ಸಾಗರದ ನಗರಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಸಾಗರ ಯೋಜನಾ ಪ್ರಾಧಿಕಾರದ ಸಭೆ ನಡೆಸಿದರು. ಎಚ್.ಕೆ.ನಾಗಪ್ಪ, ಸೊಮಶೇಖರ ಲ್ಯಾವಿಗೆರೆ, ಸುರೇಶ್ ಬಾಬು, ಮರಿಯಾ ಲಿಮಾ ಇತರರಿದ್ದರು. 
ನ್ಯೂಸ್

ಬಡವರಿಗೆ ನಿವೇಶನ ಹಂಚಲು ಅಗತ್ಯ ಕ್ರಮ

ಸಾಗರ: ನಗರದ ನಾಲ್ಕು ಕಡೆಗಳಲ್ಲಿ ತಲಾ 10 ಎಕರೆ ಸರ್ಕಾರಿ ಜಾಗದಲ್ಲಿ ನಿವೇಶನ ರಚಿಸಿ ಬಡವರಿಗೆ ಹಂಚಿಕೆ ಮಾಡುವ ಉದ್ದೇಶ ಇದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರಸಭೆಯಲ್ಲಿ ಏರ್ಪಡಿಸಿದ್ದ ಸಾಗರ ಯೋಜನಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ಈಗಾಗಲೇ ಆಶ್ರಯ ನಿವೇಶನ ಕೋರಿ ನಾಲ್ಕು ಸಾವಿರ ಅರ್ಜಿಗಳು ಹಿಂದಿನ ಸರ್ಕಾರದ ಅವಧಿಯಲ್ಲಿ ಬಂದಿತ್ತು. 2-3 ಸಾವಿರ ಜನರಿಗಾದರೂ ನಿವೇಶನ ಕೊಡಬೇಕು ಎನ್ನುವುದು ನಮ್ಮ ಉದ್ದೇಶ. ಬಳಸಗೋಡು ಬಳಿ 20 ಎಕರೆ, ಯಲಗಳಲೆ ಬಳಿ 10 ಎಕರೆ ಸರ್ಕಾರಿ ಭೂಮಿ ಗುರುತಿಸಲಾಗಿದೆ ಎಂದು ತಿಳಿಸಿದರು.

ಖಾಸಗಿ ಬಡಾವಣೆಗಳನ್ನು ಬೇಕಾಬಿಟ್ಟಿಯಾಗಿ ನಿರ್ಮಿಸಿದರೆ ಪ್ರಾಧಿಕಾರದಿಂದ ಅನುಮತಿ ನೀಡುವುದಿಲ್ಲ. ಬಡಾವಣೆಗಳಲ್ಲಿ ಅಗತ್ಯ ಮೂಲಸೌಲಭ್ಯಗಳು ಇರುವುದು ಕಡ್ಡಾಯ. ಪ್ರಾಧಿಕಾರದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವರು. ಕಾನೂನಾತ್ಮಕವಾಗಿ ಸರಿ ಇದ್ದರೆ ಪರವಾನಗಿ ನೀಡಲು ಶಿಫಾರಸ್ಸು ಮಾಡುತ್ತಾರೆ ಎಂದರು.

ಕೆಲ ಕಡೆಗಳಲ್ಲಿ ಕೆರೆ ಜಾಗ, ಪಾರ್ಕ್‌ಗೆ ಬಿಟ್ಟಿರುವ ಜಾಗ ಒತ್ತುವರಿ ಮಾಡಿ ಮನೆ ಕಟ್ಟಿದ್ದು ತೆರವು ಮಾಡಲು ಸೂಚಿಸಲಾಗಿದೆ. ಸದ್ಯದಲ್ಲಿ ಆಶ್ರಯ ಸಮಿತಿ ಸದಸ್ಯರು, ತಹಸೀಲ್ದಾರ್, ಸಾಗರ ಯೋಜನಾ ಪ್ರಾಧಿಕಾರದ ಸದಸ್ಯರನ್ನು ಒಳಗೊಂಡ ಸಭೆ ಕರೆದು ಆಶ್ರಯ ನಿವೇಶನ ನೀಡಲು ಜಾಗ ಗುರುತಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.

ಪೌರಾಯುಕ್ತ ಎಚ್.ಕೆ.ನಾಗಪ್ಪ, ಪ್ರಾಧಿಕಾರದ ಸದಸ್ಯರಾದ ಸೋಮಶೇಖರ ಲ್ಯಾವಿಗೆರೆ, ಐ.ಎನ್.ಸುರೇಶಬಾಬು, ಮರಿಯಾ ಲೀಮಾ ಇತರರಿದ್ದರು.