ನ್ಯೂಸ್

ಅಂಬೇಡ್ಕರ್ ನಿಗಮದಿಂದ ಅರ್ಹರಿಗೆ ಸೌಲಭ್ಯ ತಲುಪಿಸಿ

ಶಿವಮೊಗ್ಗ: ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಗೊಂದಲದ ಗೂಡಾಗಿರುವ ಸರ್ಕಾರಿ ಸೌಲಭ್ಯಗಳು ಅರ್ಹರಿಗೆ ಸಮರ್ಪಕವಾಗಿ ಸಿಗುವಂತೆ ಮಾಡುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಶಿಕಾರಿಪುರದ ಮಾ ಜನ್ ಜಾಗೃತಿ ಸಮಿತಿ ಪದಾಧಿಕಾರಿಗಳು ಬುಧವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜನರ ಆರ್ಥಿಕ ಕಲ್ಯಾಣಕ್ಕಾಗಿ ನಿಗಮದಿಂದ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಆದರೆ ಇದುವರೆಗೆ ಯಾವುದೇ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಒಂದಿಲ್ಲೊಂದು ಕಾರಣಗಳಿಂದ ತಲುಪುತ್ತಿಲ್ಲ ಎಂದು ಕಿಡಿಕಾರಿದರು.

2022-23ನೇ ಸಾಲಿನಲ್ಲಿ ನೇರ ಸಾಲ, ಸ್ವಯಂ ಉದ್ಯೋಗ, ಕೃಷಿ ಕಾರ್ಮಿಕರಿಗೆ ಭೂ ಒಡೆತನ, ಮೈಕೋ ಕ್ರೆಡಿಟ್ ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಣೆ, ಗಂಗಾ ಕಲ್ಯಾಣ ಯೋಜನೆ, ಸಮೃದ್ಧಿ ಯೋಜನೆ, ಐರಾವತ ಯೋಜನೆ ಸೇರಿ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿ ಮಾಡಲು ನಿಗಮಕ್ಕೆ ಸೂಕ್ತ ನಿರ್ದೇಶನ ನೀಡಿದೆ. ಆದರೂ ಈ ಯೋಜನೆಗಳನ್ನು ಜಾರಿಯಾಗುತ್ತಿಲ್ಲ ಎಂದು ದೂರಿದರು.

ವಿವಿಧ ಸೌಲಭ್ಯಗಳನ್ನು ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಹಾಕಬೇಕಿದೆ. ಆದರೆ ಸರ್ವರ್ ಸಮಸ್ಯೆ, ನೆಟ್‌ವರ್ಕ್ ಸಮಸ್ಯೆಯಿಂದ ಜನರು ಹೈರಾಣಾಗಿದ್ದಾರೆ. ಹಾಗಾಗಿ ಸರ್ಕಾರ ನಿಗಮದಲ್ಲಿ ಜನಸಂಖ್ಯೆ ಆಧಾರದ ಮೇಲೆ ಅನುದಾನ ಮೀಸಲಿಡುವುದು ಮತ್ತು ಹೆಚ್ಚಿನ ಅನುದಾನ ನೀಡುವ ಮೂಲಕ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕಿದೆ. ಇದರಿಂದ ಹಿಂದುಳಿದ ವರ್ಗಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿ ಆಗಲಿದೆ ಎಂದು ಎಡಿಸಿ ಡಾ. ನಾಗೇಂದ್ರ ಹೊನ್ನಾಳಿ ಅವರಿಗೆ ಮನವಿ ಸಲ್ಲಿಸಿದರು.

ಸಮಿತಿ ರಾಜ್ಯಾಧ್ಯಕ್ಷ ಎ.ಕೆ.ಚೌಡಪ್ಪ, ಸದಸ್ಯರಾದ ಎಚ್.ಲೋಕೇಶ್, ಎಲ್.ಮಂಜಪ್ಪ, ರಾಜಪ್ಪ, ಬಸವರಾಜು, ಸಂತೋಷ್, ದಯಾನಂದ, ಕುಮಾರ್ ಮಾಳಗಿ ಮತ್ತಿತರರು ಉಪಸ್ಥಿತರಿದ್ದರು.