ನ್ಯೂಸ್

ಶೂಟಿಂಗ್ ಸೆಟ್​​ನಲ್ಲಿ ಎಲ್ಲರಿಗೂ ತನ್ನ ಕೈಯಾರೆ ಬಿರಿಯಾನಿ ಬಡಿಸಿದ Amaran ನಟ ಶಿವ ಕಾರ್ತಿಕೇಯನ್! ವಿಡಿಯೋ ವೈರಲ್

ಹೈದ್ರಾಬಾದ್​​:  ಅಮರನ್ ( Amaran  )​  ಸಿನಿಮಾ ಬಾಕ್ಸ್​​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​​ ಮಾಡುತ್ತಿದೆ. ಈ ಚಿತ್ರವು ತಮಿಳಿನ ಜತೆಗೆ ಕನ್ನಡದಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾಗಿ ಮೂರು ವಾರ ಕಳೆದರೂ ಹಲವೆಡೆ ಅಮರನ್ ಚಿತ್ರಮಂದಿರಗಳು ಹೌಸ್ ಫುಲ್ ಆಗುತ್ತಿವೆ.

ಇದುವರೆಗೆ ಅಮರನ್ ಚಿತ್ರ ರೂ. 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರಿಂದ ಇಡೀ ಚಿತ್ರತಂಡ ಸಂತಸದಲ್ಲಿ ಮುಳುಗಿದೆ. ಅಮರನ್ ಚಿತ್ರದ ಯಶಸ್ಸಿನ ಖುಷಿಯಲ್ಲಿರುವಾಗಲೇ ಶಿವ ಕಾರ್ತಿಕೇಯನ್ ( siva karthikeyan ) ಮತ್ತೊಂದು ಚಿತ್ರದ ಚಿತ್ರೀಕರಣಕ್ಕೆ ಸೇರಿಕೊಂಡರು. ಎಸ್ ಕೆ 23 ವರ್ಕಿಂಗ್ ಟೈಟಲ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಶೂಟಿಂಗ್ ವೇಗವಾಗಿ ಸಾಗುತ್ತಿದೆ.

ಇತ್ತೀಚೆಗೆ ಈ ಸಿನಿಮಾದ ಸೆಟ್‌ನಲ್ಲಿ ಅಮರನ್ ಯಶಸ್ಸಿನ ಸಂಭ್ರಮಾಚರಣೆ ನಡೆಯಿತು. ಬಳಿಕ ಅದೇ ಶೂಟಿಂಗ್ ಸೆಟ್ ನಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಈ ಸಂದರ್ಭದಲ್ಲಿ ನಾಯಕ ಶಿವ ಕಾರ್ತಿಕೇಯನ್ ಅವರು ಎಲ್ಲರಿಗೂ ಬಿರಿಯಾನಿ ಬಡಿಸಿದರು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಯೋತ್ಪಾದಕರ ಕೈಯಲ್ಲಿ ಪ್ರಾಣ ಕಳೆದುಕೊಂಡ ಮೇಜರ್ ಮುಕುಂದ್ ವರದರಾಜನ್ ಅವರ ಜೀವನ ಕಥೆಯನ್ನು ಆಧರಿಸಿದ ಚಿತ್ರ ಅಮರನ್. ಮುಕುಂದ್ ಪಾತ್ರದಲ್ಲಿ ಶಿವ ಕಾರ್ತಿಕೇಯನ್ ಮತ್ತು ಅವರ ಪತ್ನಿ ಇಂದು ವರ್ಗೀಸ್ ರೆಬೆಕ್ಕಾ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ.

ಅಮರನ್ ಚಿತ್ರವನ್ನು ರಾಜ್ ಕಮಲ್ ಫಿಲಂಸ್ ಇಂಟರ್ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಖ್ಯಾತ ನಟ ಕಮಲ್ ಹಾಸನ್ ನಿರ್ಮಿಸಿದ್ದಾರೆ.  ಅಮರನ್ ಶಿವ ಕಾರ್ತಿಕೇಯನ್ ಅವರ ಚಲನಚಿತ್ರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈಗಾಗಲೇ ರೂ. 300 ಕೋಟಿ ದಾಟಿರುವ ಈ ಸಿನಿಮಾ ಶೀಘ್ರದಲ್ಲೇ ರೂ. 400 ಕೋಟಿ ಕ್ಲಬ್‌ಗೆ ಕಾಲಿಡಲಿದೆ.