ನ್ಯೂಸ್

ರೌಡಿಶೀಟರ್‌ನಿಂದ ಲಂಚ ಪಡೆದಿದ್ದ ಆರೋಪ : ಸಿಸಿಬಿ ಇನ್‌ಸ್ಪೆಕ್ಟರ್ ಅಮಾನತು

ಮಂಜುನಾಥ.ಕೆ

ಬೆಂಗಳೂರು: ರೌಡಿಶೀಟರ್‌ನಿಂದ ಲಂಚ ಪಡೆದಿದ್ದ ಆರೋಪದಡಿ ಸಿಸಿಬಿಯ ರೌಡಿ ನಿಗ್ರಹ ಪಡೆಯ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ ಅವರನ್ನು ಅಮಾನತುಗೊಳಿಸಿ ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ.
ಮಾರತ್ತಹಳ್ಳಿ ಠಾಣೆಯ ರೌಡಿಶೀಟರ್ ರೋಹಿತ್ ಎಂಬಾತನಿಂದ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹಣ ಪಡೆದಿದ್ದರು. ಈ ಬಗ್ಗೆ ಸಾರ್ವಜನಿಕರೊಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿಯ ಎಸಿಪಿ ದರ್ಜೆಯ ಅಧಿಕಾರಿಯೊಬ್ಬರು ಜ್ಯೋತಿರ್ಲಿಂಗ ವಿರುದ್ಧ ಇಲಾಖಾ ತನಿಖೆ ನಡೆಸಿ ಪೊಲೀಸ್ ಆಯುಕ್ತರಿಗೆ ವರದಿ ನೀಡಿದ್ದರು.ಈ ವರದಿ ಆಧರಿಸಿ ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳ ಮನೆಗಳ ಮೇಲೆ ಸ್ಥಳೀಯ ಹಾಗೂ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ನಂತರ ಕೆಲ ಅನುಮಾನಾಸ್ಪದ ರೌಡಿಗಳ ಮೇಲೆ ನಿಗಾ ವಹಿಸಿದ್ದರು. ಸಿಸಿಬಿಯ ರೌಡಿ ನಿಗ್ರಹ ದಳದ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗಗೂ ರೌಡಿಗಳ ಮೇಲೆ ನಿಗಾ ವಹಿಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರು. ತಪಾಸಣೆ ನೆಪದಲ್ಲಿ ರೌಡಿಶೀಟರ್ ರೋಹಿತ್‌ನನ್ನು ವಿಚಾರಣೆ ನಡೆಸಿದ್ದ ಜ್ಯೋತಿರ್ಲಿಂಗ, ಯುಪಿಐ ಮೂಲಕ ಹಣ ಪಡೆದುಕೊಂಡಿದ್ದರು. ಈ ಬಗ್ಗೆ ಸಾರ್ವಜನಿಕರೊಬ್ಬರು ದೂರು ನೀಡಿದ್ದರು. ಈ ಬಗ್ಗೆ ಪರಿಶೀಲಿಸಿದಾಗ, ಕೆಲ ಪುರಾವೆಗಳು ಸಿಕ್ಕಿವೆ. ಹೀಗಾಗಿ ಜ್ಯೋತಿರ್ಲಿಂಗ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.