ಹೈದರಾಬಾದ್: ಡಿಸೆಂಬರ್ 04ರಂದು ಹೈದರಾಬಾದಿನ ಸಂಧ್ಯಾ ಚಿತ್ರಮಂದಿರದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ಗೆ (Allu Arjun) ನಾಂಪಲ್ಲಿ ಕೋರ್ಟ್ 14ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಇದೆಲ್ಲದರ ನಡುವೆಯೇ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಒಂದು ಸಿಕ್ಕಿದ್ದು ನಟ ಅಲ್ಲು ಅರ್ಜುನ್ಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಮೃತ ರೇವತಿ ಅವರ ಪತಿ ಭಾಸ್ಕರ್ ಮಾತನಾಡಿ ತಾವು ಪ್ರಕರಣ ವನ್ನು ಹಿಂಪಡೆಯುವುದಾಗಿ ಘೋಷಿಸಿದ್ದು, ಕಾಲ್ತುಳಿತಕ್ಕೂ ಅಲ್ಲು ಅರ್ಜುನ್ಗೂ (Allu Arjun) ಸಂಬಂಧವಿಲ್ಲ. ನಾನು ಅಲ್ಲು ಅರ್ಜುನ್ ವಿರುದ್ಧ ನೀಡಿರುವ ದೂರನ್ನು ಹಿಂಪಡೆಯಲು ತಯಾರಿದ್ದೇನೆ. ಅಲ್ಲು ಅರ್ಜುನ್ ಬಂಧನ ಆಗುತ್ತಿರುವ ವಿಷಯ ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ನಾನು ಆಸ್ಪತ್ರೆಯಲ್ಲಿದ್ದೆ, ಅಲ್ಲು ಅರ್ಜುನ್ ಬಂಧನದ ವಿಷಯ ಮಾಧ್ಯಮಗಳಿಂದ ಗೊತ್ತಾಯ್ತು, ಅಲ್ಲು ಅರ್ಜುನ್ ಇಂದಾಗಿ ನನ್ನ ಪತ್ನಿ ಸಾಯಲಿಲ್ಲ. ನಾನು ಬೇಕಾದರೆ ಈಗ ನೀಡಿರುವ ದೂರನ್ನು ಹಿಂಪಡೆದುಕೊಳ್ಳುತ್ತೇನೆ ಎಂದು ಮೃತ ರೇವತಿ ಅವರ ಭಾಸ್ಕರ್ ಹೇಳಿಕೆ ನೀಡಿದ್ದಾರೆ. ಭಾಸ್ಕರ್ ಹೇಳಿಕೆ ಬೆನ್ನಲ್ಲೇ ನ್ಯಾಯಾಲಯ ನಟ ಅಲ್ಲು ಅರ್ಜುನ್ಗೆ ಜಾಮೀನು ಮಂಜೂರು ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ನಟ ಅಲ್ಲು ಅರ್ಜುನ್ ವಿಷಾದ ವ್ಯಕ್ತಪಡಿಸಿ ಮೃತ ಮಹಿಳೆ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಇದಲ್ಲದೆ ಮಕ್ಕಳ ಶಿಕ್ಷಣ ಸೇರಿದಂತೆ ಆರ್ಥಿಕ ಸಹಾಯವನ್ನು ಮಾಡುವುದಾಗಿಯೂ ನಟ ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದರು. ಆದರೆ, ಘಟನೆ ಸಂಬಂಧ ಚೀಕಡಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ್ರನ್ನು (Allu Arjun) ಪೊಲೀಸರು ಬಂಧಿಸಿದ್ದಾರೆ.