ಯಳಂದೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕಂದಹಳ್ಳಿ ಮಹದೇಶ್ವರ ದೇಗುಲದಲ್ಲಿ ಮಂಗಳವಾರ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ನೆರವೇರಿತು.
ದೀಪಾವಳಿ ಅಮಾವಾಸ್ಯೆಯಾದ್ದರಿಂದ ಬೆಳಗ್ಗೆಯಿಂದಲೇ ದೇವರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜೆಗಳು ನೆರವೇರಿದವು. ಇದಕ್ಕಾಗಿ ದೇಗುಲವನ್ನು ಹಸಿರು ಚಪ್ಪರ, ತಳಿರು ತೋರಣ, ಬಗೆಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಹರಕೆ ಹೊತ್ತ ಭಕ್ತರು ದಂಡಗೋಲನ್ನು ಹಿಡಿದು ರಥವನ್ನು ಎಳೆಸುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು. ನೆರೆದಿದ್ದ ಭಕ್ತರಿಗೆ ದೇಗುಲದ ಸಮಿತಿ ವತಿಯಿಂದ ಪ್ರಸಾದವನ್ನು ವಿನಿಯೋಗ ಮಾಡಲಾಯಿತು. ಸಾವಿರಾರು ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.