ಬೆಂಗಳೂರು: ಮಾನವ ಕಳ್ಳ ಸಾಗಣೆ ಆರೋಪ ಕೇಳಿ ಬಂದ ಹಿನ್ನೆಲೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಸಂಪಿಗೇಹಳ್ಳಿ ಸಮೀಪದ ರಾಮಕೃಷ್ಣನಗರದಲ್ಲಿರುವ ಮದರಸ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಂಗೂನ್ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ ದಾಳಿ ನಡೆಸಲಾಗಿದ್ದು, ಈ ವೇಳೆ ೨೦ ಬಾಲಕಿಯರು ಪತ್ತೆ ಆಗಿದ್ದಾರೆ. ಈ ವೇಳೆ ಅಲ್ಲಿನ ಸಿಬ್ಬಂದಿಗೆ ಪ್ರಿಯಾಂಕ್ ಕಂಗೂನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಪತ್ತೆಯಾದ ಬಾಲಕಿಯರನ್ನು ಗಲ್ಫ್ ರಾಷ್ಟ್ರಗಳಿಗೆ ಸಾಗಿಸಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸುವಂತೆ ಸಂಪಿಗೇಹಳ್ಳಿ ಠಾಣೆಗೆ ಎನ್‌ಸಿಪಿಸಿಆರ್ ಅಧ್ಯಕ್ಷ ದೂರು ನೀಡಿದ್ದು, ದೂರು ಸ್ವೀಕರಿಸಿರುವ ಪ್ರಕರಣವನ್ನು ಪೊಲೀಸರು ಮಕ್ಕಳ ರಕ್ಷಣಾ ನಿರ್ದೇಶನಾಲಯ (ಸಿಡಬ್ಲ್ಯುಸಿ ) ವರ್ಗಾವಣೆ ಮಾಡಲಾಗಿದೆ. ನಿರ್ದೇಶನಾಲಯ ಅಧಿಕಾರಿಗಳು ನೀಡುವ ಸೂಚನೆಯ ಮೇರೆಗೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮದರಸದಲ್ಲಿ ಸುಮಾರು ೨೦ ಮಕ್ಕಳು ಇದ್ದರು. ಈ ಮಕ್ಕಳಿಗೆ ಸರಿಯಾಗಿ ಶಿಕ್ಷಣವನ್ನು ನೀಡುತ್ತಿಲ್ಲ. ಜತೆಗೆ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿದ್ದಾರೆ. ಯಾವುದೇ ಲೈಸೆನ್ಸ್ ಇಲ್ಲದೆ ಮದರಸವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಪ್ರಿಯಾಂಕ್ ಕಂಗೂನ್ ಟ್ವೀಟ್
ದಾಳಿಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಿಯಾಂಕ ಕಂಗೂನ್, ತನಿಖೆಯ ವೇಳೆ ಬಾಲಕಿಯರನ್ನು ಸಿಡಬ್ಲ್ಯುಸಿ ಮುಂದೆ ಹಾಜರುಪಡಿಸಲು ಮುಂದಾದಾಗ ಸಲ್ಮಾ ಎಂಬು ಮಹಿಳೆ ಮತ್ತು ಆಕೆಯ ಬಾಸ್ ಶಮೀರ್ ಗೂಂಡಾಗಳನ್ನು ಕರೆಸಿ ಜಗಳಕ್ಕೆ ಯತ್ನಿಸಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯಲ್ಲಿ ಗೂಂಡಾಗಳನ್ನು ನಿಯಂತ್ರಿಸಲಾಗಿದೆ. ಪೊಲೀಸರ ಸಲಹೆ ಮೇರೆಗೆ ಮಹಿಳಾ ಅಧಿಕಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಠಾಣೆಗೆ ನೀಡಲಾಗಿದೆ. ದಾಳಿ ವೇಳೆ ಕೆಲ ಹುಡುಗಿಯರು ಮಾತನಾಡಿದ್ದು, ಸಲ್ಮಾ ಎಂಬ ಮಹಿಳೆ ಕುವೈತ್‌ನಲ್ಲಿರುವ ಹುಡುಗಿಯರ ಸಂಬಂಧಗಳನ್ನು ಏರ್ಪಡಿಸುತ್ತಾಳೆ ಎಂದು ಆರೋಪ ಮಾಡಿದ್ದಾರೆ.