ಬೆಂಗಳೂರು: ರಾಜಭವನದಲ್ಲಿ ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ ವರ್ಣರಂಜಿತ ಕಾರ್ಯಕ್ರಮಗಳನ್ನು ಭಾನುವಾರ ನಡೆದವು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಭಾಷೆ, ನೃತ್ಯ ಮತ್ತು ಸಂಗೀತದ ಶೈಲಿ ಬೇರೆಯಾಗಿರಬಹುದು. ಭಾವನೆ ಒಂದೇ, ಸಮರ್ಪಣೆ, ಸಾಮರಸ್ಯ ಮತ್ತು ದೇಶಭಕ್ತಿ ಎಂಬ ಭಾವನೆಯನ್ನು ನಮಗೆ ಮೂಡಿಸಿದವು ಎಂದರು.
ಪ್ರತಿಯೊಂದು ರಾಜ್ಯವು ಅದರ ಗುಣಲಕ್ಷಣ ಮತ್ತು ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಿಂದ ವಿಶಿಷ್ಟವಾಗಿದೆ. ಇವು ಭಾರತೀಯ ಸಂಸ್ಕೃತಿ ವೈವಿಧ್ಯತೆ ಮತ್ತು ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತವೆ.
ವಿವಿಧ ರಾಜ್ಯಗಳಲ್ಲಿ ಆಚರಿಸುವ ಹಬ್ಬಗಳು ಮತ್ತು ಆಚರಣೆಗಳ ಪರಿಕಲ್ಪನೆ ಮತ್ತು ಉದ್ದೇಶಗಳಲ್ಲಿ ಸಮಾನತೆ ಮತ್ತು ಸಾಮರಸ್ಯವು ಗೋಚರಿಸುತ್ತದೆ. ಏಕ್ ಭಾರತ್ ಶ್ರೇಷ್ಠ ಭಾರತ್ ಸಿದ್ಧಾಂತದಿಂದ ಪ್ರೇರಿತವಾದ ಇಂತಹ ಕಾರ್ಯಕ್ರಮಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೆಚ್ಚಿಸುವುದರ ಜತೆಗೆ ರಾಷ್ಟ್ರೀಯ ಏಕತೆ ಮತ್ತು ಪರಸ್ಪರ ತಿಳುವಳಿಕೆಯ ಭಾವನೆಯನ್ನು ಹೆಚ್ಚಿಸುತ್ತಿವೆ.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಕಚ್‌ನಿಂದ ಕಾಮರೂಪದವರೆಗೆ ವೈವಿಧ್ಯಮಯ ಬಣ್ಣಗಳ ಸಂಸ್ಕೃತಿಗಳು ಒಂದೇ ಧ್ವಜದಡಿಯಲ್ಲಿ ಒಗ್ಗೂಡಿ ನಿಂತಿರುವ ದೇಶದಲ್ಲಿ ನಾವು ಇದ್ದೇವೆ ಎಂಬುದು ಹೆಮ್ಮೆ.
ಪ್ರತಿಯೊಂದು ರಾಜ್ಯವು ದೇಶದ ಪ್ರಗತಿಗೆ ವಿಶೇಷ ಕೊಡುಗೆ ನೀಡಿದೆ. ಕೆಲವು ಕೃಷಿಯಲ್ಲಿ, ಕೆಲವು ಕೈಗಾರಿಕಾ ಅಭಿವೃದ್ಧಿಯಲ್ಲಿ, ಕೆಲವು ಶಿಕ್ಷಣ ಮತ್ತು ತಾಂತ್ರಿಕ ಸಂಶೋಧನೆಯಲ್ಲಿ ಮತ್ತು ಕೆಲವು ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಮೂಲಕ ದೇಶಕ್ಕೆ ಜಾಗತಿಕ ಗುರುತನ್ನು ನೀಡಿವೆ.
ನಮ್ಮ ರಾಜ್ಯವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಲು ಮತ್ತು ಎಲ್ಲರನ್ನು ಒಳಗೊಂಡ ಬೆಳವಣಿಗೆ, ಸಾಮಾಜಿಕ ನ್ಯಾಯ, ಪರಿಸರ ಸಮತೋಲನ ಮತ್ತು ತಾಂತ್ರಿಕ ನಾವೀನ್ಯತೆಗಳ ಮೂಲಕ ಆದರ್ಶ ರಾಜ್ಯವನ್ನು ಸೃಷ್ಟಿಸಲು ನಾವು ಪ್ರತಿಜ್ಞೆ ಮಾಡಬೇಕು ಎಂದು ಸಲಹೆ ನೀಡಿದರು.