ನವದೆಹಲಿ: ಟೆಕ್ ದೈತ್ಯ ಕಂಪನಿಗಳಾದ ಟಿಸಿಎಸ್, ಮೈಕ್ರೋಸಾಫ್ಟ್, ಇನ್ಫೋಸಿಸ್ ಕೆಲವು ತಿಂಗಳುಗಳ ಹಿಂದಷ್ಟೇ ತನ್ನ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಬಿಸಾಡಿದ (Lay Off) ವಿಷಯ ಬಹುತೇಕರಿಗೆ ಗೊತ್ತೇ ಇದೆ. ಇದಕ್ಕೆ ಸಂಸ್ಥೆಗಳು ಕೊಟ್ಟ ಕಾರಣ ಹಲವು. ಆದರೆ, ಮುಖ್ಯ ಕಾರಣವೇನು? ಎಂದು ನೋಡುವುದಾದರೆ ಅದು ಕೃತಕ ಬುದ್ಧಿಮತ್ತೇ (ಎಐ) ಎಂಬುದೇ ಸದ್ಯ ಬೇಸರದ ಸಂಗತಿ. ಇದೀಗ ಈ ಸಾಲಿನಲ್ಲಿ ಅಮೆಜಾನ್ ಮುಂಚೂಣಿಯಲ್ಲಿದೆ.
ರಾಯಿಟರ್ಸ್ ಇತ್ತೀಚಿನ ವರದಿ ಪ್ರಕಾರ, ಸಾಂಕ್ರಾಮಿಕ ರೋಗದ ಗರಿಷ್ಠ ಬೇಡಿಕೆಯ ಸಮಯದಲ್ಲಿ ಆದಷ್ಟು ವೆಚ್ಚಗಳನ್ನು ಕಡಿತಗೊಳಿಸುವ ಮತ್ತು ಹೆಚ್ಚುವರಿ ನೇಮಕಾತಿಯನ್ನು ಸರಿದೂಗಿಸಲು ಸಂಸ್ಥೆಯು ಈ ನಿರ್ಧಾರ ಕೈಗೊಂಡಿದೆ ಎಂದು ಉಲ್ಲೇಖವಾಗಿದೆ. ಆದರೆ, ಇದೆಲ್ಲಕ್ಕಿಂತ ಅತೀ ಮುಖ್ಯವಾಗಿ ಎಐ ಮೇಲೆ ಹೆಚ್ಚು ಬಂಡವಾಳ ಹೂಡಿರುವ ಅಮೆಜಾನ್, ಇದೀಗ 30 ಸಾವಿರಕ್ಕೂ ಅಧಿಕ ಉದ್ಯೋಗಿಗಳಿಗೆ ಗುಡ್ಬೈ ಹೇಳಲು ಸಜ್ಜಾಗಿದೆ.
2022ರ ಕೊನೆಯಿಂದ ಇಲ್ಲಿಯವರೆಗೆ ಸುಮಾರು 27,000 ಉದ್ಯೋಗಗಳನ್ನು ಅಮೆಜಾನ್ ಕಿತ್ತುಬಿಸಾಡಿದೆ. ಈ ವಜಾಗೊಳಿಸುವಿಕೆ ಪ್ರಕ್ರಿಯೆಯು ಅತಿದೊಡ್ಡ ಉದ್ಯೋಗ ಕಡಿತವಾಗಿದ್ದು, 30,000 ಉದ್ಯೋಗ ಕಡಿತವು ಅಮೆಜಾನ್‌ನ 1.55 ಮಿಲಿಯನ್ ಒಟ್ಟು ಉದ್ಯೋಗಿಗಳಲ್ಲಿ ಒಂದು ಸಣ್ಣ ಶೇಕಡಾವಾರು ಪ್ರಮಾಣವನ್ನು ಪ್ರತಿನಿಧಿಸುತ್ತದೆ ಎಂಬುದು ಗಮನಾರ್ಹ.
ರಾಯಿಟರ್ಸ್ ಪ್ರಕಾರ, ಕಳೆದ ಎರಡು ವರ್ಷಗಳಿಂದ ಸಂವಹನ, ಪಾಡ್‌ಕ್ಯಾಸ್ಟಿಂಗ್ ಮತ್ತು ಇತರ ವಿಭಾಗಗಳನ್ನು ಒಳಗೊಂಡಂತೆ ಬಹು ವಿಭಾಗಗಳಲ್ಲಿ ಅಲ್ಪ ಸಂಖ್ಯೆಯ ಉದ್ಯೋಗಗಳನ್ನು ಸಂಸ್ಥೆ ಕಡಿತಗೊಳಿಸಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾಡಿರುವ ಕಟ್ ಆಫ್ಗಳು, ಮಾನವ ಸಂಪನ್ಮೂಲ (ಹೆಚ್ಆರ್), ಪೀಪಲ್ ಎಕ್ಸ್‌ಪೀರಿಯೆನ್ಸ್ ಮತ್ತು ಟೆಕ್ನಾಲಜಿ ಎಂದು ಕರೆಯಲ್ಪಡುವ ಒಂದಷ್ಟು ವಿಭಾಗಗಳ ಮೇಲೆ ಎಂದು ತಿಳಿದುಬಂದಿದೆ.
ಮತ್ತೊಂದು ಹುಬ್ಬೇರಿಸುವ ಸಂಗತಿ ಏನೆಂದರೆ, 2033ರೊಳಗೆ ಅಮೆಜಾನ್ ತನ್ನ 6 ಲಕ್ಷ ಕಾರ್ಮಿಕರನ್ನು ರೋಬೋಟ್, ಕೃತಕ ಬುದ್ಧಿಮತ್ತೆ ಮತ್ತು ಇತರೆ ಪವರ್ಫುಲ್ ಹಾಗೂ ವೇಗವಾಗಿ ಕೆಲಸ ಮಾಡುವ ಟೆಕ್ನಾಲಜಿಯಿಂದ ಬದಲಾಯಿಸಲಿದೆ. ಇಂದಿನಿಂದಲೇ 30 ಸಾವಿರ ಉದ್ಯೋಗಿಗಳ ವಜಾ ಪ್ರಕ್ರಿಯೆಯನ್ನು ಆರಂಭಗೊಳಿಸಿರುವ ಕಂಪನಿ, ಒಂದು ವಾರದೊಳಗೆ ಈ ಕೆಲಸವನ್ನು ಮುಗಿಸಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಭವಿಷ್ಯದಲ್ಲಿ ದೈತ್ಯ ಟೆಕ್ ಹಬ್ಗಳಲ್ಲಿ ರೋಬೋಟ್, ಎಐ ಮಾತ್ರ ಅಸ್ತಿತ್ವದಲ್ಲಿರುತ್ತವೆ ಎಂಬುದು ಶತಸಿದ್ಧ,(ಏಜೆನ್ಸೀಸ್).