ನ್ಯೂಸ್

ಮರುಹೊಂದಾಣಿಕೆ ಬಳಿಕ ಪ್ರೌಢಶಾಲೆಗಳಿಗೆ ಶಿಕ್ಷಕರ ಮಂಜೂರು

ಬೆಂಗಳೂರು ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಮರು ಹೊಂದಾಣಿಕೆ ನಂತರ ನಿಗದಿಪಡಿಸಿದ ಹುದ್ದೆಗಳನ್ನು ಮಂಜೂರು ಮಾಡಿ ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.

2022-23ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳ ಮರು ಹೊಂದಾಣಿಕೆ ನಂತರ ಹುದ್ದೆಗಳನ್ನು 2021 ಡಿ.31ರ ವಿದ್ಯಾರ್ಥಿಗಳ ದಾಖಲಾತಿ ಅನುಗುಣವಾಗಿ (ಪಿ.ಟಿ.ಆರ್ ನಂತೆ) ಲೆಕ್ಕಾಚಾರ ಮಾಡಲಾಗಿದೆ. ಸಭಾ ನಡಾವಳಿಯಂತೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಮರುಹೊಂದಾಣಿಕೆ ನಂತರ ಹುದ್ದೆಗಳನ್ನು 2022-23 ನೇ ಸಾಲಿಗೆ ನಿಗದಿಪಡಿಸಿ ಮಂಜೂರು ಮಾಡಲಾಗಿದೆ. ಮಂಜೂರು ಮಾಡಲಾದ ಹುದ್ದೆಗಳನ್ನು ಇಲಾಖಾ ವೆಬ್‌ಸೈಟ್: ಡಿಡಿಡಿ.ಠ್ಚಟಟ್ಝಛಿಛ್ಠ್ಚಠಿಜಿಟ್ಞ.ಚ್ಟ.್ಞಜ್ಚಿ.ಜ್ಞಿ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿದೆ. ಆಯಾ ಶಾಲೆಯ ಲಾಗ್‌ಇನ್‌ನಲ್ಲಿಯೂ ಲಭ್ಯವಿರಲಿದೆ.

103 ಪ್ರೌಢಶಾಲೆ ಉನ್ನತಿಕರಣ:

2022-23 ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ (1-8ನೇ ತರಗತಿ) 103 ಶಾಲೆಗಳನ್ನು ಸರ್ಕಾರಿ ಪ್ರೌಢಶಾಲೆಗಳಾಗಿ ಉನ್ನತೀಕರಿಸಿ, ಸದರಿ ಶಾಲೆಗಳಿಗೆ ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡೈಸ್ ಕೋಡ್ ಆಧಾರಿಸಿ ಮುಖ್ಯ ಶಿಕ್ಷಕರನ್ನು ಹೊರತು ಪಡಿಸಿ ಪ್ರತಿ ಶಾಲೆಗೆ 7 ಹುದ್ದೆಗಳನ್ನು ಮಂಜೂರು ಮಾಡಿ ಇಲಾಖಾ ವೆಬ್‌ಸೈಟ್‌ನ ಇ-ರಿಜಿಸ್ಟ್ರಾರ್‌ನಲ್ಲಿ ಅಳವಡಿಸಲಾಗಿದೆ. ಈ ಪ್ರೌಢಶಾಲೆಗಳ ಮಂಜೂರಾದ ಹುದ್ದೆಗಳ ಮಾಹಿತಿಯು ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡೈಸ್‌ಕೋಡ್ ಅನ್ನು (ಯೂಸರ್ ನೇಮ್ ಹಾಗೂ ಪಾಸ್‌ವರ್ಡ್) ಬಳಸಿ ಲಾಗ್‌ಇನ್‌ನಲ್ಲಿ ಪಡೆದುಕೊಳ್ಳಬಹುದು.

ಸರ್ಕಾರಿ ಪ್ರೌಢಶಾಲೆಗಳ ಹೆಚ್ಚುವರಿ ಶಿಕ್ಷಕರ ಮರುಹಂಚಿಕೆ ಪ್ರಕ್ರಿಯೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಹಂತದ ಕೌನ್ಸಿಲಿಂಗ್ ಮುಗಿದ ನಂತರದಲ್ಲಿ ಜಿಲ್ಲೆಗಳಲ್ಲಿ ಭಾಷಾವಾರು ಅಥವಾ ವಿಷಯವಾರು ಖಾಲಿ ಹುದ್ದೆಗಳು ಇಲ್ಲದಿದ್ದಾಗ ಆಯಾ ಜಿಲ್ಲಾವಾರು ಪಿಟಿಆರ್‌ನಂತೆ ಹುದ್ದೆಗಳನ್ನು ಶಾಲೆಗಳಲ್ಲಿ ಸೃಜಿಸಿ ಮಂಜೂರು ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ.ಕಾವೇರಿ ಆದೇಶ ಹೊರಡಿಸಿದ್ದಾರೆ.