ನ್ಯೂಸ್

ಪ್ರಧಾನಿಯೇ ಒಪ್ಪಿದರೂ ಅಧಿಕಾರಿಗಳು ಬೇಗ ಒಪ್ಪಲಿಲ್ಲ; ಮಧ್ಯಮವರ್ಗಕ್ಕೆ ತೆರಿಗೆ ಕಡಿತ ಮಾಡಿದ್ದರ ಹಿಂದಿನ ಸಂಕಷ್ಟ ತೆರೆದಿಟ್ಟ ಹಣಕಾಸು ಸಚಿವೆ

ನವದೆಹಲಿ: ‘ಆದಾಯ ತೆರಿಗೆ ಮಿತಿಯನ್ನು 12.75 ಲಕ್ಷ ರೂ.ಗೆ ಏರಿಸುವ ಮೂಲಕ ಮಧ್ಯಮ ವರ್ಗದ ಜನರಿಗೆ ತೆರಿಗೆ ಕಡಿತ ಮಾಡುವ ಐಡಿಯಾಕ್ಕೆ ಸಂಪೂರ್ಣ ಬೆಂಬಲವಾಗಿ ನಿಂತವರು ಪ್ರಧಾನಿ ನರೇಂದ್ರ ಮೋದಿ. ಆದರೆ ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಟ್ಟು ಒಪ್ಪಿಸುವುದಕ್ಕೇ ಸಾಕಷ್ಟು ಸಮಯ ಬೇಕಾಯಿತು...’

ಶನಿವಾರ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅದರ ಸಿದ್ಧತೆಯ ಹಂತದಲ್ಲಿ ಎದುರಾದ ಸವಾಲುಗಳನ್ನು ತೆರೆದಿಟ್ಟಿದ್ದು ಹೀಗೆ. ಪಿಟಿಐ ಸುದ್ದಿಸಂಸ್ಥೆಗೆ ಭಾನುವಾರ ನೀಡಿರುವ ಸಂದರ್ಶನದಲ್ಲಿ ಅವರು, ‘ಪ್ರಜಾಪ್ರಭುತ್ವದ ಬಗ್ಗೆ ಅಬ್ರಹಾಂ ಲಿಂಕನ್ ಹೇಳುವುದನ್ನೇ ಇಲ್ಲಿ ಉದ್ಧರಿಸುವುದಾದರೆ ಇದು ಜನರಿಂದ, ಜನರಿಗಾಗಿ, ಜನರಿಗೋಸ್ಕರ ರೂಪುಗೊಂಡ ಬಜೆಟ್’ ಎಂದು ಬಣ್ಣಿಸಿದರು.

‘ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿದ್ದರೂ ನಮ್ಮ ಆಶೋತ್ತರಗಳು ಈಡೇರುತ್ತಿಲ್ಲ ಎಂಬುದಾಗಿ ಮಧ್ಯಮ ವರ್ಗದ ಜನ ಹೇಳುತ್ತಿದ್ದುದು ನಮ್ಮ ಕಿವಿಗೆ ಬಿದ್ದಿತ್ತು. ಹಣದುಬ್ಬರದಂತಹ ಅಂಶಗಳು ತಮ್ಮ ಬದುಕಿನ ಮೇಲೆ ಮಾಡುತ್ತಿರುವ ಪರಿಣಾಮಗಳ ವಿಷಯದಲ್ಲಿ ಸರ್ಕಾರ ಏನಾದರೂ ಮಾಡಬೇಕೆಂಬ ಬಯಕೆ ಅವರದಾಗಿತ್ತು. ಇದಕ್ಕೆ ಪ್ರಧಾನಿ ಮೋದಿ ತಕ್ಷಣವೇ ಧನಾತ್ಮಕವಾಗಿ ಸ್ಪಂದಿಸಿದರು. ಇದು ಜನರ ಬಜೆಟ್, ಜನ ಏನನ್ನು ಬಯಸುತ್ತಾರೋ ಅದನ್ನು ಒಳಗೊಂಡಿರಲಿ ಎಂಬ ಆಶಯ ಮೋದಿ ಅವರದಾಗಿತ್ತು. ಆದರೆ ಕಲ್ಯಾಣ ಕಾರ್ಯಕ್ರಮ ಮತ್ತು ಇತರ ಯೋಜನೆಗಳಿಗೆ ಆದಾಯ ಸಂಗ್ರಹದ ಹೊಣೆ ಹೊತ್ತವರು ಹಣಕಾಸು ಸಚಿವಾಲಯದ ಹಾಗೂ ಕೇಂದ್ರ ನೇರ ತೆರಿಗೆ ಮಂಡಳಿಯ ಅಧಿಕಾರಿಗಳು. ಅವರನ್ನು ಒಪ್ಪಿಸುವಷ್ಟರಲ್ಲಿ ಸಾಕುಬೇಕಾಯಿತು’ ಎಂದು ನಿರ್ಮಲಾ ವಿವರಿಸಿದ್ದಾರೆ.

‘ಹೊಸ ತೆರಿಗೆ ಪ್ರಸ್ತಾವಗಳಿಂದಾಗಿ ಮಧ್ಯಮ ವರ್ಗದ ಜನ ಪಾವತಿಸಬೇಕಾದ ತೆರಿಗೆಯ ಪ್ರಮಾಣ ಗಣನೀಯವಾಗಿ ತಗ್ಗುತ್ತದೆ. ಅವರ ಕೈಯಲ್ಲಿ ಹೆಚ್ಚು ಹಣ ಉಳಿಯುತ್ತದೆ. ಉಳಿತಾಯಕ್ಕೆ, ಹೂಡಿಕೆಗೆ, ಗೃಹಬಳಕೆ ವಸ್ತುಗಳನ್ನು ಖರೀದಿಸುವುದಕ್ಕೆ ಆ ಹಣವನ್ನು ಅವರು ಬಳಸಬಹುದು. ಹಲವು ತಿಂಗಳುಗಳಿಂದ ಈ ಬಗ್ಗೆ ಚಿಂತನೆ ನಡೆಯುತ್ತಿತ್ತು. 2024ರ ಜುಲೈ ಬಜೆಟ್ ಸಮಯದಲ್ಲೇ ಜನರ ಅಂತರಂಗದ ಧ್ವನಿ ನಮಗೆ ಕೇಳಿಸಿತ್ತು. ನಾನು ಎಲ್ಲೆಲ್ಲಿ ಪ್ರಯಾಣ ಮಾಡುತ್ತಿದ್ದೆನೋ ಅಲ್ಲೆಲ್ಲ ಜನ ಈ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಅವರೆಲ್ಲರೂ ಹೆಮ್ಮೆಯ ಮತ್ತು ಪ್ರಾಮಾಣಿಕ ತೆರಿಗೆದಾತರು. ನಾವು ತೆರಿಗೆ ನೀಡುವುದನ್ನು ಮುಂದುವರಿಸುತ್ತೇವೆ, ಆದರೆ ಸರ್ಕಾರ ನಮಗಾಗಿ ಏನು ಮಾಡುತ್ತದೆ ಎಂಬುದು ಅವರ ನೇರಪ್ರಶ್ನೆಯಾಗಿತ್ತು. ಇದನ್ನು ಹಲವು ಬಾರಿ ನಾನು ಪ್ರಧಾನಿ ಮೋದಿ ಅವರ ಬಳಿಯೂ ಪ್ರಸ್ತಾಪಿಸಿದ್ದೆ. ಅವರಿಗಾಗಿ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಇಚ್ಛೆ ಪ್ರಧಾನಿಗೂ ಇತ್ತು. ಹಾಗಾಗಿ, ನಿರ್ದಿಷ್ಟ ಪ್ರಸ್ತಾವನೆಯೊಂದಿಗೆ ಬರುವಂತೆ ಪ್ರಧಾನಿ ನನಗೆ ಹೊಣೆ ಹೊರಿಸಿದ್ದರು...’

‘ಕಳೆದ ವರ್ಷ ಜುಲೈ ಬಜೆಟ್ ಮಂಡಿಸಿ ಮುಗಿಯುತ್ತಿದ್ದಂತೆಯೇ ನೇರ ತೆರಿಗೆಯನ್ನು ಸರಳಗೊಳಿಸುವ ಕಾರ್ಯಕ್ಕೆ ಕೈಹಾಕಿದೆವು. ಅಂಕಿಸಂಖ್ಯೆಗಳನ್ನೆಲ್ಲ ಜಾಲಾಡಿ, ಸೂಕ್ತ ಪ್ರಸ್ತಾವನೆ ತಯಾರಿಸಿ ಪ್ರಧಾನಿ ಎದುರು ಮಂಡಿಸಿದೆವು. ಅಗತ್ಯ ಸಲಹೆಗಳನ್ನು ಪ್ರಧಾನಿಯೇ ನೀಡಿದರು. ಅದರ ಪರಿಣಾಮವೇ ನಾನು ಮಂಡಿಸಿದ 2025-26ರ ಬಜೆಟ್. ಸಂಬಂಧಿಸಿದ ಹೊಸ ಕಾನೂನು ಕೂಡ ಸದ್ಯದಲ್ಲೇ ಜಾರಿಯಾಗಲಿದೆ. ಅದರಲ್ಲಿ ಸರಳ ಭಾಷೆ ಇರುತ್ತದೆ. ಅದು ಜನಸ್ನೇಹಿಯಾಗಿರುತ್ತದೆ. ಅದನ್ನು ಪಾಲಿಸುವುದಕ್ಕೆ ಜನರು ಹೆಚ್ಚು ಕಷ್ಟ ಪಡಬೇಕಾಗಿಲ್ಲ’ ಎಂದು ವಿವರಿಸಿದರು.

‘ಪ್ರಧಾನಿ ಕೂಡ ನಿರಂತರವಾಗಿ ಜನರನ್ನು, ಉದ್ಯಮಿಗಳನ್ನು ಭೇಟಿಯಾಗುತ್ತಲೇ ಇರುತ್ತಾರೆ. ಅವರ ಸಮಸ್ಯೆಗಳಿಗೆ ಕಿವಿಯಾಗುತ್ತಿರುತ್ತಾರೆ. ಪರಿಹಾರೋಪಾಯಗಳ ಬಗ್ಗೆ ಚಿಂತಿಸುತ್ತಿರುತ್ತಾರೆ. ಜನರ ಧ್ವನಿಯನ್ನು ಕೇಳಿಸಿಕೊಂಡು ಸ್ಪಂದಿಸುವ ಈ ಸರ್ಕಾರದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಆದರೆ ಈವರೆಗೆ ತೆರಿಗೆ ನೀಡದ ಜನರ ಬಗ್ಗೆಯೂ ನಾವು ಗಮನ ಹರಿಸಬೇಕಾಗಿದೆ. ತೆರಿಗೆ ಪಾವತಿಸುವ ಹೊಣೆಗಾರಿಕೆಯ ಬಗ್ಗೆ ತಿಳಿಸಿಕೊಡಬೇಕಾಗಿದೆ’ ಎಂದು ನಿರ್ಮಲಾ ಹೇಳಿದರು.