ನ್ಯೂಸ್

ನಿಜಶರಣ ಅಂಬಿಗರ ಚೌಡಯ್ಯ 'ಅಭಿವೃದ್ಧಿ' ದಡ ಸೇರಿಸುವ ಗುರಿ...

theerthaswamy

|ಮೃತ್ಯುಂಜಯ ಕಪಗಲ್ ಬೆಂಗಳೂರು

ರಾಜ್ಯದ ಹಿಂದುಳಿದ ವರ್ಗಗಳ ಪೈಕಿ ಒಂದಾದ ಬೆಸ್ತ/ಕೋಳಿ ಸಮುದಾಯವು ರಾಜಕೀಯ ಅಧಿಕಾರದ ದೃಷ್ಟಿಯಿಂದ ಹಲವು ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿದೆ. ಅದೇ ಕಾಲಕ್ಕೆ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸರ್ಕಾರ ಆದ್ಯತೆ ನೀಡಿದೆ. ವಚನಕಾರ ಅಂಬಿಗರ ಚೌಡಯ್ಯ ಹೆಸರಿನಲ್ಲಿ ಸ್ಥಾಪಿತ ‘ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ’ವು ಸಮುದಾಯವನ್ನು ಅಭಿವೃದ್ಧಿ ‘ದಡ’ ಸೇರಿಸುವ ಗುರಿಯಿಟ್ಟುಕೊಂಡಿದೆ.

ಕಂಪನಿ ಕಾಯ್ದೆಯಡಿ ನೋಂದಣಿಯಾಗಿ ಅಸ್ತಿತ್ವಕ್ಕೆ ಬಂದಿರುವ ನಿಗಮವು ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಯೋಜನೆಗಳಡಿ ಅಂದಾಜು 32 ಕೋಟಿ ರೂ. ವಿನಿಯೋಗಿಸಿದೆ. ಪ್ರಸಕ್ತ ಆರ್ಥಿಕ ವರ್ಷ (2021-22)ದ ಬಜೆಟ್​ನಲ್ಲಿ 10.75 ಕೋಟಿ ರೂ. ಹಂಚಿಕೆಯಾಗಿದ್ದು, 2.50 ಕೋಟಿ ರೂ. ಬಿಡುಗಡೆ ಮಾಡಿದೆ. ಸಮುದಾಯದ ಜನಸಂಖ್ಯೆ, ಬೇಡಿಕೆ ಹಾಗೂ ನಿರೀಕ್ಷೆಗೆ ಹೋಲಿಸಿದರೆ ಈ ಮೊತ್ತ ಯಾವುದಕ್ಕೂ ಸಾಲದು. ಕನಿಷ್ಠ 100 ಕೋಟಿ ರೂ.ಗಳನ್ನಾದರೂ ಒದಗಿಸಬೇಕು ಎನ್ನುವುದು ಸಮುದಾಯದ ಮುಖಂಡರ ಅಪೇಕ್ಷೆಯಾಗಿದೆ.

ನಿಗಮದ ವ್ಯಾಪ್ತಿಗೆ ಬರುವ ಜಾತಿ, ಉಪಜಾತಿಗಳು: ಬೆಸ್ತ, ಅಂಬಿಗ/ಅಂಬಿ, ಬೆಸ್ತರ್, ಭೋಯಿ, ರಾಜಬೋಯಿ, ಬುಂಡೆ-ಬೆಸ್ತರ್, ದಾಲ್ಚಿ, ದಾವತ್, ಗಬಿಟ್, ಗಲಾಡಕೊಂಕಣಿ, ಗಂಗೆಮಕ್ಕಳು, ಗಂಗಾಕುಲ, ಗಂಗಾಮತ, ಗಂಗಾಮತಸ್ಥ, ಗಂಗಾಪುತ್ರ, ಗೌರಿಮತ, ಬುಂಡೆ- ಬೆಸ್ತ/ಗುಂಡೆಬೆಸ್ತ, ಹರಕಂತ್ರ, ಜಲಗಾರ, ಕಬ್ಬೇರ/ಕಬ್ಬೇರ್, ಕಬ್ಬಲಿಗ, ಕಬ್ಬಿಲಿ, ಕಹರ್, ಖಾರ್ವಿ/ಕೊಂಕಣಖಾರ್ವಿ, ಕೋಳಿ, ಕೋಳಿ ಮಹದೇವ್, ಮಡ್ಡರ್, ಮೀನ ಗಾರ್, ಮೊಗವೀರ, ಮಗೇರ್, ಮುಕ್ಕವಾನ್, ಪರಿವಾರ, ಸಿವಿಯರ್, ಸುಣಗಾರ, ತೊರೆಯ, ಪಾಗಿ

ಆಯ್ಕೆ ವಿಧಾನ:

  • ಆಯವ್ಯಯ ಆಧರಿಸಿ ಕ್ರಿಯಾ ಯೋಜನೆ ಅನುಷ್ಠಾನ
  • ಕ್ರಿಯಾ ಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆದು ಪ್ರಕಟಣೆ ಮೂಲಕ ಅರ್ಜಿ ಆಹ್ವಾನ
  • ಆಯಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷತೆಯ ಆಯ್ಕೆ ಸಮಿತಿ ಮೂಲಕ ಫಲಾನುಭವಿಗಳ ಆಯ್ಕೆ
  • ಸ್ವಾವಲಂಬಿ ಜೀವನಕ್ಕೆ ಒತ್ತು

ಬ್ಯಾಂಕ್​ಗಳ ಸಹಭಾಗಿತ್ವದ ಸಾಲ: ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವೆ, ಆಟೋಮೊಬೈಲ್ ಗ್ಯಾರೇಜ್, ಹೋಟೆಲ್, ಇಟ್ಟಿಗೆ ಉದ್ಯಮ ಇತ್ಯಾದಿಗಳಿಗೆ ಗರಿಷ್ಠ 10 ಲಕ್ಷ ರೂ. ಸಾಲ ಲಭ್ಯ. ನಿಗಮ 1 ಲಕ್ಷ ರೂ. ಸಹಾಯಧನ ನೀಡುತ್ತದೆ. ಬ್ಯಾಂಕ್​ಗಳ ಚಾಲ್ತಿ ಬಡ್ಡಿ, ಮರುಪಾವತಿ ಕಂತು ಅನ್ವಯ. ಸ್ವಯಂ ಉದ್ಯೋಗ ಸಾಲ: ಘಟಕ ವೆಚ್ಚ 50,000 ರೂ.ಗಳಿಗೆ 10,000 ರೂ. ಸಬ್ಸಿಡಿ, 50 ಸಾವಿರದಿಂದ ಒಂದು ಲಕ್ಷ ರೂ.ವರೆಗೆ 20 ಸಾವಿರ ರೂ., ಸಬ್ಸಿಡಿ, ಒಂದು ಲಕ್ಷ ರೂ.ದಿಂದ ಎರಡು ಲಕ್ಷ ರೂ.ವರೆಗಿನ ಸ್ವಯಂ ಉದ್ಯೋಗ ಸಾಲಕ್ಕೆ 20 ರಿಂದ 30 ಸಾವಿರ ರೂ ಸಬ್ಸಿಡಿ, ಶೇ.4ರ ಬಡ್ಡಿ, ಮಾಸಿಕ ಕಂತಿನ ಪ್ರಕಾರ ಮರುಪಾವತಿಗೆ ಮೂರು ವರ್ಷಗಳ ಅವಧಿಯಿದೆ.

ಪ್ರಮುಖ ಯೋಜನೆಗಳು: ಸ್ವಯಂ ಉದ್ಯೋಗ ಸಾಲ, ಗಂಗಾ ಕಲ್ಯಾಣ- ನೀರಾವರಿ, ಅರಿವು-ಶೈಕ್ಷಣಿಕ ಸಾಲ, ಬ್ಯಾಂಕ್​ಗಳ ಸಹಭಾಗಿತ್ವದಲ್ಲಿ ಸ್ವಯಂ ಉದ್ಯೋಗ ಸಾಲ, ಕಿರು ಸಾಲ, ಸ್ವಸಹಾಯ ಗುಂಪುಗಳಿಗೆ ಸಹಾಯಧನ, ಕೌಶಲಾಭಿವೃದ್ಧಿ/ಉದ್ಯಮಶೀಲತಾ ತರಬೇತಿ.

ಶಿಕ್ಷಣದ ಮಹತ್ವ ಸಾರುವ ಅರಿವು: ವೃತ್ತಿಪರ ವ್ಯಾಸಂಗಕ್ಕೆ ಒಂದು ಲಕ್ಷ ರೂ.ನಂತೆ ಕೋರ್ಸ್ ಅವಧಿಗೆ ಗರಿಷ್ಠ 4 ರಿಂದ 5 ಲಕ್ಷ ರೂ. ಸಾಲ, ವಾರ್ಷಿಕ ಶೇ.2ರಷ್ಟು ಬಡ್ಡಿ. ಕೋರ್ಸ್ ಮುಗಿದ ನಾಲ್ಕು ತಿಂಗಳ ನಂತರ ಮೂರು ವರ್ಷಗಳಲ್ಲಿ ಮಾಸಿಕ ಕಂತುಗಳಲ್ಲಿ ಮರು ಪಾವತಿಗೆ ಅವಕಾಶ. ಕುಟುಂಬದ ವಾರ್ಷಿಕ ಆದಾಯ ಮಿತಿ 3.50 ಲಕ್ಷ ರೂ., ಸಿಇಟಿ ಮೂಲಕ ಪ್ರವೇಶ ಪಡೆದಿರಬೇಕು. ವಿದೇಶಿ ವಿವಿಗಳಲ್ಲಿ ಪಿಎಚ್.ಡಿ., ಪೋಸ್ಟ್ ಡಾಕ್ಟರಲ್, ಮಾಸ್ಟರ್ ಡಿಗ್ರಿ, ತಾಂತ್ರಿಕ, ವೈದ್ಯಕೀಯ ಇತ್ಯಾದಿ ವ್ಯಾಸಂಗಗಳಿಗೆ ವಾರ್ಷಿಕ ಸಾಲದ ಮೊತ್ತ ಗರಿಷ್ಠ ಐದು ಲಕ್ಷ ರೂ. ಮೂರು ವರ್ಷಗಳ ಅವಧಿಗೆ ಶೇ.4ರ ಬಡ್ಡಿ ದರದಲ್ಲಿ 15 ಲಕ್ಷ ರೂ.ವರೆಗೆ ಸಾಲಸೌಲಭ್ಯ. ವ್ಯಾಸಂಗ ಮುಗಿದ ಆರು ತಿಂಗಳ ನಂತರ ಅಥವಾ ಉದ್ಯೋಗ ದೊರೆತ ಮೂರು ತಿಂಗಳ ನಂತರ ಗರಿಷ್ಠ 60 ಮಾಸಿಕ ಕಂತುಗಳಲ್ಲಿ ಸಾಲ ಮರುಪಾವತಿಗೆ ಅವಕಾಶ.