ನ್ಯೂಸ್

ಹಾರರ್ ಚಿತ್ರದಲ್ಲಿ ಅಂಬಾಲಿ ಭಾರತಿ: ಇದೇ ಶುಕ್ರವಾರ ತೆರೆಗೆ ಬರಲಿದೆ ‘ನಾ ನಿನ್ನ ಬಿಡಲಾರೆ’

ಶಿವಮಲ್ಲಯ್ಯ ಸ್ಥಾವರಮಠ

ಬೆಂಗಳೂರು: ಕಲಬುರ್ಗಿ ಮೂಲದ ನಟಿ ಅಂಬಾಲಿ ಭಾರತಿ ಎಂಜಿನಿಯರ್ ಪದವೀಧರೆ. ಮೊದಲಿನಿಂದಲೂ ನಟಿಯಾಗುವ ಕನಸು ಹೊಂದಿದ್ದ ಅವರು ಪದವಿಯ ಬಳಿಕ ರಂಗಭೂಮಿಯಲ್ಲಿ ಸಕ್ರಿಯರಾದರು. ನಂತರ ಕನ್ನಡದ ‘ಕಿನ್ನರಿ’, ‘ಯಾರೇ ನೀ ಮೋಹಿನಿ’ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದರು. ಕ್ರಮೇಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಛಲಕ್ಕೆ ಅವರ ತಾಯಿ ಪ್ರೋತ್ಸಾಹ ನೀಡಿದರು. ಇದರ ´ಫಲವೇ ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ‘ನಾ ನಿನ್ನ ಬಿಡಲಾರೆ’. ನವೀನ್ ನಿರ್ದೇಶನದ ಹಾರರ್, ಸಸ್ಪೆನ್ಸ್ ಸಿನಿಮಾದಲ್ಲಿ ಅಂಬಾಲಿ ಭಾರತಿ ನಾಯಕಿಯಾಗಿದ್ದಾರೆ. ಚಿತ್ರದ ಬಗ್ಗೆ ಭಾರತಿ, ‘ಎಂಜಿನಿಯರಿಂಗ್ ಬಳಿಕ ಎರಡು ವರ್ಷ ವಿಪ್ರೋದಲ್ಲಿ ಕೆಲಸ ಮಾಡಿದೆ. ನನ್ನ ಜಾಗ ಇದಲ್ಲ ಎಂದು ರಾಜೀನಾಮೆ ನೀಡಿ, ರಂಗಭೂಮಿಯಲ್ಲಿ ತೊಡಗಿಸಿಕೊಂಡೆ. ಶ್ರೀಪಾದ ಭಟ್ ನಿರ್ದೇಶನದ ‘ಗಾಂಧಿ 150’ ನಾಟಕ ನನ್ನ ಬದುಕಿಗೆ ತಿರುವು ನೀಡಿತು. ಬಳಿಕ ಕನ್ನಡದ ಕೆಲ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡೆ. ಕೊನೆಗೆ ಒಂದು ಸಿನಿಮಾದ ಆಡಿಷನ್‌ಗೆ ಹೋಗಿದ್ದಾಗ ನವೀನ್ ಹೇಳಿದ ಈ ಕಥೆ ಇಷ್ಟವಾಗಿ, ಅಮ್ಮನಿಗೂ ತಿಳಿಸಿದಾಗ ಅವರೇ ನಿರ್ಮಿಸಲು ಮುಂದಾದರು’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

ತಾಂತ್ರಿಕ ಗುಣಮಟ್ಟದ ಚಿತ್ರ: ಪಾತ್ರದ ಬಗ್ಗೆ ಭಾರತಿ, ‘ನನ್ನ ಪಾತ್ರಕ್ಕೆ ಮುಗ್ಧೆ, ಬಬ್ಲಿ, ಹಾರರ್, ಆ್ಯಕ್ಷನ್-ಥ್ರಿಲ್ಲರ್ ಸೇರಿ ಹಲವು ವಿಭಿನ್ನ ಮುಖಗಳಿವೆ, ಶೇಡ್‌ಗಳಿವೆ. ಈ ಪಾತ್ರ ಸಿಕ್ಕಿರೋದು ನನ್ನ ಅದೃಷ್ಟವೇ ಸರಿ. ಆ್ಯಕ್ಷನ್ ಸೀನ್‌ಗಳಿಗೆ ಅಂತಾ ಯಾವುದೇ ವರ್ಕ್‌ಶಾಪ್, ತಯಾರಿ ಮಾಡಿಲ್ಲ. ಆದರೆ, ಅಂತಹ ಕಷ್ಟದ ಸೀನ್‌ಗಳಿದ್ದಾಗ ಎಚ್ಚರಿಕೆ ವಹಿಸುತ್ತಿದ್ದೆವು. ಚಿತ್ರ ತಾಂತ್ರಿಕವಾಗಿಯೂ ಚೆನ್ನಾಗಿ ಮೂಡಿಬಂದಿದೆ. ಕಂಟೆಂಟ್ ಈಸ್ ಕಿಂಗ್ ಅಂತಾರಲ್ಲ, ಹಾಗೆಯೇ ಉತ್ತಮ ಕಂಟೆಂಟ್ ಇರುವ ಚಿತ್ರವಿದು’ ಎಂದು ಹೇಳಿಕೊಳ್ಳುತ್ತಾರೆ.

ಹಳೇ ಟೈಟಲ್, ಹೊಸ ಕಥೆ:ಅನಂತ್ ನಾಗ್, ಲಕ್ಷ್ಮೀ ಅಭಿನಯದ ‘ನಾ ನಿನ್ನ ಬಿಡಲಾರೆ’ 1979ರಲ್ಲಿ ಬಿಡುಗಡೆಯಾಗಿತ್ತು. ಅದೇ ಶೀರ್ಷಿಕೆಯಲ್ಲಿ ಅಂಬಾಲಿ ಭಾರತಿ ಜತೆಗೆ ಹೇಮಂತ್ ಹೆಗಡೆ ನಿರ್ದೇಶನದ ಎರಡು ಚಿತ್ರಗಳು ಸೆಟ್ಟೇರಿದ್ದವು. ಎರಡೂ ತಂಡಗಳ ನಡುವೆ ಟೈಟಲ್ ವಿಷಯಕ್ಕೆ ಸ್ವಲ್ಪ ಗೊಂದಲವೂ ಮೂಡಿತ್ತು. ಈ ಬಗ್ಗೆ, ‘ನಮ್ಮ ಚಿತ್ರದ ಮೂರು ಶೆಡ್ಯೂಲ್ ಶೂಟಿಂಗ್ ಆದಾಗ ಹೇಮಂತ್ ಹೆಗಡೆ ಅವರ ಇದೇ ಹೆಸರಿನ ಸಿನಿಮಾ ಮುಹೂರ್ತ ಕಂಡಿತು. ಅವರನ್ನು ಸಂಪರ್ಕಿಸಿದಾಗ ಯಾವುದು ಮೊದಲು ಸೆನ್ಸಾರ್ ಕಾಣುತ್ತೋ ಅವರು ಮೊದಲು ರಿಲೀಸ್ ಮಾಡಿದರಾಯಿತು ಎಂದರು. ಅಂತೆಯೇ ನಾವು ಆ ವಿಚಾರವನ್ನು ಎಳೆಯಲು ಹೋಗಲಿಲ್ಲ’ ಎನ್ನುತ್ತಾರೆ ಭಾರತಿ.