ನ್ಯೂಸ್

ವಿಜಯವಾಣಿ ರಿಯಾಲಿಟಿ ಚೆಕ್​: ಆಂಬುಲೆನ್ಸ್ ವ್ಯಾಪ್ತಿ ಪ್ರದೇಶದಲ್ಲಿಲ್ಲ... ಸೇವೆಯಲ್ಲಿ ವ್ಯತ್ಯಯ, ಬೀದಿಯಲ್ಲೇ ಪ್ರಾಣಬಿಡುವ ಭಯ

ಕರೊನಾ ಸಾಂಕ್ರಾಮಿಕ ರೋಗ ಬೆಂಗಳೂರು ನಗರದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರನ್ನು ಸಮಯಕ್ಕೆ ಸರಿಯಾಗಿ ಸಾಗಿಸಬೇಕಾದ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ಸಾಮಾನ್ಯ ಜನರು ಬೀದಿಯಲ್ಲೇ ಜೀವ ಬಿಡುವ ಸ್ಥಿತಿ ನಿರ್ವಣವಾಗಿದೆ. ರಾಜಧಾನಿಯ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಉಪ ಮುಖ್ಯಮಂತ್ರಿ, ಕಂದಾಯ, ನಗರಾಭಿವೃದ್ಧಿ, ಸಹಕಾರ ಸಚಿವರಿದ್ದಾರೆ. ಜತೆಗೆ ಪ್ರಭಾವಿ ಶಾಸಕರ ದಂಡೇ ಇದೆ. ಆದರೂ ಶ್ರೀಸಾಮಾನ್ಯರಿಗೆ ಪ್ರಯೋಜನವಾಗಿಲ್ಲ. ಈ ಕರಾಳ ವಾತಾವರಣದ ಬಗ್ಗೆ ವಿಜಯವಾಣಿ ಬೆಳಕು ಚೆಲ್ಲಿದೆ.

ಬೆಂಗಳೂರು: ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ರಾಜಧಾನಿಯಲ್ಲಿ ಕರೊನಾ ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗದೆ ಪರದಾಡುವಂತಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಲುಪಿ 72 ಗಂಟೆ ಕಳೆದರೂ ನಿಯಂತ್ರಿಸಲು ಸಾಧ್ಯವಾಗಿಲ್ಲ. ಆಂಬುಲೆನ್ಸ್​ಗಾಗಿ ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ವಣವಾಗಿದ್ದು, ಕಾರ್ಪೆರೇಟರ್, ಶಾಸಕರು, ಸಂಸದರು, ಸಿಎಂ ಕಚೇರಿಗೇ ಫೋನ್ ಮಾಡಿದರೂ ವ್ಯವಸ್ಥೆ ಸರಿಪಡಿಸಲು ಸಾಧ್ಯವಾಗಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಸಂವಹನ ಕೊರತೆ. ಕರೊನಾ ಪಾಸಿಟಿವ್ ಬಂದಿದೆ ಎಂದು ವರದಿ ನೀಡುವವರು ಬೇರೆ ಅಧಿಕಾರಿ ಗಳಾದರೆ, ಆಂಬುಲೆನ್ಸ್ ವ್ಯವಸ್ಥೆ ಮಾಡುವುದು ಮತ್ತೊಂದು ತಂಡ, ಹೀಗಾಗಿ ಸಮಸ್ಯೆ ತೀವ್ರವಾಗುತ್ತಿದೆ.

ರಿಯಾಲಿಟಿ ಚೆಕ್​ನಲ್ಲಿ ಕಂಡಿದ್ದೇನು?: ಮಧ್ಯಾಹ್ನದ ವೇಳೆ ಆಂಬುಲೆನ್ಸ್ ವ್ಯವಸ್ಥೆ ಹೇಗಿದೆ ಎಂದು ಪರಿಶೀಲಿಸಲು ವಿಜಯವಾಣಿ ನಡೆಸಿದ ಪ್ರಯತ್ನಕ್ಕೆ ಬಿಬಿಎಂಪಿಯಿಂದ ಭರವಸೆದಾಯಕ ಪ್ರತಿಕ್ರಿಯೆ ಸಿಗದಾಯಿತು. ಕರೆ ಮಾಡಿದರೆ ಸ್ವೀಕರಿಸಲ್ಲ, ಸ್ವೀಕರಿಸಿದರೂ ಸಂಬಂಧಪಟ್ಟವರಿಗೆ ಮಾಹಿತಿ ಕಳಿಸಿದ್ದೇವೆ. ಅವರು ನಿಮ್ಮನ್ನು ಸಂರ್ಪಸುತ್ತಾರೆಂಬ ಉತ್ತರ ಬರುತ್ತದೆ. ಆದರೆ ಯಾರೂ ಅತ್ತ ಕಡೆಯಿಂದ ಕರೆ ಮಾಡುವುದಿಲ್ಲ. ಇಷ್ಟು ದಿನ 108 ಜಿವಿಕೆ ಕೇಂದ್ರದಿಂದಲೇ ಆಂಬುಲೆನ್ಸ್ ಕಳಿಸಿಕೊಡುವ ವ್ಯವಸ್ಥೆ ಇತ್ತು. ಇದೀಗ ಅದನ್ನು ಬಿಬಿಎಂಪಿ ವಹಿಸಿಕೊಂಡಿದೆ.

ಸೌತ್ ಎಂಡ್​ನಲ್ಲಿ ನಿಂತಿದ್ವು 21!: ಬೆಂಗಳೂರಿನ ಸೌತ್ ಎಂಡ್ ಸರ್ಕಲ್​ನಲ್ಲಿ ಭಾನುವಾರ 21 ಆಂಬುಲೆನ್ಸ್ಗಳು ಕರೆ ಬಂದ ತಕ್ಷಣ ತೆರಳಲು ಸನ್ನದ್ಧವಾಗಿ ನಿಂತಿದ್ದವು. ಅಂದರೆ ಆಂಬುಲೆನ್ಸ್ ಇದ್ದರೂ ಮಾಹಿತಿ ತಲುಪಿಸುವ ಹೊಣೆ ಹೊತ್ತವರು ಉದಾಸೀನ ಮಾಡುತ್ತಿದ್ದಾರೆಂಬುದು ಸ್ಪಷ್ಟ. ಕರೊನಾ ನಿರ್ವಹಣೆಗೆ ಆಪ್ತಮಿತ್ರ- 14410, ಸಾಮಾನ್ಯ- 104, ತುರ್ತು ಸೇವೆ-108, ಬಿಬಿಎಂಸಿ- 080- 22221188 ಸಹಾಯವಾಣಿಗಳಿವೆ. ಆದರೆ ಆಂಬುಲೆನ್ಸ್ ವಿಚಾರದಲ್ಲಿ ಅವರೂ ಅಸಹಾಯಕರಾಗಿದ್ದಾರೆ.

ಬಿಬಿಎಂಪಿ ವಾದ: ಬಿಬಿಎಂಪಿ ವ್ಯಾಪ್ತಿಯಲ್ಲಿ 245 ಆಂಬುಲೆನ್ಸ್ ಕಾರ್ಯನಿರ್ವಹಣೆ ಮಾಡುತ್ತಿವೆ. ಕರೊನಾ ಪಾಸಿಟಿವ್ ಸರ್ಟಿಫಿಕೇಟ್ ಇದ್ದ ಕಡೆಗೆ ಮಾತ್ರ ಆಂಬುಲೆನ್ಸ್ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಈಗ ಯಾವ ಸಮಸ್ಯೆ ಇಲ್ಲ ಎಂದು ಆಯುಕ್ತ ಅನಿಲ್​ಕುಮಾರ್ ವಿವರಿಸುತ್ತಾರೆ.

ಸಿಎಂ ಕಚೇರಿ ನೆರವಿಗೆ: ಬಸವೇಶ್ವರನಗರದಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿದೆ. ಹೆಲ್ಪ್​ಲೈನ್​ಗೆ ಕರೆ ಮಾಡಿದರೆ ಸ್ಪಂದನೆ ಸಿಗದೆ ಹೋಯಿತು. ಶಾಸಕರು, ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ಪಂದನೆ ಸಿಗದಾಗ ಸಿಎಂ ಕಚೇರಿ ನೆರವು ಪಡೆಯ ಬೇಕಾಯಿತು.

ದಿನದ ಬಳಿಕ ಬಂತು: ಹನುಮಂತನಗರದಲ್ಲಿ ಒಂದು ಕುಟುಂಬಕ್ಕೆ ಕರೊನಾ ಪಾಸಿಟಿವ್ ಬಂದಿದ್ದು, ಆಂಬುಲೆನ್ಸ್ಗಾಗಿ ಕರೆ ಮಾಡಿ ಜನ ಸುಸ್ತೆದ್ದು ಹೋದರು. ವಿವಿಧ ಮಾರ್ಗದ ಮೂಲಕ ಆ ಭಾಗದ ಜನರು ಬಿಬಿಎಂಪಿ ಗಮನಕ್ಕೆ ತಂದರೂ ಆಂಬುಲೆನ್ಸ್ ಬರಲಿಲ್ಲ. ಕೊನೆಗೆ ಶಾಸಕರ ಗಮನಕ್ಕೆ ತಂದ ಮೇಲೆ, ಒಂದು ದಿನದ ಬಳಿಕ ಬಂತು.

ಟಿಟಿ ಕಳುಹಿಸಿದರು!: ರಾಜಧಾನಿಯಲ್ಲಿ ಸೋಂಕಿತರಿಗೆ ಆಂಬುಲೆನ್ಸ್ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ. 2 ವಾರ್ಡ್ಗಳಿಗೆ ಒಂದೊಂದನ್ನು ಮೀಸಲಿಡ ಲಾಗಿದೆ. ಶೀಘ್ರವೇ ಪ್ರತಿ ವಾರ್ಡ್ ಗೊಂದು ಮೀಸಲಿಡಲಾಗುತ್ತದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದರು. ಜನರ ಪರದಾಟ ನಿಂತಿಲ್ಲ. ಭಾನುವಾರ ಒಂದು ಕಡೆಗೆ ಸೋಂಕಿತನನ್ನು ಕರೆದೊಯ್ಯಲು ಟಿಟಿ ಕಳಿಸಿಕೊಡಲಾಗಿತ್ತು. ಜತೆಗೆ ಬಂದಿದ್ದವರು ಅರ್ಧಂಬರ್ಧ ಪಿಪಿಇ ಕಿಟ್ ಧರಿಸಿದ್ದರು. ಬೆಡ್ ಇಲ್ಲವೆಂಬ ನೆಪ

ರಾಜಾಜಿನಗರ ಡಿ ಬ್ಲಾಕ್​ನಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಪೋನ್ ಕರೆ ಮಾಡಿ ಮಾಹಿತಿ ನೀಡಿದರೂ ‘ಬೆಡ್ ಖಾಲಿ ಇಲ್ಲ’ವೆಂಬ ನೆಪ ಹೇಳಿ ಆಂಬುಲೆನ್ಸ್ ಕಳಿಸಿರಲಿಲ್ಲ. ಬೆಳಿಗ್ಗೆಯಿಂದಲೂ ಪರದಾಟ ನಡೆಸಿದ ಬಳಿಕ ಸಂಜೆಗೆ ಬಂತು.