ನ್ಯೂಸ್

ಮಳೆಗಾಲದ ವೇಳೆ ಸದಾ ಸನ್ನದ್ಧರಾಗಿರಿ: ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚನೆ

ಬೆಂಗಳೂರು: ಮಹಾನಗರದಲ್ಲಿ ಮಳೆಗಾಲದ ವೇಳೆ ಪಾಲಿಕೆ ಅಧಿಕಾರಿಗಳು ಸದಾ ಸನ್ನದ್ಧರಾಗಿದ್ದು, ಸಮಸ್ಯೆ ಉಂಟಾಗುವ ಸ್ಥಳಗಳಿಗೆ ತೆರಳಿ ಪರಿಹಾರದ ಉಸ್ತುವಾರಿ ವಹಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.

ವಿಕಾಸಸೌಧದ ಬಿಬಿಎಂಪಿ ಸೇರಿ ವಿವಿಧ ಇಲಾಖಾ ಮುಖ್ಯಸ್ಥರ ಸಭೆಯಲ್ಲಿ ಮಳೆ ಅನಾಹುತ ತಡೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ವೇಳೆ ಅವರು ಸೋಮವಾರ ಈ ಸೂಚನೆ ನೀಡಿದರು.

ನಗರದಲ್ಲಿ 209 ಪ್ರವಾಹ ಪೀಡಿತ ಪ್ರದೇಶಗಳಿವೆ. ಈಗಾಗಲೇ 166 ಸ್ಥಳಗಳಲ್ಲಿ ಸಮಸ್ಯೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬಾಕಿ 43 ಕಡೆಗಳಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನಿಗಾ ವಹಿಸಬೇಕಿದ್ದು, ಆಯಾ ವಲಯ ಹಿರಿಯ ಅಧಿಕಾರಿಗಳು ಖುದ್ದು ಸ್ಥಳಪರಿಶೀಲನೆ ನಡೆಸಬೇಕು ಎಂದು ತಾಕೀತು ಮಾಡಿದರು.

ಮಾರ್ಚ್ ತಿಂಗಳಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ 82 ಕಡೆ ನೀರು ನಿಲ್ಲುವ ಸ್ಥಳಗಳನ್ನು ಸಂಚಾರಿ ಪೊಲೀಸರು ಗುರುತಿಸಿದ್ದಾರೆ. ಇವುಗಳನ್ನು ಸಂಬಂಧಿಸಿದ ಇಂಜಿನಿಯರ್‌ಗಳು ಸಂಚಾರ ಪೊಲೀಸರು ನೀಡಿರುವ ಪಟ್ಟಿಯನ್ವಯ ಸ್ಥಳ ಪರಿಶೀಲಿಸಿ ಸೈಡ್ ಡ್ರೈನ್‌ಗಳಲ್ಲಿ ಹೂಳೆತ್ತಿ ಸ್ವಚ್ಚಗೊಳಿಸಬೇಕು. ನಗರದಲ್ಲಿ 20 ಅಗ್ನಿಶಾಮಕ ಠಾಣೆಗಳು ಹಾಗೂ 1 ಎಸ್‌ಡಿಆರ್‌ಎಫ್​ ಕಂಪನಿಯಿದ್ದು, ಎಲ್ಲವೂ ಮಳೆಗಾಲ ಮುಗಿಯುವವರೆಗೂ ಸಕ್ರಿಯವಾಗಿರಬೇಕು. ಆಯಾ ವಲಯ ವ್ಯಾಪ್ತಿಯಲ್ಲಿನ ಅಗ್ನಿಶಾಮಕ ಠಾಣೆಗಳ ಜತೆ ವಲಯ ಆಯುಕ್ತರು ಸದಾ ಸಂಪರ್ಕದಲ್ಲಿರಬೇಕು ಎಂದು ಸೂಚಿಸಿದರು.

ರಸ್ತೆಗುಂಡಿ ತ್ವರಿತವಾಗಿ ಮುಚ್ಚಿರಿ:

ನಗರದಲ್ಲಿ ಸಂಚಾರ ಪೊಲೀಸರು 647 ರಸ್ತೆ ಗುಂಡಿಗಳನ್ನು ಮುಚ್ಚಲು ಪಟ್ಟಿ ನೀಡಿದ್ದಾರೆ. ಅದರಂತೆ ಈಗಾಗಲೇ 323 ಅನ್ನು ಮುಚ್ಚಿದ್ದು, 239 ಬಾಕಿಯಿದೆ. ಇತರ 90 ರಸ್ತೆಗುಂಡಿಗಳು ಅನ್ಯ ಇಲಾಖೆಗಳಿಗೆ ಬರಲಿದ್ದು, 5 ರಸ್ತೆಗಳು ಬಿಬಿಎಂಪಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಇದನ್ನಾಧರಿಸಿ ಎಸಿಎಸ್ ಅವರು ಎಲ್ಲ ಗುಂಡಿಗಳನ್ನು ಮುಚ್ಚಲು ಸೂಚಿಸಿದರು.

ಅಧಿಕಾರಿಗಳ ವ್ಯಾಟ್ಸಪ್ ಗ್ರೂಪ್ ರಚಿಸಿ:

ಪಾಲಿಕೆ ಕೇಂದ್ರ ಕಚೇರಿ ಸಹಿತ 8 ವಲಯ ಕಚೇರಿ ಸೇರಿ 9 ಶಾಶ್ವತ ನಿಯಂತ್ರಣ ಕೊಠಡಿಗಳು ಹಾಗೂ 63 ಉಪ ವಿಭಾಗಗಳ ನಿಯಂತ್ರಣ ಕೊಠಡಿಗಳು ಸ್ಥಾಪಿಸಲಾಗಿದೆ. ಎಲ್ಲ ನಿಯಂತ್ರಣ ಕೊಠಡಿಗಳಿಗೆ ಪಾಲಿಕೆ, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳನ್ನು ನಿಯೋಜಿಸಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ವ್ಯಾಟ್ಸಪ್ ಗ್ರೂಪ್ ರಚಿಸಿ ಅದರ ಮೂಲಕ ಸಮನ್ವಯ ಮಾಡಿಕೊಂಡು ಮಳೆಯಿಂದಾಗುವ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಬೇಕು ಎಂದು ತುಷಾರ್ ಗಿರಿನಾಥ್ ಸೂಚನೆ ನೀಡಿದರು.

ಸಭೆಯಲ್ಲಿ ವಿಶೇಷ ಆಯುಕ್ತರಾದ ಡಾ. ಕೆ.ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಸುರಳ್ಕರ್ ವಿಕಾಸ್ ಕಿಶೋರ್, ಪ್ರೀತಿ ಗೆಹ್ಲೋಟ್, ನವೀನ್ ಕುಮಾರ್ ರಾಜು, ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್, ಅಗ್ನಿಶಾಮಕ ಇಲಾಖೆಯ ಎಡಿಜಿಪಿ ಎಂ.ನಂಜುಂಡಸ್ವಾಮಿ, ಐಜಿಪಿ ರವಿ ಡಿ. ಚನ್ನಣ್ಣನವರ್ ಉಪಸ್ಥಿತರಿದ್ದರು.