ನ್ಯೂಸ್

ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಮರುಸೇರ್ಪಡೆ ನಿರ್ಧಾರ

ವಿಲ್ಮಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್​ಒ) ಅಮೆರಿಕ ಮರುಸೇರ್ಪಡೆಯಾಗಲು ಬಯಸುತ್ತದೆ ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಚೀನಾ ಜತೆಗಿನ ಸಂಬಂಧ ಸುಧಾರಿಸುವ ಸುಳಿವನ್ನು ನೀಡಿದ್ದಾರೆ.

ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮೊದಲ ದಿನವೇ ಡಬ್ಲ್ಯುಎಚ್​ಒಗೆ ಮರುಸೇರ್ಪಡೆಯಾಗುವ ಕಾರ್ಯ ಮಾಡುವೆ. ವಿಶ್ವಸಮುದಾಯದಲ್ಲಿ ಕೆಲವು ಸಮಾನ ಅಂಶಗಳಿವೆ. ಇದನ್ನು ಚೀನಾ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಚೀನಾ ವಿರುದ್ಧ ಕ್ರಮ ಕೈಗೊಳ್ಳುವುದೇ ಉದ್ದೇಶವಲ್ಲ. ಅದು ನಿಯಮಾನುಸಾರ ನಡೆದುಕೊಳ್ಳುವಂತೆ ಮಾಡುವುದು ನಮ್ಮ ಆಶಯ. ಚೀನಾ ತನ್ನ ಧೋರಣೆಯನ್ನು ಬದಲಿಸಿಕೊಂಡರೆ ಆ ರಾಷ್ಟ್ರದ ಜತೆಗೆ ಸುಮಧುರ ಸಂಬಂಧ ಸಾಧ್ಯವಾಗಲಿದೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಚೀನಾದ ಹಟಮಾರಿತನ ಹೀಗೆಯೇ ಮುಂದುವರಿದರೆ ಅದಕ್ಕೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಅಧ್ಯಕ್ಷೀಯ ಚುನಾವಣೆಯ ಡಿಬೇಟ್​ನಲ್ಲಿ ಬೈಡೆನ್ ಹೇಳಿದ್ದರು. ಹೀಗಾಗಿ ಚೀನಾ ವಿರುದ್ಧ ನಿರ್ಬಂಧ ಅಥವಾ ತೆರಿಗೆ ಹೆಚ್ಚಳದಂತಹ ಕ್ರಮಗಳನ್ನು ಕೈಗೊಳ್ಳುವಿರಾ? ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಹಾಕಿದ್ದರು.

ಕರೊನಾ ಸಾಂಕ್ರಾಮಿಕ ವಿಶ್ವಕ್ಕೆ ಹರಡಲು ಚೀನಾ ಕಾರಣವೆಂದು ಕಿಡಿಕಾರುತ್ತಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಜಾಡ್ಯವನ್ನು ತಡೆಯಲು ಡಬ್ಲ್ಯೂಎಚ್​ಒ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಚೀನಾ ಕೈಗೊಂಬೆಯಾಗಿ ವರ್ತಿಸಿತು ಎಂದು ಆರೋಪಿಸಿ ಕಳೆದ ಏಪ್ರಿಲ್​ನಲ್ಲಿ ಡಬ್ಲ್ಯೂಎಚ್​ಒನಿಂದ ಹೊರಬರುವ ಘೋಷಣೆ ಮಾಡಿದರು.

ಟ್ರಂಪ್ ಕಳೆದ ನಾಲ್ಕು ವರ್ಷದಿಂದಲೂ ಚೀನಾ ವಿರುದ್ಧ ಇದ್ದರು. ಅಮೆರಿಕ ತನ್ನ ವಿರುದ್ಧ ಕೈಗೊಂಡ ಕ್ರಮಕ್ಕೆ ಚೀನಾ ಪ್ರತಿಕ್ರಮವನ್ನು ಕೈಗೊಳ್ಳುತ್ತಿತ್ತು. ಇದು ಉಭಯ ದೇಶಗಳ ಮಧ್ಯೆ ವಾಣಿಜ್ಯ ಸಮರಕ್ಕೂ ಕಾರಣವಾಯಿತು. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಆಧಿಪತ್ಯ ತಪ್ಪಿಸಲು ಅಮೆರಿಕ ಕೆಲವು ಚಟುವಟಿಕೆಗಳನ್ನು ಕೈಗೊಂಡಿತು. ಹಾಂಕಾಂಗ್​ನಲ್ಲಿ ಪ್ರಜಾಪ್ರಭುತ್ವ ಪರ ಚಳವಳಿಗೆ ಬೆಂಬಲ ನೀಡಿತು. ತೈವಾನ್ ಜತೆಗಿನ ಸಂಬಂಧವನ್ನು ಸುಧಾರಿಸಿಕೊಂಡಿತು. ಇದು ಚೀನಾದ ಅಸಮಾಧಾನಕ್ಕೆ ಕಾರಣವಾಯಿತು. ಕಳೆದ ಡಿಸೆಂಬರ್ ಹೊತ್ತಿಗೆ ಸರಕುಗಳ ಮೇಲಿನ ತೆರಿಗೆ ಜಗಳ ಕೊನೆಯಾಗುತ್ತದೆ ಎಂಬ ನಿರೀಕ್ಷೆ ಮೂಡಿತ್ತು. ಆದರೆ ಅಷ್ಟ್ರರಲ್ಲಿ ಕರೊನಾ ಸೋಂಕು ವ್ಯಾಪಕವಾಯಿತು. ಅಮೆರಿಕ-ಚೀನಾ ಸಮಸ್ಯೆ ಮುಂದುವರಿತು.

ಜಾರ್ಜಿಯಾದಲ್ಲಿ ಬೈಡೆನ್​ಗೆ ಜಯ ಖಾತರಿ

ಜಾರ್ಜಿಯಾದ ಬೆಂಬಲ ಪಡೆಯುವ ಮೂಲಕ ಜೋ ಬೈಡೆನ್ ತಮ್ಮ ಎಲೆಕ್ಟೋರಲ್​ಗಳ ಸಂಖ್ಯೆಯನ್ನು 306ಕ್ಕೆ ಹಿಗ್ಗಿಸಿಕೊಂಡಿದ್ದಾರೆ. ಭೌತಿಕವಾಗಿ ನಡೆದ ಮತ ಮರುಎಣಿಕೆಯಲ್ಲಿ ಇಲ್ಲಿನ 16 ಎಲೆಕ್ಟೋರಲ್ ಕಾಲೇಜುಗಳು ಬೈಡೆನ್​ಗೆ ಒಲಿದಿದ್ದು, ಮೂರು ದಶಕದ ನಂತರ ಜಾರ್ಜಿಯಾದಲ್ಲಿ ಡೆಮಾಕ್ರಟಿಕ್​ರ ನೀಲಿ ಪತಾಕೆ ಹಾರಾಡಿದೆ. ಈ ಮಧ್ಯೆ ಅಧ್ಯಕ್ಷ ಟ್ರಂಪ್, ಚುನಾವಣಾ ವಂಚನೆಯ ಆರೋಪವನ್ನು ಮುಂದುವರಿಸಿದ್ದಾರೆ. ಜಾರ್ಜಿಯಾದಲ್ಲಿ ಬೈಡೆನ್ ಶೇ. 49.5 (24.75 ಲಕ್ಷ) ಹಾಗೂ ಟ್ರಂಪ್ ಶೇ. 49.3 (24.62 ಲಕ್ಷ) ಮತ ಪಡೆದುಕೊಂಡಿದ್ದಾರೆ. ಅಂತರ ಶೇ. 0.2 (13 ಸಾವಿತರ ಮತ) ಇದ್ದ ಕಾರಣ ಇಲ್ಲಿ ಮರು ಎಣಿಕೆಗೆ ಆದೇಶಿಸಲಾಗಿತ್ತು.

ಅದಲು-ಬದಲು

2016ರ ಫಲಿತಾಂಶ ಈ ಸಾರಿ ಅದಲುಬದಲಾಗಿದೆ. ಆಗ ಡೊನಾಲ್ಡ್ ಟ್ರಂಪ್ 306, ಹಿಲರಿ ಕ್ಲಿಂಟನ್ 232 ಎಲೆಕ್ಟೋರಲ್ ಬೆಂಬಲ ಪಡೆದಿದ್ದರು. ಈ ಸಾರಿ ಬೈಡೆನ್ 306, ಟ್ರಂಪ್ 232 ಎಲೆಕ್ಟೋರಲ್​ಗಳನ್ನು ಜಯಿಸಿದ್ದಾರೆ.

ಸ್ವಿಂಗ್ ರಾಜ್ಯಗಳು

ವಿಸ್ಕಾನ್ಸಿನ್ (10), ಅರಿಜೋನಾ (11), ಮಿಚಿಗನ್ (16) ಪೆನ್ಸಿಲ್ವೇನಿಯಾ (20), ಜಾರ್ಜಿಯಾ (16) ಬೈಡೆನ್​ಗೆ ‘ಸ್ವಿಂಗ್’ ನೀಡಿದ ರಾಜ್ಯಗಳಾಗಿವೆ. ಇಲ್ಲಿನ ಎಲೆಕ್ಟೋರಲ್ ಕಾಲೇಜುಗಳ (ಆವರಣದಲ್ಲಿರುವುದು) ಬೆಂಬಲ ಬೈಡೆನ್ ಪಡೆದಿದ್ದಾರೆ.

ಬೈಡೆನ್ ಅತ್ಯಂತ ಹಿರಿಯ ಅಧ್ಯಕ್ಷ

ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ 78ನೇ ವರ್ಷಕ್ಕೆ ಕಾಲಿರಿಸಿದ್ದು, ದೇಶ, ವಿದೇಶಗಳ ಗಣ್ಯರು ಶುಭಕೋರಿದ್ದಾರೆ. ಇನ್ನೆರಡು ತಿಂಗಳಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನ ಅಲಂಕರಿಸಲಿರುವ ಅವರು, ಈ ಸ್ಥಾನಕ್ಕೆ ಏರಿದ ಅತ್ಯಂತ ಹಿರಿಯ ವಯಸ್ಸಿನ ಅಧ್ಯಕ್ಷರೂ ಆಗಲಿದ್ದಾರೆ. ಈ ಹಿಂದೆ ರೊನಾಲ್ಡ್ ರೇಗನ್ ಹಿರಿಯ ವಯಸ್ಸಿನ ಅಧ್ಯಕ್ಷರಾಗಿದ್ದರು. 1989ರಲ್ಲಿ ರೇಗನ್ ಶ್ವೇತಭವನವನ್ನು ತೊರೆಯುವಾಗ ಅವರಿಗೆ 77 ವರ್ಷ 239 ದಿನ ಆಗಿತ್ತು. ಬೈಡೆನ್ ತಮ್ಮ ನಾಲ್ಕು ವರ್ಷ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದರೆ ಅವರ ವಯಸ್ಸು 82 ವರ್ಷ ಎರಡು ತಿಂಗಳಾಗಿರುತ್ತದೆ. ಬೈಡೆನ್ ಹೊಂದಿರುವ ಅನುಭವ ಬೇರೆ ಅಧ್ಯಕ್ಷರಿಗೆ ಇರಲಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.