ಬಿ.ವೈ.ರಾಘವೇಂದ್ರ 
ನ್ಯೂಸ್

ನೈಋತ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ

ಶಿಕಾರಿಪುರ: ವಿಧಾನಪರಿಷತ್ ಪ್ರಜ್ಞಾವಂತ ಮತದಾರರ ಚುನಾವಣೆ. ಭವಿಷ್ಯದ ಚಿಂತನೆ ಮಾಡುವವರ ಆಶೀರ್ವಾದದ ಬಲದಿಂದ ಈ ಬಾರಿ ಪಧವೀಧರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಬೋಜೇಗೌಡ ಗೆಲುವು ಸಾಧಿಸುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಈ ಚುನಾವಣೆಯಲ್ಲಿ ಮತದಾರರು ಭ್ರಮೆಗಳಿಗಿಂತ ವಾಸ್ತವಕ್ಕೆ ಹೆಚ್ಚಿನ ಮತ ನೀಡುತ್ತಾರೆ. ಸವಾಲುಗಳು ಇರುವುದು ಸಹಜ. ಇಂತಹ ಸಂದರ್ಭದಲ್ಲಿ ಪಕ್ಷಕ್ಕೆ ಜಯ ತಂದು ಕೊಡುವವರೇ ಮತದಾರರು. ನಾವು 6 ಕ್ಷೇತ್ರಗಳ ಪೈಕಿ 4ರಲ್ಲಿ ಸ್ಪರ್ಧೆ ಮಾಡಿದ್ದು ಜೆಡಿಎಸ್‌ಗೆ ಎರಡು ಸ್ಥಾನ ನೀಡಲಾಗಿದೆ. ಎಲ್ಲ ಕ್ಷೇತ್ರದಲ್ಲಿಯೂ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ಜನರಿಗೆ ಭ್ರಮನಿರಸನ ಉಂಟಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಕ್ಷಣೆ ನೀಡುವ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ. ಚನ್ನಗಿರಿ ಘಟನೆಯಿಂದ ಜನತೆಯಲ್ಲಿ ಆತಂಕದ ವಾತಾವರಣ ಹೆಚ್ಚಾಗಿದೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಸರ್ಕಾರ, ಮುಖ್ಯಮಂತ್ರಿ, ಗೃಹ ಮಂತ್ರಿಗಳು ಇದ್ದಾರೋ ಇಲ್ಲವೋ ಎನ್ನುವ ಅನುಮಾನ ಮೂಡುತ್ತಿದೆ ಎಂದು ಟೀಕಿಸಿದರು.
ಪದವೀಧರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮಾತನಾಡಿ, ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮಾತನಾಡಿ, ರೈತನ ಮಗನಾದ ನನಗೆ ಬಿಜೆಪಿ ಅಭ್ಯರ್ಥಿಯಾಗಲು ಅವಕಾಶ ನೀಡಿದೆ. ಜತೆಗೆ ದೇವದುರ್ಲಭ ಕಾರ್ಯಕರ್ತರ ದಂಡು ಸುಮಾರು 85 ಸಾವಿರ ಮತದಾರರನ್ನು ಸಂಪರ್ಕ ಮಾಡಿ ನನ್ನ ಪರವಾಗಿ ಮತಯಾಚಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಅಧ್ಯಕ್ಷರು, ನಾಯಕರು ನನ್ನ ಗೆಲುವಿಗೆ ಶ್ರಮಿಸುತ್ತಿದ್ದಾರೆ.
ಹೋರಾಟದ ರೂಪುರೇಷೆ ಇಂದು ನಿರ್ಧಾರ:
ನಾವು ಯಾವತ್ತೂ ಹೇಳುವಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತನ್ನ ಹೈಕಮಾಂಡ್‌ಗೆ ಎಟಿಎಂ ಇದ್ದಂತೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಭಾರಿ ಭ್ರಷ್ಟಾಚಾರ ಇದಕ್ಕೆ ತಾಜಾ ಉದಾಹರಣೆ. ಪ್ರಕರಣಕ್ಕೆ ಸಂಬಂಧಿಸಿದ ಇಲಾಖೆ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು. ಅಧಿಕಾರಿಯ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದರು. ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಇದಕ್ಕೆ ಪೂರಕವಾಗಿ ನಡೆಯುವ ಹೋರಾಟದ ಬಗ್ಗೆ ಮೇ 30ರಂದು ತಿಳಿಸುತ್ತೇನೆ. ಕಾಂಗ್ರೆಸ್ ಸರ್ಕಾರಕ್ಕೆ ಇದು ಕೇವಲ ಎನಿಸಬಹುದು. ಆದರೆ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವುದು, ಇದಕ್ಕಾಗಿ ಒಂದು ಜೀವ ಹೋಗಿರುವುದು ಸಣ್ಣ ವಿಷಯವಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೆ, ಸಚಿವರು ರಾಜೀನಾಮೆ ನೀಡುವವರೆಗೆ, ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಯಾವ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು. ಚಂದ್ರಶೇಖರ್ ಅವರು ಡೆತ್ ನೋಟ್‌ನಲ್ಲಿ ಹಿರಿಯ ಅಧಿಕಾರಿಗಳ ಹೆಸರನ್ನು ಬರೆದಿದ್ದಾರೆ. ಅಲ್ಲದೆ ತಮಗೆ ಸಚಿವರ ಮೌಖಿಕ ಆದೇಶವಿತ್ತು ಎಂದು ಸಹ ಬರೆದುಕೊಂಡಿದ್ದಾರೆ. ಇವರ ಹಗರಣದಿಂದ ಚಂದ್ರಶೇಖರ ಅವರನ್ನು ಬಲಿಪಶು ಮಾಡಲಾಗಿದೆ. ಸರ್ಕಾರ ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್.ಟಿ.ಬಳಿಗಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೀರೇಂದ್ರ ಪಾಟೀಲ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿ ಮಲ್ಲಪ್ಪ. ಜೆಡಿಎಸ್ ತಾಲೂಕು ಅಧ್ಯಕ್ಷ ವಾಗೀಶ್, ಬಿ.ಡಿ.ಭೂಕಾಂತ್, ವಸಂತಗೌಡ, ಶೇಖರಪ್ಪ, ದಿವಾಕರ್, ವೀರನಗೌಡ, ಮಾಜಿ ರಾಘವೇಂದ್ರ, ಧಾರವಾಡ ಗಿರೀಶ್ ಇತರರಿದ್ದರು