ರಮ ಅನುಸರಿಸುತ್ತಿಲ್ಲ. ಭಾರತದ ವಿರುದ್ಧ ಅಮೆರಿಕ ವಿಧಿಸುತ್ತಿರುವ ಸುಂಕ ಅಮೆರಿಕನ್ನರಿಗೆ ನೋವುಂಟು ಮಾಡುತ್ತಿದೆ ಮಾತ್ರವಲ್ಲ, ಇದು ಎರಡು ದಶಕಗಳ ದ್ವಿಪಕ್ಷೀಯ ಪ್ರಯತ್ನಗಳಿಂದ ಉಂಟಾದ ಭಾರತ-ಅಮೆರಿಕದ ಸಂಬಂಧವನ್ನೂ ಹಾಳುಗೆಡಹುತ್ತಿದೆ ಎಂದು ಡೆಮಾಕ್ರಾಟ್​ಗಳು ಹೇಳಿದ್ದಾರೆ.

ಅಮೆರಿಕ ಮಣಿಯದು...

ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಹಿನ್ನೆಲೆಯಲ್ಲಿ ಭಾರತ ತನ್ನ ಪಟ್ಟು ಸಡಿಲಿಸದಿದ್ದರೆ ಭಾರತೀಯ ಸರಕುಗಳ ರಫ್ತಿನ ಮೇಲೆ ಸುಂಕ ವಿಧಿಸುವ ಕುರಿತ ನಿರ್ಧಾರವನ್ನೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಡಿಲಿಸುವುದಿಲ್ಲ ಎಂದು ಅಮೆರಿಕದ ರಾಷ್ಟ್ರೀಯ ಆರ್ಥಿಕ ಮಂಡಳಿ ನಿರ್ದೇಶಕ ಕೆವಿನ್ ಹ್ಯಾಸೆಟ್ ಹೇಳಿದ್ದಾರೆ.