ನ್ಯೂಸ್

ಮನೆಯ ನೆಲಮಾಳಿಗೆಯಲ್ಲಿದ್ದ ಮೊಸಳೆಯನ್ನು ರಕ್ಷಣೆ ಮಾಡಿದ ಮ್ಯಾಡಿಸನ್​ ಪೊಲೀಸರು...

ಮೊಸಳೆಗಳು ಸಾಮಾನ್ಯವಾಗಿ ನದಿಯಲ್ಲಿ ಇರುತ್ತವೆ. ಆದರೆ ಒಹಿಯೋದಲ್ಲಿ ನಡೆದಿರುವ ಒಂದು ಘಟನೆ ತೀರ ವಿಚಿತ್ರ ಮತ್ತು ಭಯಾನಕ ಎನಿಸಿದೆ.

ಅಮೆರಿಕದ ಒಹಿಯೋದ ಮನೆಯೊಂದರ ನೆಲಮಾಳಿಗೆಯಲ್ಲಿದ್ದ 25ವರ್ಷ ವಯಸ್ಸಿನ ಮೊಸಳೆಯನ್ನು ಮ್ಯಾಡಿಸನ್ ಟೌನ್‌ಶಿಪ್ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಫೇಸ್​ಬುಕ್​ನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಸಿಕ್ಕಾಪಟೆ ವೈರಲ್​ ಆಗಿದೆ.

ತಾವು ಮೊಸಳೆಯನ್ನು ರಕ್ಷಣೆ ಮಾಡಿದ ಫೋಟೋಗಳನ್ನು ಪೋಸ್ಟ್ ಮಾಡಿದ ಮ್ಯಾಡಿಸನ್ ಪೊಲೀಸರು, ನಮಗೆ ಪೊಲೀಸ್​ ಅಕಾಡೆಮಿಯಲ್ಲಿ ಕಲಿಸದ ಕೆಲವು ವಿಚಾರಗಳು ಇವೆ ಎಂದು ಫನ್ನಿಯಾಗಿ ಬರೆದುಕೊಂಡಿದ್ದಾರೆ.

ಈ ಮನೆಯ ಮಾಲೀಕರು ಪರವಾನಗಿ ಇಲ್ಲದೆ ಮೊಸಳೆಯನ್ನು ಕೂಡಿಟ್ಟುಕೊಂಡಿದ್ದರು. ಹಾಗಾಗಿ ಸ್ವಯಂ ಪ್ರೇರಿತರಾಗಿ ನಮಗೆ ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ. ಮೊಸಳೆಯನ್ನು ಹಿಡಿದು ದಕ್ಷಿಣ ಕೆರೊಲಿನಾದ ಮಿರ್ಟಲ್ ಬೀಚ್‌ನಲ್ಲಿರುವ ವನ್ಯಜೀವಿ ಧಾಮಕ್ಕೆ ಬಿಡಲಾಗಿದೆ. (ಏಜೆನ್ಸೀಸ್​)