ನವದೆಹಲಿ: ದೇಶದ ಶ್ರೀಮಂತ ಉದ್ಯಮಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ನ ಚೇರ್ಮನ್ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಅತ್ಯುನ್ನತ ಝಡ್ ಪ್ಲಸ್ (Z+) ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
ಭಾರತಾದ್ಯಂತ ಮತ್ತು ವಿದೇಶದಲ್ಲೂ ಅಂಬಾನಿ ಕುಟುಂಬಕ್ಕೆ ಭದ್ರತೆ ಒದಗಿಸಲು ಕೋರ್ಟ್ ಸೂಚನೆ ನೀಡಿದೆ. ಸಂಪೂರ್ಣ ಭದ್ರತಾ ವೆಚ್ಚವನ್ನು ಅಂಬಾನಿ ಅವರೇ ಭರಿಸಬೇಕೆಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂದು ದ್ವಿಸದಸ್ಯ ಪೀಠವು ಸೋಮವಾರ ಈ ನಿರ್ದೇಶನವನ್ನು ಹೊರಡಿಸಿದೆ.
ಮಹಾರಾಷ್ಟ್ರ ಗೃಹ ಸಚಿವಾಲಯಕ್ಕೆ ಅಂಬಾನಿ ಕುಟುಂಬದ ಭದ್ರತಾ ಜವಾಬ್ದಾರಿಯನ್ನು ಕೋರ್ಟ್ ಹೊರಿಸಿದೆ. ಬೆದರಿಕೆ ಇದ್ದಲ್ಲಿ ತಮ್ಮದೇ ಖರ್ಚಿನಲ್ಲಿ ಭದ್ರತೆಯನ್ನು ಪಡೆಯಬಹುದು ಮತ್ತು ಉಳಿದುಕೊಳ್ಳುವ ಯಾವುದೇ ನಿರ್ಧಿಷ್ಟ ಸ್ಥಳದ ಮೇಲೆ ನಿರ್ಬಂಧ ಹೇರಲಾಗದು ಎಂದು ನ್ಯಾಯಾಲಯ ಹೇಳಿದೆ.
ಮುಕೇಶ್ ಅಂಬಾನಿ ಪರ ಖ್ಯಾತ ನ್ಯಾಯವಾದಿ ಮುಕುಲ್ ರೋಹಟಗಿ ಅವರು ವಕಾಲತು ವಹಿಸಿದರು. ಅಂಬಾನಿ ಕುಟುಂಬಕ್ಕೆ ನಿರಂತರ ಬೆದರಿಕೆಗಳು ಬರುತ್ತಿರುವುದನ್ನು ಮುಂಬೈ ಪೊಲೀಸರು, ಕೇಂದ್ರ ಗೃಹ ಸಚಿವಾಲಯ ಮೌಲ್ಯಮಾಪನ ಮಾಡಿದ್ದು, ಇದರ ಆಧಾರದ ಮೇಲೆ ನ್ಯಾಯಾಲಯ ಭದ್ರತೆ ಒದಗಿಸಲು ಸೂಚನೆ ನೀಡಿದೆ. (ಏಜೆನ್ಸೀಸ್)