ನ್ಯೂಸ್

ಆಸ್ಪತ್ರೆ ನಿರ್ಮಾಣದಲ್ಲಿ ಅಕ್ರಮ ಆರೋಪ; ಆಪ್ ಮಾಜಿ ಸಚಿವ ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ| ED Raid

ED Raid: ಆಸ್ಪತ್ರೆ ನಿರ್ಮಾಣ ಯೋಜನೆಗಳಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಆಪ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಸೌರಬ್ ಭಾರಧ್ವಾಜ್​ ಮನೆ ಸೇರಿ 13 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಮಂಗಳವಾರ(ಆಗಸ್ಟ್ 26) ದಾಳಿ ನಡೆಸಿ, ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ದೆಹಲಿ ಬಿಜೆಪಿ ದೆಹಲಿ ಸರ್ಕಾರದ ಅಡಿಯಲ್ಲಿ ವಿವಿಧ ಆರೋಗ್ಯ ಮೂಲಸೌಕರ್ಯ ಯೋಜನೆಗಳಲ್ಲಿ ಗಂಭೀರ ಅಕ್ರಮಗಳು ಮತ್ತು ಶಂಕಿತ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ನಂತರ ಎಸಿಬಿ ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿತ್ತು.

ಇಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ದಾಳಿ ನಡೆಸಿ ಜಾರಿ ನಿರ್ದೇಶನಾಲಯ ಶೋಧ ನಡೆಸುತ್ತಿದೆ. ಪ್ರಸ್ತುತ ಗ್ರೇಟರ್ ಕೈಲಾಶ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಾರದ್ವಾಜ್, ದೆಹಲಿ ಸರ್ಕಾರದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಹೊಂದಿದ್ದರು. ದೆಹಲಿ ಜಲ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಎಎಪಿಯ ದೆಹಲಿ ಘಟಕದ ಮುಖ್ಯಸ್ಥರಾಗಿದ್ದಾರೆ.

ದಾಳಿ ಕುರಿತು ಮಾಹಿತಿ ನೀಡಿರುವ ಇಡಿ, ಈ ದಾಳಿ ದೆಹಲಿ-ಎನ್‌ಸಿಆರ್‌ನಲ್ಲಿ 13 ಸ್ಥಳಗಳಲ್ಲಿ ನಡೆದಿದೆ. ಇದರಲ್ಲಿ ಎರಡು ನಿರ್ಮಾಣ ಕಂಪನಿಗಳ ಕಚೇರಿಗಳು ಸೇರಿವೆ. ಒಂದು ವೆಸ್ಟ್ ಪಟೇಲ್ ನಗರದಲ್ಲಿ ಮತ್ತು ಇನ್ನೊಂದು ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿದೆ. ಈ ಕಾರ್ಯಾಚರಣೆಯು 2025ರ ಜೂನ್‌ನಲ್ಲಿ ದೆಹಲಿಯ ಭ್ರಷ್ಟಾಚಾರ ನಿಗ್ರಹ ಶಾಖೆ (ಎಸಿಬಿ) ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದೆ. ಇದರಲ್ಲಿ ಭಾರದ್ವಾಜ್ ಮತ್ತು ಮಾಜಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ವಿರುದ್ಧ ವೆಚ್ಚದ ಹೆಚ್ಚಳ ಮತ್ತು ದೆಹಲಿಯ ಆಸ್ಪತ್ರೆ ನಿರ್ಮಾಣದಲ್ಲಿ ಭ್ರಷ್ಟಾಚಾರದ ಆರೋಪಗಳಿವೆ ಎಂದು ತಿಳಿಸಿದೆ.

ಎಸಿಬಿಯ ತನಿಖೆಯ ಪ್ರಕಾರ, 2018-19ರಲ್ಲಿ ದೆಹಲಿಯ 24 ಆಸ್ಪತ್ರೆಗಳ ನಿರ್ಮಾಣ ಮತ್ತು ಉನ್ನತೀಕರಣಕ್ಕಾಗಿ 5,590 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಯಾವುದೇ ಯೋಜನೆಯು ನಿಗದಿತ ಸಮಯಕ್ಕೆ ಪೂರ್ಣಗೊಂಡಿಲ್ಲ. ನೂರಾರು ಕೋಟಿ ರೂಪಾಯಿಗಳ ವೆಚ್ಚದ ಹೆಚ್ಚಳವನ್ನು ಕಂಡು ಹಿಡಿಯಲಾಗಿದೆ ಎಂದು ಆರೋಪಿಸಿದೆ.

ಇಡಿ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಆಪ್ ನಾಯಕ ಮನೀಷ್ ಸಿಸೋಡಿಯಾ, ಈ ದಾಳಿ ರಾಜಕೀಯ ಪ್ರೇರಿತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆಗಳ ಸುತ್ತ ನಡೆಯುತ್ತಿರುವ ವಿವಾದದಿಂದ ಗಮನವನ್ನು ಬೇರೆಡೆ ಸೆಳೆಯುವ ಗುರಿಯನ್ನು ಹೊಂದಿದೆ. ತನಿಖಾ ಸಂಸ್ಥೆ ಆರಂಭದಲ್ಲಿ ಪ್ರಕರಣ ದಾಖಲಿಸಿದಾಗ, ಭಾರದ್ವಾಜ್ ದೆಹಲಿಯ ಆಪ್ ಸರ್ಕಾರದಲ್ಲಿ ಸಚಿವರಾಗಿರಲಿಲ್ಲ ಎಂದು ಹೇಳಿದ್ದಾರೆ.

ಸೌರಭ್​ ಭಾರದ್ವಾಜ್​ ವಿರುದ್ಧದ ಆರೋಪಗಳು ಆಧಾರರಹಿತ. ಮಾಜಿ ಸಚಿವ ಸತ್ಯೇಂದರ್ ಜೈನ್ ಅವರ ಪ್ರಕರಣವನ್ನು ನೋಡಿದ್ರೆ ಎಎಪಿ ನಾಯಕರನ್ನು ಗುರಿಯಾಗಿಸಲು ಸುಳ್ಳು ಪ್ರಕರಣಗಳನ್ನು ಬಳಸಲಾಗುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ ಹೇಳಿದ್ದಾರೆ. (ಏಜೆನ್ಸೀಸ್)