ಬಣಕಲ್: ಪ್ರವಾಹ, ಗುಡ್ಡಕುಸಿತದಿಂದ ಮನೆ, ಜಮೀನು ಕೊಚ್ಚಿಕೊಂಡು ಹೋಗಿ ಬಯಲಾಗಿದ್ದ ಪ್ರದೇಶದಲ್ಲಿ ಎಲ್ಲೆಡೆ ಗಿಡಗಳು ಹುಟ್ಟಿ ಹಸಿರು ಚಿಗುರೊಡೆದಿದೆ. ಆದರೆ ಎಲ್ಲವನ್ನೂ ಕಳೆದುಕೊಂಡ ನೆರೆ ಸಂತ್ರಸ್ತರ ಬದುಕು ನಾಲ್ಕು ವರ್ಷವಾದರೂ ಹಸನಾಗಿಲ್ಲ.
2019ರ ಆ.9 ಮಲೆಮನೆ ಗ್ರಾಮಸ್ಥರಿಗೆ ಕರಾಳ ದಿನ. ಕೃಷಿ ಮಾಡಿಕೊಂಡು ಯಾರ ಹಂಗೂ ಇಲ್ಲದೆ ಜೀವನ ನಡೆಸುತ್ತಿದ್ದವರು, ಬೇರೆಯವರಿಗೆ ಕೆಲಸ ಕೊಟ್ಟವರು ಇಂದು ಬಾಡಿಗೆ ಮನೆಯಲ್ಲಿ ವಾಸಿಸುವಂತೆ ಮಾಡಿತು. ಅಂದು ಸುರಿದ ಮಹಾಮಳೆಗೆ ಗುಡ್ಡ ಕುಸಿದು ಮಲೆಮನೆ ಗ್ರಾಮದ ಐದು ಮನೆಗಳು ಕೊಚ್ಚಿಕೊಂಡು ಹೋದವು. ಆ ಪ್ರದೇಶವನ್ನು ಈಗ ನೋಡಿದರೆ ಯಾವುದೋ ಕಾಲದ ಪಳೆಯುಳಿಕೆಗಳಂತೆ ಕಾಣಿಸುತ್ತಿದೆ.
ಪ್ರವಾಹ ಬಂದು ಅನಾಹುತ ಸೃಷ್ಟಿಯಾದಾಗ ಸ್ಥಳ ಪರಿಶೀಲಿಸಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು, ಭೂ ವಿಜ್ಞಾನಿಗಳು ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಹೀಗಾಗಿ ಸರ್ಕಾರ ಪರ್ಯಾಯವಾಗಿ ಮನೆ ಕಟ್ಟಲು ಜಾಗ ಮತ್ತು ಕೃಷಿ ಭೂಮಿ ನೀಡುವ ಭರವಸೆ ನೀಡಿತ್ತು. ನಾಲ್ಕು ವರ್ಷ ಕಳೆದರೂ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಲ್ಲ. ಪುನರ್ವಸತಿ ಕಲ್ಪಿಸುವವರೆಗೆ ಬಾಡಿಗೆ ಮನೆಯಲ್ಲಿರುವಂತೆ ಮತ್ತು ಬಾಡಿಗೆ ಹಣ ನೀಡುವುದಾಗಿ ತಿಳಿಸಿದ್ದ ಸರ್ಕಾರ ಆರಂಭದ 5 ತಿಂಗಳು ಮಾತ್ರ ಬಾಡಿಗೆ ಹಣ ನೀಡಿ ನಂತರ ಮರೆಯಿತು.
ಸರ್ಕಾರ ಬೇರೆ ಜಾಗ ಗುರುತಿಸದ ಕಾರಣ ಬೇರೆಲ್ಲೂ ಹೋಗಲಾಗದೆ ಬಾಡಿಗೆ ಮನೆಯಲ್ಲೂ ಇರಲಾಗದೆ ಅತಂತ್ರ ಸ್ಥಿತಿಯಲ್ಲಿ ನೆರೆ ಸಂತ್ರಸ್ತರಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ತಾಲೂಕಿನ ಹಲವೆಡೆ ಜಾಗ ಗುರುತಿಸಲಾಯಿತು. ಆದರೆ ಆ ಜಾಗ ಅರಣ್ಯ ಇಲಾಖೆಯದ್ದೋ ಅಥವಾ ಕಂದಾಯ ಇಲಾಖೆಯದ್ದೋ ಎಂಬ ಗೊಂದಲದಿಂದ ಪುನರ್ವಸತಿ ಕಾರ್ಯ ನನೆಗುದಿಗೆ ಬಿದ್ದಿದೆ.
ದಯಾಮರಣ ಕೊಡಿ: ಸಂತ್ರಸ್ತರಾದ ಮಲೆಮನೆಯ ಸತೀಶ್, ಅಶ್ವತ್ಥ್, ರಾಜು, ಚಂದ್ರೇಗೌಡ, ರಾಜೇಶ್ ಅವರ ಕುಟುಂಬಗಳು ಇಂದಿಗೂ ಬಾಡಿಗೆ ಮನೆಯಲ್ಲಿವೆ. ಮನೆ ನೆಲಸಮವಾದ ಸಂದರ್ಭದಲ್ಲಿ ಮುಖ್ಯಮಂತ್ರಿ, ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಮಲೆಮನೆ ಗ್ರಾಮಕ್ಕೆ ಆಗಮಿಸಿ ಭರವಸೆ ನೀಡಿದ್ದರೂ ಪುನರ್ವಸತಿ ಕಲ್ಪಿಸಲು ಸಾಧ್ಯವಾಗದಿರುವುದು ನಿರೀಕ್ಷೆ ಹುಸಿಗೊಳಿಸಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಭರವಸೆಗಳ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ. ಇದರಿಂದಾಗಿ ಬೇಸತ್ತು ಕೆಲ ತಿಂಗಳ ಹಿಂದೆ ನೆರೆ ಸಂತ್ರಸ್ತರು ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದರು.
ತಾಲೂಕು ಕಚೇರಿಯಲ್ಲಿ ಆತ್ಮಹತ್ಯೆ ಯತ್ನ: 2013ರ ೆಬ್ರವರಿಯಲ್ಲಿ ಪುನರ್ವಸತಿಗಾಗಿ ಒತ್ತಾಯಿಸಿ ಮೂಡಿಗೆರೆ ತಾಲೂಕು ಕಚೇರಿಯಲ್ಲಿ ನೆರೆಸಂತ್ರಸ್ತರು ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ನೆರೆ ಸಂತ್ರಸ್ತರು ವಿಷ ಸೇವಿಸಿ, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಸ್ಥಳದಲ್ಲಿದ್ದ ಪೊಲೀಸರು ವಿಷದ ಬಾಟಲಿ ಮತ್ತು ಪೆಟ್ರೋಲ್ ಕಸಿದುಕೊಂಡು ದೊಡ್ಡ ಅನಾಹುತ ತಪ್ಪಿಸಿದ್ದರು.
ಸಭೆ ನಡೆಸಿದ್ದ ಶಾಸಕಿ: ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಜೂನ್‌ನಲ್ಲಿ ಮಲೆಮನೆ ನೆರೆಸಂತ್ರಸ್ತರ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿದ್ದರು. ಜಿಲ್ಲಾಧಿಕಾರಿ, ತಹಸೀಲ್ದಾರ್ ಭಾಗವಹಿಸಿದ್ದ ಸಭೆಯಲ್ಲಿ ಪುನರ್ವಸತಿ ಕಲ್ಪಿಸಲು ಸರ್ವೇ ನಡೆಸಿ 15 ದಿನದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಸರ್ವೇ ನಡೆದಿದೆ.
ಮಲೆಮನೆ ನೆರೆಸಂತ್ರಸ್ತರಿಗೆ ನಿವೇಶನ ಹಾಗೂ ಜಮೀನು ನೀಡಲು ನಾಲ್ಕೈದು ಕಡೆಗಳಲ್ಲಿ ಸ್ಥಳ ಗುರುತು ಮಾಡಲಾಗಿದೆ. ಸರ್ವೇ ಪೂರ್ಣಗೊಂಡಿದೆ ಎನ್ನುತ್ತಾರೆ ಮೂಡಿಗೆರೆ ತಹಸೀಲ್ದಾರ್ ತಿಪ್ಪೇಸ್ವಾಮಿ.
ನೆರೆ ಸಂತ್ರಸ್ತರಿಗಾಗಿ ನಾಲ್ಕೈದು ಕಡೆಗಳಲ್ಲಿ ಜಾಗ ಗುರುತಿಸಲಾಗಿದೆ. ಸರ್ವೇ ಪೂರ್ಣಗೊಂಡಿದೆ. ನೆರೆಸಂತ್ರಸ್ತರಿಗೆ ಬಾಡಿಗೆ ಹಣ ನೀಡಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆ.16ರಂದು ಮೂಡಿಗೆರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಮೂಡಿಗೆರೆಗೆ ಆಗಮಿಸಲಿದ್ದು, ಅವರ ಗಮನಕ್ಕೆ ತರಲಾಗುವುದು. ನಾಲ್ಕೈದು ಕಡೆಗಳಲ್ಲಿ ಸ್ಥಳ ಗುರುತು ಮಾಡಿದ್ದು ಇನ್ನೊಮ್ಮೆ ಮಾತುಕತೆ ನಡೆಸಲಾಗುವುದು. ಆಡಳಿತಾತ್ಮಕ ಪ್ರಕ್ರಿಯ ಮುಗಿದ ನಂತರ ನೆರೆಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಶಾಸಕಿ ನಯನಾ ಮೋಟಮ್ಮ ಮಾಹಿತಿ ನೀಡಿದರು.