ಜೈಪುರ: ರಾಜಸ್ಥಾನದ ಜೈಪುರದಲ್ಲಿ ಆರನೇ ತರಗತಿಯ ಬಾಲಕಿಯೊಬ್ಬಳು ಶನಿವಾರ(ನ. 01) ಶಾಲೆಯ ನಾಲ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ(Girl Suicide) ಎಂದು ವರದಿಯಾಗಿದೆ. ಶಿಕ್ಷಕಿ ಗದರಿಸಿದ ಹಿನ್ನೆಲೆ ಬಾಲಕಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ಜೈಪುರದ ನೀರ್ಜಾ ಮೋದಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅಮೈರಾ ಬಿದ್ದು ಮೃತಪಟ್ಟಿರುವ ಆರನೇ ತರಗತಿ ಬಾಲಕಿ. ಪೋಷಕರಿಗೆ ಅಮೈರಾ ಒಬ್ಬಳೇ ಮಗಳು ಎನ್ನಲಾಗಿದೆ. ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಮೃತಪಟ್ಟಿದ್ದಾಳೆ ಎಂದು ಘೋಷಿದ್ದಾರೆ.
ಶಿಕ್ಷಕಿ ಗದರಿಸಿದ್ದರಿಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಾಲೆಯೂ ಘಟನಾ ಸ್ಥಳದಲ್ಲಿನ ಸಾಕ್ಷ್ಯಗಳನ್ನು ನಾಶಪಡಿಸಿದೆ ಎಂದು ಪೋಷಕರ ಸಂಘ ಆರೋಪಿಸಿದೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನ ಶಿಕ್ಷಣ ಸಚಿವ ಮದನ್ ದಿಲಾವರ್, ಶಿಕ್ಷಣ ಇಲಾಖೆ ಆರು ಸದಸ್ಯರ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದ್ದಾರೆ.
ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಜೈಪುರ ಆಸ್ಪತ್ರೆಯಲ್ಲಿ ಬಾಲಕಿಯ ಪೋಷಕರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆಯ ಬಗ್ಗೆ ಶಾಲಾ ಆಡಳಿತ ಮಂಡಳಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ.
ತನಿಖಾ ತಂಡಕ್ಕೆ ಶಾಲೆಗೆ ಪ್ರವೇಶ ನಿರಾಕರಣೆ
ಸರ್ಕಾರ ರಚಿಸಿದ ತನಿಖಾ ತಂಡಕ್ಕೆ ನೀರ್ಜಾ ಮೋದಿ ಶಾಲೆ ಆಡಳಿತ ಮಂಡಳಿ ಅಸಹಕಾರ ತೋರಿಸಿದ್ದು, ಶಾಲೆಯ ಪ್ರವೇಶಕ್ಕೆ ನಿರ್ಭಂದಿಸಿದೆ. ಪ್ರಾಂಶುಪಾಲರು ಸೇರಿ ಯಾವುದೇ ಸಿಬ್ಬಂದಿ ತಂಡವನ್ನು ಭೇಟಿ ಮಾಡಿಲ್ಲ. ಶಾಲೆಯ ಮುಖ್ಯದ್ವಾರಕ್ಕೆ ಬೀಗ ಹಾಕಲಾಗಿದೆ ಎಂದು ತನಿಖಾ ತಂಡ ಆರೋಪಿಸಿದೆ.
ಈ ಕುರಿತು ಮಾತನಾಡಿರುವ ಜಿಲ್ಲಾ ಶಿಕ್ಷಣ ಅಧಿಕಾರಿ (ಪ್ರಾಥಮಿಕ) ರಾಮ್ ನಿವಾಸ್ ಶರ್ಮಾ, ಶಾಲೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿತ್ತು. ಪದೇ ಪದೇ ಆಡಳಿತ ಮಂಡಳಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಇಲಾಖೆಯಿಂದ ಶಾಲೆಯ ಮಾನ್ಯತೆ ರದ್ದತಿ ಸೇರಿದಂತೆ ಹಲವು ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.(ಏಜೆನ್ಸೀಸ್)