ಚಿಕ್ಕಮಗಳೂರು ಕಾಫಿ ಎಸ್ಟೇಟ್‌ನಲ್ಲಿ ಕಾರ್ಮಿಕರ ಮೇಲೆ ಹಲ್ಲೆ ಆರೋಪ 
ನ್ಯೂಸ್

ಕೆಲಸ ಬಿಟ್ಟು ಹೋಗುವ ವಿಚಾರಕ್ಕೆ ಗಲಾಟೆ; ಕಾರ್ಮಿಕರ ಮೇಲೆ ಹಲ್ಲೆ, ಗನ್ ತೋರಿಸಿ ಧಮ್ಕಿ? | Coffee Estate Assault

Coffee Estate Assault: ತಮಿಳುನಾಡು ಮೂಲದ ವಲಸೆ ಕಾರ್ಮಿಕರ ಮೇಲೆ ಕಾಫಿ ಎಸ್ಟೇಟ್ ಮಾಲೀಕ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿಕ್ಕಮಗಳೂರು ತಾಲೂಕಿನ ಬಸಗೋಡು ಗ್ರಾಮದ ಎಸ್ಟೇಟ್‌ನಲ್ಲಿ ಘಟನೆ ನಡೆದಿದ್ದು, ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ.

ಎಸ್ಟೇಟ್ ಮಾಲೀಕ ಭಾರತ್ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೈರಲ್ ವಿಡಿಯೋದಲ್ಲಿ ಗನ್ ಹಾಗೂ ದೊಣ್ಣೆ ಹಿಡಿದು ಕಾರ್ಮಿಕರನ್ನು ಬೆದರಿಸಿ ಹಲ್ಲೆ ನಡೆಸುತ್ತಿರುವ ದೃಶ್ಯಗಳಿವೆ ಎನ್ನಲಾಗಿದೆ. ಕಾರ್ಮಿಕರಿಗೆ ದೈಹಿಕ, ಮಾನಸಿಕ ಕಿರುಕುಳ, ಜೀವ ಬೆದರಿಕೆ ಹಾಗೂ ಜೀತದಾಳುಗಳ ರೀತಿಯಲ್ಲಿ ನಡೆಸಿಕೊಂಡಿದ್ದಾರೆ ಎಂಬ ಆರೋಪವೂ ಇದೆ.

ಕಾರ್ಮಿಕರು ಕೆಲಸ ಬಿಟ್ಟು ಊರಿಗೆ ಮರಳಲು ಮುಂದಾದಾಗ ವಿವಾದ ಉಂಟಾಗಿದೆ ಎನ್ನಲಾಗಿದೆ. ಮುಂಗಡ ಹಣ ವಾಪಸ್ ಕೇಳಿದ ವೇಳೆ, ಹಣ ಹಿಂತಿರುಗಿಸಲು ಒಪ್ಪಿದ್ದರೂ ಹಲ್ಲೆ ನಡೆಸಲಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಮಹಿಳಾ ಕಾರ್ಮಿಕರ ಮೇಲೂ ಹಲ್ಲೆ ನಡೆದ ಆರೋಪ ಕೇಳಿಬಂದಿದೆ.

ಘಟನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಕಾರ್ಮಿಕರಿಗೆ ರಕ್ಷಣೆ ನೀಡಬೇಕು ಹಾಗೂ ಆರೋಪಿತ ಎಸ್ಟೇಟ್ ಮಾಲೀಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಮಹಿಳಾ ಕಾರ್ಮಿಕ ಮೀನಾ ಅವರು ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೇತನ ಹಾಗೂ ಮುಂಗಡ ಹಣ ವಾಪಸ್ ನೀಡಿ ಬೇರೆಡೆ ಕೆಲಸಕ್ಕೆ ತೆರಳುವ ವಿಚಾರವಾಗಿ ಗಲಾಟೆ ನಡೆದಿದ್ದು, ಭಾರತ್ ಹಲ್ಲೆ ನಡೆಸಿದ್ದಾರೆ ಎಂದು ಮೀನಾ ಆರೋಪಿಸಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್ ರೈಲಿನ ವಡಾದಲ್ಲಿ ಬೋಲ್ಟ್ ಪತ್ತೆ; ಪ್ರಯಾಣಿಕನ ಪೋಸ್ಟ್ ವೈರಲ್​ | Vande Bharat Food

ಘಟನೆಯ ವೇಳೆ ತಮ್ಮ ಚಿನ್ನದ ಕಿವಿಯೋಲೆ ಕಾಣೆಯಾಗಿದೆ ಎಂದೂ ಅವರು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.