ನ್ಯೂಸ್

ಅಮೆರಿಕದಲ್ಲಿ ಬದಲಾವಣೆ ಪಥ: ಬೈಡೆನ್-ಕಮಲಾ ಪರ್ವ ಶುರು

ವಾಷಿಂಗ್ಟನ್: ಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆ ಬದಲಾವಣೆ ಪರ್ವಕ್ಕೆ ತೆರೆದುಕೊಂಡಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಅವಧಿ ಮುಕ್ತಾಯವಾಗಿದ್ದು, ರಿಪಬ್ಲಿಕನ್ನರ ಆಳ್ವಿಕೆ ಈ ಸಲ ನಾಲ್ಕು ವರ್ಷಕ್ಕೆ ಕೊನೆಗೊಂಡಿದೆ. ಜೋ ಬೈಡೆನ್ ಅಧ್ಯಕ್ಷರಾಗಿ ಮತ್ತು ಭಾರತ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸುವುದರೊಂದಿಗೆ ಡೆಮಾಕ್ರಟನ್ನರ ಆಡಳಿತ ಬುಧವಾರದಿಂದ ಶುರುವಾಗಿದೆ. ಪ್ರಮಾಣ ವಚನ ಕಾರ್ಯಕ್ರಮ ಮತ್ತು ಸಂಬಂಧಿತ ವಿದ್ಯಮಾನಗಳ ವಿವರ ಇಲ್ಲಿದೆ.

ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡೆನ್ (78) ಮತ್ತು 49ನೇ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ (56) ಪ್ರಮಾಣ ವಚನ ಸ್ವೀಕಾರ ಸಮಾರಂಭ ಕ್ಯಾಪಿಟಲ್ ಹಿಲ್​ನ ವೆಸ್ಟ್ ಫ್ರಂಟ್​ನಲ್ಲಿ ಬುಧವಾರ ನಡೆಯಿತು. ಇದು ಐತಿಹಾಸಿಕ 59ನೇ ಪದಗ್ರಹಣ ಸಮಾರಂಭವಾಗಿತ್ತು, ಅಮೆರಿಕದ ಕಾಲಮಾನ ಮಧ್ಯಾಹ್ನ 12 ಗಂಟೆಗೆ (ಭಾರತದ ಕಾಲಮಾನ ರಾತ್ರಿ 10.30) ಪ್ರಮಾಣ ವಚನ ಸ್ವೀಕರಿಸಿದರು. ಮೊದಲು ಕಮಲಾ ಹ್ಯಾರಿಸ್​ಗೆ ಸುಪ್ರೀಂಕೋರ್ಟ್​ನ ಅಸೋಸಿಯೇಟ್ ಜಸ್ಟೀಸ್ ಸೋನಿಯಾ ಸೊಟೊಮೇಯರ್ ಪ್ರಮಾಣ ವಚನವನ್ನು ಓಥ್ಸ್ ಆಫ್ ಆಫೀಸಿನಲ್ಲಿ ಬೋಧಿಸಿದರು. ನಂತರ ಜೋ ಬೈಡೆನ್​ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಪ್ರಮಾಣ ವಚನವನ್ನು ಯುಸ್ ಕ್ಯಾಪಿಟಲ್​ನ ವೆಸ್ಟ್ ಫ್ರಂಟ್​ನಲ್ಲಿ ಬೋಧಿಸಿದರು. ಡೊನಾಲ್ಡ್ ಟ್ರಂಪ್ (74) ಉತ್ತರಾಧಿಕಾರಿಯಾಗಿರುವ ಬೈಡೆನ್ ಅಮೆರಿಕದ ವಯೋವೃದ್ಧ ಅಧ್ಯಕ್ಷರೆನಿಸಿಕೊಂಡಿದ್ದಾರೆ.

ಸೆಕೆಂಡ್​ ಜೆಂಟಲ್​ಮನ್​ ಡೌಗ್​ ಎಮ್​ಹೋಫ್​, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಮತ್ತು ಅಧ್ಯಕ್ಷ ಜೋ ಬೈಡೆನ್​, ಫಸ್ಟ್ ಲೇಡಿ ಡಾ.ಜಿಲ್​ ಬೈಡೆನ್​.

ಅಮೆರಿಕದ ಕಾಲಮಾನ ಬೆಳಗ್ಗೆ 10.30ಕ್ಕೆ ಪ್ರಮಾಣ ವಚನದ ಕಾರ್ಯಕ್ರಮ ಶುರುವಾಯಿತು. ನೇವಿ ಸೂಟ್ ಉಡುಪು, ಅದರ ಮೇಲೆ ನೇವಿ ಓವರ್ ಕೋಟ್ ಧರಿಸಿ ಜೋ ಬೈಡೆನ್ ಸ್ಥಳಕ್ಕೆ ಆಗಮಿಸಿದ್ದರು. ಆ ಎರಡೂ ಉಡುಪನ್ನು ಡಿಸೈನರ್ ರಾಲ್ಪ್ ಲಾರೆನ್ ವಿನ್ಯಾಸಗೊಳಿಸಿದ್ದಾರೆ. ಇದೇ ರೀತಿ, ಫಸ್ಟ್ ಲೇಡಿ ಡಾ.ಜಿಲ್ ಬೈಡೆನ್ ಸಾಗರ ನೀಲಿ ಬಣ್ಣದ ಉಣ್ಣೆ ಕೋಟ್ ಧರಿಸಿದ್ದರು. ಅಲೆಕ್ಸಾಂಡ್ರಾ ಓ ನೈಲ್ ವಿನ್ಯಾಸಗೊಳಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನದ ಹೊಣೆಗಾರಿಕೆ ಹೊರುತ್ತಿರುವ ಮೊಟ್ಟ ಮೊದಲ ಮಹಿಳೆ ಕಮಲಾ ಹ್ಯಾರಿಸ್. ಮೊದಲ ಕಪು್ಪ ವರ್ಣೀಯ, ಮೊದಲ ದಕ್ಷಿಣ ಏಷ್ಯನ್ ಅಮೆರಿಕನ್ ಎಂಬ ಕೀರ್ತಿಗೂ ಭಾಜನರು. ಎಲೆಗಂಟ್ ಸಿಗ್ನೇಚರ್ ಸ್ಟೈಲ್ ಬ್ಲೇಝುರ್ಸ್ ಧರಿಸಿದ ಕಮಲಾ ಗಮನಸೆಳೆದರು. ಕಮಲಾ ಅವರ ಸ್ಟೈಲ್ ಬಗ್ಗೆಯೇ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಸೂಸಾನ್ ಇ ಕೆಲ್ಲಿ ತಮ್ಮ ಬ್ಲಾಗ್​ನಲ್ಲಿ, ಕಮಲಾ ಅವರನ್ನು ಬಟ್ಟೆ ಧರಿಸಿರುವುದಲ್ಲ, ಬದಲಾಗಿ ಕಮಲಾ ಅವರೇ ಬಟ್ಟೆಯನ್ನು ಧರಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

ಏಕತೆ ಚೊಚ್ಚಲ ಭಾಷಣದ ತಿರುಳು

ಅಧ್ಯಕ್ಷರಾಗಿ ಜೋ ಬೈಡೆನ್ ಅವರ ಚೊಚ್ಚಲ ಭಾಷಣದ ತಿರುಳು ‘ಏಕತೆ’. ಸದ್ಯದ ರಾಜಕೀಯ ಬಿಕ್ಕಟ್ಟಿನ ಸನ್ನಿವೇಶವನ್ನು ಉಲ್ಲೇಖಿಸಿ ಮಾತನಾಡಿ ಅಮೆರಿಕನ್ನರು ಒಟ್ಟಾಗಿ ಐಕ್ಯತೆಯನ್ನು ಪ್ರದರ್ಶಿಸಬೇಕು ಎಂದರು. ಅವರ ಭಾಷಣ 20ನಿಮಿಷ ಇತ್ತು. ‘ಅಮೆರಿಕ ಯುನೈಟೆಡ್’ ಎಂಬುದು ಒಟ್ಟಾರೆ ಭಾಷಣದ ಥೀಮ್ ಆಗಿತ್ತು.

ಭಾಷಣದ ಹೊಣೆಗಾರಿಕೆ ವಿನಯ್ ರೆಡ್ಡಿಗೆ

ಬೈಡೆನ್ ಅವರ ಭಾಷಣವನ್ನು ಭಾರತ ಮೂಲದ ಅಮೆರಿಕನ್ ಭಾಷಣ ಬರಹಗಾರ ವಿನಯ್ ರೆಡ್ಡಿ ಸಿದ್ಧಪಡಿಸಿದ್ದಾರೆ. ಬೈಡೆನ್ 2013-2017ರಲ್ಲಿ ಉಪಾಧ್ಯಕ್ಷರಾಗಿದ್ದಾಗ ವಿನಯ್ ರೆಡ್ಡಿ ಭಾಷಣ ಬರೆದುಕೊಟ್ಟಿದ್ದರು. ಈ ಬಾರಿ ಅವರನ್ನೇ ಪ್ರೆಸಿಡೆನ್ಶಿಯಲ್ ಸ್ಪೀಚ್ ರೈಟರ್ ಆಗಿ ಬೈಡೆನ್ ನೇಮಕ ಮಾಡಿದ್ದರು. ಚುನಾವಣಾ ಪ್ರಚಾರದಲ್ಲೂ ರೆಡ್ಡಿ ಪ್ರಚಾರ ಭಾಷಣ ಸಿದ್ಧಪಡಿಸಿ ನೀಡಿದ್ದರು.

ಕಮಲಾ ಅಜ್ಜನ ಊರಲ್ಲಿ ಸಂಭ್ರಮ

ಅಮೆರಿಕ ಅಧ್ಯಕ್ಷ-ಉಪಾಧ್ಯಕ್ಷರ ಪ್ರಮಾಣ ಸಮಾರಂಭದ ಕಾರಣ ತಮಿಳುನಾಡಿನ ತಿರುವರೂರ್ ಜಿಲ್ಲೆಯ ಮನ್ನಾರ್​ಗುಡಿ ಮತ್ತು ತುಳಸೇಂತಿರಪುರಂ-ಪೈನಂಗಾಡು ಗ್ರಾಮಗಳ ವ್ಯಾಪ್ತಿಯಲ್ಲಿ ಸಂಭ್ರಮ ನೆಲೆಸಿದೆ. 10 ಕಿ.ಮೀ. ರಸ್ತೆ ಉದ್ದಕ್ಕೂ ಕಮಲಾ ಅವರ ಬಾಲ್ಯದ ಫೋಟೋಗಳು, ಅಮೆರಿಕದಲ್ಲಿನ ಇತ್ತೀಚಿನ ಫೋಟೋಗಳಿರುವ ಡಿಜಿಟಲ್ ಫ್ಲೆಕ್ಸ್ ರಾರಾಜಿಸುತ್ತಿವೆ. ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಗೋಪಾಲನ್ ತವರು ಇದಾಗಿದ್ದು, ಸಂಬಂಧಿಕರು ಇಲ್ಲೇ ನೆಲೆಸಿದ್ದಾರೆ. ಮನೆಗಳ ಎದುರು ರಂಗೋಲಿ ಹಾಕಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಕಮಲಾ ಫೋಟೋಗಳಿರುವ ಫಲಕಗಳು ರಾರಾಜಿಸುತ್ತಿವೆ. ಕಮಲಾ ಅಜ್ಜ ಪಿ.ವಿ.ಗೋಪಾಲನ್ ತುಳಸೇಂತಿಪುರಂ ಗ್ರಾಮದಿಂದ ಯೌವನದಲ್ಲೇ ಕೆಲಸದ ನಿಮಿತ್ತ ತೆರಳಿದವರು. ಅಜ್ಜಿ ರಾಜಮ್ಮ ಪೈನಂಗಾಡು ಗ್ರಾಮದವರು. ಆದಾಗ್ಯೂ, ಗ್ರಾಮದಲ್ಲಿ ಇನ್ನೂ ಸಂಬಂಧಿಕರಿದ್ದು, ಸಂಭ್ರಮಿಸುತ್ತಿದ್ದಾರೆ.

4 ವರ್ಷಗಳ ನಂತರ ಡಿಸಿಗೆ ಬೈಡೆನ್

ಡೆಲಾವೇರ್​ನಲ್ಲಿ ಚುಟುಕು ಭಾವನಾತ್ಮಕ ಭಾಷಣ ಮಾಡಿದ ಬೈಡೆನ್, 12 ವರ್ಷಗಳ ಹಿಂದೆ ಬರಾಕ್ ಒಬಾಮ ಅವರು ಉಪಾಧ್ಯಕ್ಷರಾಗಿ ತನ್ನೊಂದಿಗೆ ನೀವು ಇರಬೇಕೆಂದು ಹೇಳಿದಾಗ ವಾಷಿಂಗ್ಟನ್ ಡಿಸಿಗೆ ಹೋಗಿದ್ದೆ. ಅದಾಗಿ ಎರಡು ಅವಧಿಗೆ ಉಪಾಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿ ನಾಲ್ಕು ವರ್ಷಗಳ ಹಿಂದೆ ಡೆಲಾವೇರ್​ಗೆ ವಾಪಸಾಗಿದ್ದೆ. ಈಗ ಮತ್ತೆ ಅಲ್ಲಿಗೇ ಹೋಗುತ್ತಿದ್ದೇನೆ. ಅಂದು ಕಪು್ಪವರ್ಣದ ಅಧ್ಯಕ್ಷನೊಂದಿಗೆ ಕೆಲಸ ಮಾಡಿದ್ದೆ. ಈಗ ಕಪು್ಪವರ್ಣದ ಉಪಾಧ್ಯಕ್ಷೆಯೊಂದಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಬೈಡೆನ್​ಗೆ ಸರ್ಕಾರಿ ವಿಮಾನ ನೀಡದ ಟ್ರಂಪ್!

ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ತಮ್ಮ ಊರಾದ ಡೆಲಾವೇರ್​ನಿಂದ ವಾಷಿಂಗ್ಟನ್ ಡಿಸಿಗೆ ಮಂಗಳವಾರ ಆಗಮಿಸುವುದಕ್ಕೆ ಸರ್ಕಾರಿ ವಿಮಾನ ನೀಡುವುದಿಲ್ಲ ಎಂದು ಅಧ್ಯಕ್ಷ ಟ್ರಂಪ್ ನಿರಾಕರಿಸಿ ತಮ್ಮ ದ್ವೇಷವನ್ನು ಮತ್ತೊಮ್ಮೆ ಪ್ರಕಟಿಸಿದ್ದಾರೆ. ವಾಡಿಕೆ ಪ್ರಕಾರ ಅಧ್ಯಕ್ಷ ಟ್ರಂಪ್ ಅವರು ಬೈಡೆನ್​ಗೆ ಏರ್ ಫೋರ್ಸ್ ಬೋಯಿಂಗ್ 757 ವಿಮಾನ ಒದಗಿಸಬೇಕಾಗಿತ್ತು. ಆದರೆ, ಅದನ್ನು ನಿರಾಕರಿಸಿದ ಕಾರಣ ಬೈಡೆನ್ ಕೊನೆಗೆ ಖಾಸಗಿ ಬೋಯಿಂಗ್ 737 ವಿಮಾನದಲ್ಲಿ ವಾಷಿಂಗ್ಟನ್ ಡಿಸಿಗೆ ಆಗಮಿಸಿದರು. ಟ್ರಂಪ್ ಅವರನ್ನು ಕರೆಯಿಸಿಕೊಳ್ಳಲು ಒಬಾಮ ಆಡಳಿತ 2017ರ ಜನವರಿಯಲ್ಲಿ ನ್ಯೂಯಾರ್ಕ್​ಗೆ ಏರ್ ಫೋರ್ಸ್ ವಿಮಾನವನ್ನೇ ಕಳುಹಿಸಿತ್ತು.

ಶ್ವೇತಭವನದಲ್ಲಿ ನಿಶ್ಚಿತಾರ್ಥ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಾವಧಿಯ ಕೊನೆಯ ಪೂರ್ಣದಿನವಾದ ಜನವರಿ 19ರಂದು 27 ವರ್ಷದ ಟಿಫಾನಿ ಟ್ರಂಪ್ ನಿಶ್ಚಿತಾರ್ಥದ ಸುದ್ದಿ ಯನ್ನು ಸಾಮಾಜಿಕ ತಾಣದಲ್ಲಿ ಪ್ರಕಟಿಸಿದ್ದಾರೆ. ಲೆಬನಾನಿನ ಬಿಜಿನೆಸ್ ಎಕ್ಸಿಕ್ಯೂಟಿವ್ 23 ವರ್ಷದ ಮೈಕೆಲ್ ಬೌಲೋಸ್ ಅವರೊಂದಿಗೆ ನಿಶ್ಚಿತಾರ್ಥ ನಡೆಯಿತು. ಮೈಕೆಲ್ ಶ್ವೇತ ಭವನದ ರೋಸ್ ಗಾರ್ಡನ್​ನಲ್ಲಿ ಟಿಫಾನಿಗೆ 8.80 ಕೋಟಿ ರೂಪಾಯಿ ಮೌಲ್ಯದ 13 ಕ್ಯಾರಟ್ ಎಮರಾಲ್ಡ್ ಕಟ್ ಡೈಮಂಡ್ ಉಂಗುರವನ್ನು ತೊಡಿಸಿ ವಿವಾಹ ನಿವೇದನೆ ಮಾಡಿಕೊಂಡಿದ್ದರು. ಈ ಉಂಗುರವನ್ನು ದುಬೈನಿಂದ ತರಿಸಿಕೊಂಡಿದ್ದರು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಎರಡನೇ ಪತ್ನಿ ಮಾರ್ಲ ಮ್ಯಾಪೆಲ್ಸ್ ದಾಂಪತ್ಯದ ಏಕೈಕ ಕುಡಿ ಟಿಫಾನಿ. ಕಳೆದ ವರ್ಷ ಕಾನೂನು ಪದವಿ ಪೂರ್ಣಗೊಳಿಸಿದ್ದು, ಸದ್ಯ ರಿಸರ್ಚ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಶುಭ ಹಾರೈಸಿದ ಟ್ರಂಪ್

ಹೊಸ ಸರ್ಕಾರಕ್ಕೆ ಅಧ್ಯಕ್ಷ ಟ್ರಂಪ್ ಶುಭ ಹಾರೈಸಿದ ವಿಡಿಯೋವನ್ನು ಶ್ವೇತಭವನ ಪ್ರಕಟಿಸಿದೆ. 20 ನಿಮಿಷಗಳ ವಿಡಿಯೋದಲ್ಲಿ ಅವರು, ನಾನು ಬಹಳ ಕಠಿಣವೆನಿಸುವ ಸಮರಗಳನ್ನು ಎದುರಿಸಿದೆ. ದುರ್ಬರವೆನಿಸುವ ನಿರ್ಧಾರಗಳನ್ನು ನೀವು ನನ್ನನ್ನು ಈ ಸ್ಥಾನಕ್ಕೆ ಚುನಾಯಿಸಿದ್ದೀರಿ ಎಂಬ ಕಾರಣಕ್ಕೆ ತೆಗೆದುಕೊಂಡಿರುವೆ. ನಿಮ್ಮ ಅಗತ್ಯಗಳೇ ನನ್ನ ಮೊಟ್ಟ ಮೊದಲ ಮತ್ತು ಕಟ್ಟಕಡೆಯ ನಿರ್ಧಾರದ ವಿಷಯವೂ ಆಗಿತ್ತು. 45ನೇ ಅಧ್ಯಕ್ಷನಾಗಿ ಅವಧಿಯನ್ನು ಪೂರೈಸಿದ್ದು, ನಾವೆಲ್ಲರೂ ಒಟ್ಟಾಗಿ ದೇಶವನ್ನು ಸರಿಯಾದ ರೀತಿ ಮುನ್ನಡೆಸಿದ್ದೇವೆ ಎನ್ನುವ ಹೆಮ್ಮೆ ಯೊಂದಿಗೆ ನಿಮ್ಮ ಎದುರು ನಿಂತಿದ್ದೇನೆ. ಹೊಸ ಸರ್ಕಾರ ರಚನೆಯಾಗುತ್ತಿದೆ. ಅವರಿಗೆ ಶುಭವಾಗಲಿ ಎಂದು ಹೇಳಿರುವ ದೃಶ್ಯವಿದೆ.

ಹಿಂಸಾಚಾರ ಖಂಡಿಸಿ, ಸಾಧನೆ ವಿವರಿಸಿದ್ರು

ವಿದಾಯ ಭಾಷಣದ ವಿಡಿಯೋ ದಲ್ಲಿ ಅವರು ಕ್ಯಾಪಿಟಲ್ ಹಿಲ್ ಹಿಂಸಾಚಾರದ ಘಟನೆಯನ್ನು ಮತ್ತೆ ಖಂಡಿಸಿದ್ದಾರೆ. ರಾಜಕೀಯ ಹಿಂಸಾಚಾರವಾದರೂ ಅಂಥದ್ದನ್ನು ತಾಳಿಕೊಳ್ಳಲಾಗದು ಎಂದು ಖಂಡಿಸಿರುವ ಟ್ರಂಪ್, ನಾಲ್ಕು ವರ್ಷದ ಅವಧಿಯಲ್ಲಿ ಮಾಡಿರುವ ಸಾಧನೆಗಳ ಪಟ್ಟಿಯನ್ನು ಚುಟುಕಾಗಿ ವಿವರಿಸಿದ್ದ್ದಾರೆ. ಅಮೆರಿಕನ್ನರಿಗೆ ಆದ್ಯತೆ ನೀಡಿ, ಉದ್ಯೋಗ ಒದಗಿಸುವ ಪ್ರಯತ್ನ ಮಾಡಿದ್ದು, ತೆರಿಗೆ ಕಡಿತಗೊಳಿಸಿರುವಂಥದ್ದು ಇತ್ಯಾದಿ ಅನೇಕ ವಿಚಾರಗಳನ್ನು ಅವರು ಉಲ್ಲೇಖಿಸಿದ್ದಾರೆ.

ಕಣ್ಣೀರಿಟ್ಟ ಇವಾಂಕಾ

ಆಂಡ್ರೂಸ್ ವಾಯುನೆಲೆಯಲ್ಲಿ ಟ್ರಂಪ್ ದಂಪತಿ ಕೊನೆಯ ವಿದಾಯ ಭಾಷಣ ಮಾಡುತ್ತಿದ್ದ ವೇಳೆ ಕೆಳಗೆ ಅಭಿಮಾನಿಗಳ ಸನಿಹದಲ್ಲೇ ಟ್ರಂಪ್ ಅವರ ಮಕ್ಕಳು, ಸಂಬಂಧಿಕರು ನಿಂತಿದ್ದರು. ಟ್ರಂಪ್ ಅವರ ಮಾತುಗಳನ್ನು ಆಲಿಸುತ್ತ ಇವಾಂಕಾ ಟ್ರಂಪ್ ಭಾವುಕರಾದ ದೃಶ್ಯವೂ ಗಮನಸೆಳೆಯಿತು.

ಭಾವುಕರಾದ ಬೈಡೆನ್

ಡೆಲಾವೇರ್​ನಿಂದ ಹೊರಡುವ ವೇಳೆ ಮೇಜರ್ ಜೋಸೆಫ್ ಆರ್ ಬ್ಯೂ ಬೈಡೆನ್ ಐಐಐ ನ್ಯಾಷನಲ್ ಗಾರ್ಡ್/ರಿಸರ್ವ್ ಸೆಂಟರ್​ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದರು. 2015ರಲ್ಲಿ ಮೃತಪಟ್ಟ ಮಗ ಬ್ಯೂ ಬೈಡೆನ್ ನೆನಪು ಮಾಡಿಕೊಂಡು ಭಾವುಕರಾಗಿದ್ದರು. 46ನೇ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ವಾಷಿಂಗ್ಟನ್ ಡಿಸಿಗೆ ತೆರಳುತ್ತಿರುವೆ. ಎಂದಿದ್ದರೂ ನಾನು ಡೆಲಾವೇರ್ ರಾಜ್ಯದ ಮಗನಾಗಿ ಹೊಣೆಗಾರಿಕೆಯೊಂದಿಗೆ ಕೆಲಸ ನಿರ್ವಹಿಸುವೆ ಎಂದು ಹೇಳಿದರು. ಬೈಡೆನ್ ಕುಟುಂಬ ಮಂಗಳವಾರ ರಾತ್ರಿ ವಾಷಿಂಗ್ಟನ್ ಡಿಸಿ ತಲುಪುತ್ತಿದ್ದಂತೆ ಟ್ರಂಪ್ ಆಡಳಿತ 20 ನಿಮಿಷಗಳ ಫೇರ್​ವೆಲ್ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಡಿಪಾರ್ಚರ್ ನೋಟ್ಸ್ ಬರೆದಿಟ್ಟ ಟ್ರಂಪ್!

ಅಧ್ಯಕ್ಷರ ವಿದಾಯ ಟಿಪ್ಪಣಿ ಅಥವಾ ಡಿಪಾರ್ಚರ್ ನೋಟ್ಸ್ ಸಂಪ್ರದಾಯವನ್ನು ಅಧ್ಯಕ್ಷ ಟ್ರಂಪ್ ಮುಂದುವರಿಸಿದ್ದಾರೆ. ಓವಲ್ ಕಚೇರಿಯಲ್ಲಿರುವ ರೆಸೊಲ್ಯೂಟ್ ಡೆಸ್ಕ್​ನಲ್ಲಿ ಈ ಪತ್ರವಿದೆ ಎಂದು ಶ್ವೇತ ಭವನದ ಮೂಲಗಳು ಖಚಿತಪಡಿಸಿವೆ. 1989ರ ಜನವರಿಯಲ್ಲಿ ಅಧ್ಯಕ್ಷ ರೊನಾಲ್ಡ್ ರೇಗನ್ ತಮ್ಮ ಉತ್ತರಾಧಿಕಾರಿ ಜಾರ್ಜ್ ಎಚ್.ಡಬ್ಲ್ಯು ಬುಷ್​ಗೆ ಮೊಟ್ಟ ಮೊದಲ ಬಾರಿಗೆ ಡಿಪಾರ್ಚರ್ ನೋಟ್ಸ್ ಬರೆದಿದ್ದರು.

ಬೆಳಗ್ಗೆಯೇ ವಿದಾಯ ಹೇಳಿದ ಟ್ರಂಪ್​

ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ವಿದಾಯ ಔತಣಕೂಟ ಶ್ವೇತಭವನದಲ್ಲಿ ಬೆಳಗ್ಗೆ ಬೇಗನೆ ನಡೆಯಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಅವರು ಶ್ವೇತ ಭವನದಿಂದ ಫ್ಲಾರಿಡಾಗೆ ಹೊರಟರು. ಶ್ವೇತಭವನದ ಆವರಣದಿಂದ ಅವರು ಮರೈನ್​ ಒನ್​ ಕಾಪ್ಟರ್​ ಮೂಲಕ ಜಾಯಿಂಟ್​ ಬೇಸ್​ ಆ್ಯಂಡ್ರೂಸ್​ಗೆ ಪ್ರಯಾಣ ಬೆಳೆಸಿದರು. ಅಲ್ಲಿ, ಸಿದ್ಧಪಡಿಸಲಾಗಿದ್ದ ವೇದಿಕೆ ಏರಿದ ಟ್ರಂಪ್​ ದಂಪತಿ, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು. ಪದೇಪದೆ ಚಪ್ಪಾಳೆ ತಟ್ಟುತ್ತ ಹುರಿದುಂಬಿಸುತ್ತಿದ್ದ ದೃಶ್ಯ ಕಂಡುಬಂತು. ಬಳಿಕ ಅಲ್ಲಿಂದ ಏರ್​ಫೋರ್ಸ್​ ಒನ್​ ಮೂಲಕ ಫ್ಲಾರಿಡಾದಲ್ಲಿರುವ ಮಾರ್​ ಆ ಲಾಗೋ ರೆಸಾರ್ಟ್​ಗೆ ಪ್ರಯಾಣ ಬೆಳೆಸಿದರು.

ಅಧ್ಯಕ್ಷರ ಟ್ವೀಟ್ ಖಾತೆಗೆ ಮರುಚಾಲನೆ

ಡೊನಾಲ್ಡ್ ಟ್ರಂಪ್ ಅವರ ಪ್ರಚೋದನಾಕಾರಿ ಟ್ವೀಟ್ ಪರಿಣಾಮ ಸ್ಥಗಿತಗೊಂಡಿದ್ದ ಪ್ರೆಸಿಡೆನ್ಶಿಯಲ್ ಟ್ವೀಟ್ ಖಾತೆಗಳನ್ನು ರೀಸೆಟ್ ಮಾಡಲಾಗಿದ್ದು, ಬುಧವಾರದಿಂದ ಸಕ್ರಿಯವಾಗಿ ಕೆಲಸ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಎಥಿಕ್ಸ್ ಪ್ರತಿಜ್ಞೆ, ಲಾಬಿ ನಿಷೇಧವಿಲ್ಲ

ಟ್ರಂಪ್ ಆಡಳಿತದಲ್ಲಿ ಭಾಗಿಯಾದ ಎಲ್ಲ ಸದಸ್ಯರನ್ನು ನೈತಿಕ ಪ್ರಮಾಣ ಮತ್ತು ಐದು ವರ್ಷ ಲಾಬಿ ಮಾಡದಂತೆ ನಿಷೇಧ ಹೇರುವ ನಿಯಮಗಳಿಂದ ಮುಕ್ತಗೊಳಿಸಿ ಅಧ್ಯಕ್ಷ ಟ್ರಂಪ್ ಆದೇಶ ಜಾರಿಗೊಳಿಸಿದ್ದಾರೆ. ಇವೆಲ್ಲವೂ 2017ರ ಜನವರಿಯಲ್ಲಿ ಮಾಡಿದ್ದ ಆದೇಶಗಳಾಗಿದ್ದು ಅವುಗಳನ್ನೆಲ್ಲ ರದ್ದುಗೊಳಿಸಿದ್ದಾರೆ.

ಶ್ವೇತಭವನದಲ್ಲಿ ಬೈಡೆನ್ ಕುಟುಂಬದ ಮೊದಲ ದಿನ

ಡೆಲಾವೇರ್​ನಿಂದ ಬೈಡೆನ್ ಜತೆಗೆ ಅವರ ಪತ್ನಿ ಫಸ್ಟ್ ಲೇಡಿ ಜಿಲ್ ಬೈಡೆನ್, ಪುತ್ರ ಹಂಟರ್ ಬೈಡೆನ್, ಮೊಮ್ಮಗ ಬ್ಯೂ, ಕುಟುಂಬ ಸದಸ್ಯರು ವಾಷಿಂಗ್ಟನ್ ಡಿಸಿಗೆ ಆಗಮಿಸಿದ್ದಾರೆ. ಎಲ್ಲರೂ ಶ್ವೇತಭವನದ ಆತಿಥ್ಯ ಸ್ವೀಕರಿಸಿ, ನ್ಯಾಷನಲ್ ಮಾಲ್​ಗೆ ತೆರಳಿ ಅಲ್ಲಿ ಕೋವಿಡ್​ನಿಂದ ಮೃತರಾದವರಿಗೆ ಗೌರವ ಸಲ್ಲಿಸಿದರು. ಬಳಿಕ ಲಿಂಕನ್ ಮೆಮೋರಿಯಲ್​ಗೂ ತೆರಳಿದ್ದರು. ಅಲ್ಲಿ ಅವರೊಂದಿಗೆ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕುಟುಂಬ ಜತೆಗೂಡಿತು.

ಮಾಜಿ ಅಧ್ಯಕ್ಷರು ಭಾಗಿ

ಪ್ರಮಾಣ ವಚನ ಸಮಾರಂಭದಲ್ಲಿ ಮಾಜಿ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯೂ ಬುಷ್ ದಂಪತಿ, ಬಿಲ್ ಕ್ಲಿಂಟನ್ ಮತ್ತು ಹಿಲರಿ ಬರಾಕ್ ಒಬಾಮ ಹಾಗೂ ಮಿಚೆಲ್ ಒಬಾಮ, ನಿಕಟಪೂರ್ವ ಉಪಾಧ್ಯಕ್ಷ ಮೈಕ್ ಪೆನ್ಸ್, ಹಲವು ರಾಜ್ಯಗಳ ಗವರ್ನರ್​ಗಳು, ವಿವಿಧ ವಲಯಗಳ ಗಣ್ಯರು ಭಾಗಿಯಾಗಿದ್ದರು. 25 ಸಾವಿರ ನ್ಯಾಷನಲ್ ಗಾರ್ಡ್​ಗಳು ಕ್ಯಾಪಿಟಲ್ ಹಿಲ್​ನಲ್ಲಿ ಭದ್ರತೆ ಕಲ್ಪಿಸಿದರು.

ಸಹಾಯಕ ಆರೋಗ್ಯ ಕಾರ್ಯದರ್ಶಿ ಆಗಿ ಲಿಂಗಪರಿವರ್ತಿತೆ

ಅಮೆರಿಕದ ಅಸಿಸ್ಟೆಂಟ್ ಹೆಲ್ತ್ ಸೆಕ್ರೆಟರಿ ಹೊಣೆಗಾರಿಕೆಯನ್ನು ಬೈಡೆನ್ ಆಡಳಿತ ಲಿಂಗಪರಿವರ್ತಿತ ಮಹಿಳೆ ರಾಚೆಲ್ ಲೆವಿನ್ ಅವರಿಗೆ ನೀಡಿದೆ. ಪ್ರಸ್ತುತ ಅವರು ಪೆನ್ಸಿಲ್ವೇನಿಯಾದ ಉನ್ನತ ಆರೋಗ್ಯಾಧಿಕಾರಿ.