ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಕಾಮಗಾರಿಯನ್ನು ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ವೀಕ್ಷಿಸಿದರು. ಗುರುಮೂರ್ತಿ, ಮೈತ್ರಿ ಪಾಟೀಲ್, ಜಗದೀಶ್, ಸವಿತಾ ವಾಸು ಮತ್ತಿತರರಿದ್ದರು. 
ನ್ಯೂಸ್

ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಶೀಘ್ರ ಲೋಕಾರ್ಪಣೆ

ಸಾಗರ: ಶರಾವತಿ ಹಿನ್ನೀರಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರ ದಿನಾಂಕ ನಿಗದಿಪಡಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಮಂಗಳವಾರ ಸೇತುವೆ ಕಾಮಗಾರಿ ವೀಕ್ಷಿಸಿದ ನಂತರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ನಿತಿನ್ ಗಡ್ಕರಿ ಸೇತುವೆ ಲೋಕಾರ್ಪಣೆಗೆ ಬರುವ ನಿರೀಕ್ಷೆ ಇದೆ. ಮಳೆ ಹಿನ್ನೆಲೆಯಲ್ಲಿ ಸುರಕ್ಷತೆ ಇನ್ನಿತರೆ ಸಮಸ್ಯೆ ಇರುತ್ತವೆ. ಈ ಎಲ್ಲವನ್ನು ಗಮನಿಸಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.

ಜು.21ರಿಂದ ಲೋಕಸಭಾ ಅಧಿವೇಶನ ಆರಂಭವಾಗಲಿದೆ. ಇದಕ್ಕೂ ಮೊದಲು ಅಥವಾ ನಂತರ ಸೇತುವೆ ಲೋಕಾರ್ಪಣೆಗೆ ದಿನಾಂಕ ನಿಗದಿಯಾಗಲಿದೆ. ಕಾರ್ಯಕ್ರಮ ನಡೆಸಲು ಸ್ಥಳ ವೀಕ್ಷಿಸಲಾಗಿದೆ. ಇನ್ನೊಮ್ಮೆ ಎಲ್ಲರ ಜತೆ ಸಭೆ ನಡೆಸಿ ಕಾರ್ಯಕ್ರಮ ರೂಪಿಸಲಾಗುತ್ತದೆ. ಸೇತುವೆಯಿಂದ ಶರಾವತಿ ಸಂತ್ರಸ್ತರಿಗೆ ಅನುಕೂಲವಾಗಿದೆ. ಜತೆಗೆ 900 ಕೋಟಿ ರೂ. ವೆಚ್ಚದಲ್ಲಿ ಸಾಗರದಿಂದ ಮರಕುಟಿಕವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶರಾವತಿ ಹಿನ್ನೀರಿನ ಜನರ ದಶಕಗಳ ಕನಸು ಸಾಕಾರಗೊಳ್ಳುತ್ತಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ದೇಶದ ಎರಡನೇ ಅತಿ ಉದ್ದದ ಸೇತುವೆ ಎಂಬ ಹೆಗ್ಗಳಿಕೆಗೆ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಭಾಜನವಾಗಲಿದೆ. ಏಳು ದಶಕಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಪ್ರತಿಲ ಸಿಕ್ಕಿದೆ. ಬಿ.ಎಸ್.ಯಡಿಯೂರಪ್ಪ ಸಂಸದರಾಗಿದ್ದಾಗ ಸೇತುವೆ ನಿರ್ಮಾಣಕ್ಕೆ ಒತ್ತಡ ತಂದಾಗ ಅದಕ್ಕೆ ಯಶಸ್ಸು ದೊರೆತಿದೆ. ಬಿ.ವೈ.ರಾಘವೇಂದ್ರ ಅವರ ಇಚ್ಛಾಶಕ್ತಿಯಿಂದ ವಿಮಾನ ನಿಲ್ದಾಣ ಮತ್ತು ಸಿಗಂದೂರು ಸೇತುವೆ ನಿರ್ಮಾಣವಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಪ್ರಮುಖರಾದ ಗುರುಮೂರ್ತಿ, ಪ್ರಸನ್ನ ಕೆರೆಕೈ, ಟಿ.ಡಿ.ಮೇಘರಾಜ್, ಗಣೇಶ್‌ಪ್ರಸಾದ್, ಮಲ್ಲಿಕಾರ್ಜುನ ಹಕ್ರೆ, ಶ್ರೀನಿವಾಸ್ ಮೇಸ್ತ್ರಿ, ಪ್ರೇಮಾ ಸಿಂಗ್, ಮಧುರಾ ಶಿವಾನಂದ್, ವಿ.ಮಹೇಶ್, ಕೊಟ್ರಪ್ಪ, ಮಂಜಯ್ಯ ಜೈನ್ ಇತರರಿದ್ದರು.