ನ್ಯೂಸ್

ಅಂಬುಜೇಕ್ಷಣ

ಮೋಹನ್​ ಶೆಟ್ಟಿ
ವೇದವ್ಯಾಸದೇವರು, ಶ್ರೀಕೃಷ್ಣ ಪರಮಾತ್ಮ ಅವತರಿಸುವಾಗ ಹೇಗೆ ಕಾಣಿಸಿದ ಎನ್ನುವುದನ್ನು ವರ್ಣಿಸುತ್ತ ಪರಮಾತ್ಮನ ಕುರಿತು ಅಂಬುಜೇಕ್ಷಣ ಎಂದು ಉದ್ಗಾರ ಎತ್ತಿದ್ದಾರೆ.

ಹಾಗೇಕೆ ಉದ್ಘಾರ ಮಾಡಿದರು? ಅಂಬುಜೇಕ್ಷಣ ಎನ್ನುವ ಶಬ್ದಕ್ಕೆ ಕಮಲದಂತೆ ಕಣ್ಣುಗಳುಳ್ಳವನು ಎನ್ನುವುದು ಒಂದು ಸಾಮಾನ್ಯ ಅರ್ಥವಾದರೆ ಮತ್ತೊಂದು ಅರ್ಥವನ್ನು ಹೀಗೆ ಚಿಂತಿಸಬಹುದು. ಕೆಲವರು ಯಥೇಚ್ಛವಾಗಿ ಹಣ ಖರ್ಚು ಮಾಡಿ ಸ್ವಕ್ಷೇತ್ರದಲ್ಲಿ ಆರಿಸಿಬಂದಿರುತ್ತಾರೆ. ಆದರೆ ಅವರು ಅಧಿಕಾರಕ್ಕೆ ಬಂದ ಮೇಲೆ ಭಯ ಬೀಳುತ್ತಾರೆ.

ಅದರಂತೆ ದೇವತೆಗಳು ವಿಷ್ಣುವಿಗೆ ನೀನು ಅವತರಿಸು ಎಂದು ಪ್ರಾರ್ಥಿಸಿದ್ದಕ್ಕೆ ಅವತರಿಸಿದ ನಂತರ ದುರ್ಯೋಧನ ಜರಾಸಂಧಾದಿಗಳನ್ನು ನೋಡಿ ಗಾಬರಿಯಾಗಿ ಓಡಿ ಹೋದ ಎನ್ನಬೇಕೇ? ಹಾಗೆ ಹೇಳಲು ಬರುವುದಿಲ್ಲ. ಏಕೆಂದರೆ ಶ್ರೀಕೃಷ್ಣನಿಗೆ ಯಾರ ಹೆದರಿಕೆ? ಜರಾಸಂಧಾದಿಗಳಿಗೆ ಅವನೇಕೆ ಹೆದರ ಬೇಕು? ಸಾಮಾನ್ಯವಾಗಿ ಹೆದರಿಕೆ ಇದ್ದವರು ಕಣ್ಣು ಮುಚ್ಚುವುದು, ಗಾಬರಿಯಾಗಿ ಆಚೆ ಈಚೆ ನೋಡುವುದು ಹೀಗೆಲ್ಲ ಮಾಡುತ್ತಾರೆ.

ಶ್ರೀಕೃಷ್ಣ ಅವತರಿಸಿದಾಗ ಅವನ ಕಣ್ಣು ಹೇಗೆ ಇತ್ತು ಎನ್ನುವುದನ್ನು ವರ್ಣಿಸುತ್ತ ಕಮಲದಂತೆ ಸುಂದರವಾದ, ವಿಶಾಲವಾದ ಕಣ್ಣುಗಳುಳ್ಳನು ಎಂದಿದ್ದಾರೆ ವೇದವ್ಯಾಸರು. ಇದರಿಂದಲೇ ತಿಳಿಯುತ್ತದೆ ಪರಮಾತ್ಮ ನಿಗೆ ಯಾರ ಹೆದರಿಕೆಯೂ ಇಲ್ಲ. ಇದನ್ನು ಅಂಬುಜೇಕ್ಷಣ ಎಂಬ ಶಬ್ದದಿಂದ ಸೂಚಿಸಿದ್ದಾರೆ. ಪರಮಾತ್ಮ ಶ್ರೀಕೃಷ್ಣನಾಗಿ ಅವತರಿಸಿದ್ದೇಕೆ? ಕೇವಲ ವಸುದೇವ - ದೇವಕಿಯರ ಉದ್ಧಾರಕ್ಕಾಗಿ ಅವತರಿಸಿದನೇ ಎನ್ನುವ ಶಂಕೆಗೆ ಅಂಬುಜೇಕ್ಷಣ ಎನ್ನುವ ಶಬ್ದದಿಂದಲೇ ಸಮಾಧಾನ ತಿಳಿಸುತ್ತಾರೆ.

ಪರಮಾತ್ಮನ ಅವತಾರಕ್ಕೆ ಮುಖ್ಯ ಕಾರಣಗಳು ಪೃಥ್ವೀ. ಪೃಥಿವೀ ಅಭಿಮಾನಿದೇವ ತೆಯು ಗೋರೂಪ ಧರಿಸಿದ ಬ್ರಹ್ಮದೇವ ರನ್ನು ಮುಂದೆ ಮಾಡಿಕೊಂಡು ಪರಮಾತ್ಮನ ಬಳಿ ಬಂದು ಪ್ರಾರ್ಥನೆ ಮಾಡಿದ್ದಳು. ಆದ್ದರಿಂದಲೇ ಭಗವಂತ ಶ್ರೀಕೃಷ್ಣನಾಗಿ ಅವತರಿಸಿದ. ಈ ಅರ್ಥವನ್ನು ಅಂಬುಜೇಕ್ಷಣ ಎನ್ನುವ ಪದವು ಹೀಗೆ ಹೇಳುತ್ತದೆ. ಅಂಬು ಎಂದರೆ ನೀರು. ಅಂಬುಜ ಎಂದರೆ ನೀರಿನಿಂದ ಹುಟ್ಟಿದವಳು ಪೃಥ್ವೀ. ಅಂತಹ ಅಂಬುಜಳಾದ ಪೃಥ್ವಿಯ ಮೇಲಿನ ಪ್ರೀತಿಯಿಂದ ಪರಮಾತ್ಮ ಶ್ರೀಕೃಷ್ಣನಾಗಿ ಅವತರಿಸಿದ.