ಬೆಂಗಳೂರು: ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಕಾರಣ ಎಂಬ ಚಲವಾದಿ ನಾರಾಯಣ ಸ್ವಾಮಿ ಸವಾಲಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ದಾಖಲೆ ಬಿಡುಗಡೆ(Ambedkar's defeat: Priyank Kharge releases document to challenge Narayanaswamy) ಮಾಡಿ ರಾಜೀನಾಮೆಗೆ ಆಗ್ರಹಿಸಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ಕೇಂದ್ರ ಸರ್ಕಾರ ಸಂಗ್ರಹಿಸಿರುವ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಅವುಗಳನ್ನು ಪರಿಶೀಲಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ವನವಾಸ ಸ್ವೀಕರಿಸಿ ಎಂದು ಟಾಂಗ್ ಕೊಟ್ಟರು.
ಅಂಬೇಡ್ಕರ್ ಸೋಲಿಗೆ ಸಾವರ್ಕರ್ ಕಾರಣ ಎಂದು ಸಾಬೀತುಪಡಿಸಿದರೆ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಜೈರಾಂ ರಮೇಶ್ ಹಾಗೂ ತಮಗೆ ತಲಾ 1.01 ಲಕ್ಷ ರೂ.ನಂತೆ 4.04 ರೂ.ಗಳನ್ನು ೋಷಿಸಿದ್ದಾರೆ. ಈಗ ನಾವು ಸಾಬೀತುಪಡಿಸಿದ್ದೇವೆ. ಆ ಹಣವನ್ನು ಗ್ರಾಮೀಣಾಭಿವೃದ್ಧಿ ಕೇಂದ್ರದ ಅರಿವು ಕೇಂದ್ರಕ್ಕೆ ಪುಸ್ತಕ ಖರೀದಿಗೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿಯವರು ಒಳ್ಳೆಯ ಬಕ್ರಾ ಹಿಡಿದುಕೊಂಡಿದ್ದಾರೆ. ಮೂರ‌್ನಾಲ್ಕು ಜನರನ್ನು ಬಯ್ಯುವುದಕ್ಕೆ ನಾರಾಯಣಸ್ವಾಮಿ ಅವರನ್ನು ಇಟ್ಟುಕೊಂಡಿದ್ದಾರೆ.
ಚಲವಾದಿ ನಾರಾಯಣಸ್ವಾಮಿಗೆ ಜನಾಭಿಪ್ರಾಯ ಇಲ್ಲ. ಹಿಂದೆ ನಾವು ಟಿಕೆಟ್ ಕೊಡುವಾಗ ಯಾಕೆ ಸರ್ ಅವರು ಸೋಲುತ್ತಾರೆ ಎಂದು ಸ್ಥಳೀಯರು ಹೇಳುತ್ತಿದ್ದರು. ಬಿಜೆಪಿ ಹಿಂದೆ ಚಡ್ಡಿ ಅಭಿಯಾನ ಮಾಡಿದಾಗ ಎಸ್‌ಸಿ ಮೋರ್ಚಾದವರಿಗೆ ಚಡ್ಡಿ ಹೋರಲು ಬಿಟ್ಟರು. ಹಳ್ಳಿಗಳಲ್ಲಿ ಹಾಕಿ ಬಿಟ್ಟ ಚಡ್ಡಿಗಳನ್ನು ಎಸ್‌ಸಿ ಮೋರ್ಚದವರು ಮಾತ್ರ ಹೊತ್ತು ಪ್ರತಿಭಟಿಸಿದರು. ಕಟೀಲ್ ಖಾಲಿ ಬುಟ್ಟಿಯನ್ನೂ ಹೊರಲಿಲ್ಲ. ಚಲವಾದಿಯವರೇ ಸ್ವಾಭಿಮಾನಕ್ಕೆ ಧಕ್ಕೆ ಬರಲಿಲ್ಲವೆ? ಎಂದು ೆಟೋ ಪ್ರದರ್ಶಿಸಿ ಕೆಣಕಿದರು. 24 ಗಂಟೆ ಒಳಗಾಗಿ ರಾಜೀನಾಮೆ ಕೊಟ್ಟರೆ ನಿಜವಾಗಿ ನೀವು ಛಲವಾದಿ. ಇಲ್ಲದಿದ್ದರೆ ನಿಮ್ಮ ಮಾತಿಗೆ ಇನ್ನು ಮೇಲೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ತಿರುಗೇಟು ನೀಡಿದರು.
ಅಂಬೇಡ್ಕರ್ ತಮ್ಮ ಸೋಲಿನ ಕುರಿತು ಬರೆದ ಪತ್ರ ಸರಿ ಇದ್ದರೆ ಕಾಲಿಗೆ ಬಿದ್ದು ಕ್ಷಮೆ ಕೋರಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಚಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಮಾತಿನಂತೆ ನಡೆದುಕೊಳ್ಳಬೇಕಲ್ಲವೆ ಎಂದು ಪ್ರಶ್ನಿಸಿದರು.
ವಿಧಾನಸೌದದಲ್ಲಿ ಪಬ್ಲಿಕ್ ಮೀಟಿಂಗ್ ಕರೆದು ಅಂಬೇಡ್ಕರ್ ಲೆಟರ್ ಬಗ್ಗೆ ಚರ್ಚೆ ಆಗಲಿ ಎಂದು ಸವಾಲೆಸೆದರು. ಅಂಬೇಡ್ಕರ್ ಪತ್ರದ ಸತ್ಯಾಸತ್ಯತೆ ತಿಳಿಯಲು ಬಿಜೆಪಿ ನಾಯಕರು ದೆಹಲಿ ಪ್ರವಾಸ ಮಾಡಲಿ. ಅದರ ಖರ್ಚು-ವೆಚ್ಚ ಕಾಂಗ್ರೆಸ್ ಕೊಡುತ್ತದೆ. ಅಲ್ಲಿಗೆ ಹೋಗಲು ಮುಜುಗರವಾದರೆ ಕೇಂದ್ರ ಸರ್ಕಾರದ ವೆಬ್ ಸೈಟ್‌ನಲ್ಲಿ ಪತ್ರ ಲಭ್ಯವಿದೆ. ಅದನ್ನು ಪರಿಶೀಲಿಸಲಿ ಎಂದು ಹೇಳಿದರು.
ಸಂವಿಧಾನ ಅಂಗೀಕರಿಸುವಾಗ ಕಾಂಗ್ರೆಸ್ ಆಡಳಿತದಲ್ಲಿ ಇರಲಿಲ್ಲ ಎಂದಿದ್ದರೆ ಪಾರ್ಲಿಮೆಂಟಿನಲ್ಲಿ ಕೋಲಾಹಲ ಆಗುತ್ತಿತ್ತು. ಕಾಂಗ್ರೆಸ್ ಶಿಸ್ತಿನಿಂದ ಸಂವಿಧಾನ ಅಂಗೀಕಾರವಾಗಲು ಸಾಧ್ಯವಾಯಿತು ಎಂದು ಅಂಬೇಡ್ಕರ್ ಅವರು ಪಾರ್ಲಿಮೆಂಟಿನಲ್ಲಿ ಹೇಳಿದ್ದಾರೆ. ಬೇಕಿದ್ದರೆ ದಾಖಲೆ ನೋಡಿ. ಬಿಜೆಪಿಯವರಿಗೆ ಇತಿಹಾಸ ಬೇಕಿಲ್ಲ ಎಂದು ವ್ಯಂಗ್ಯವಾಡಿದರು.