ಬೆಂಗಳೂರು: ತಮ್ಮ ಪ್ರಭಾವವನ್ನು ಬಳಸಿ ಸಿದ್ದಾರ್ಥ್ ಟ್ರಸ್ಟ್ಗೆ ಸಿಎ ಸೈಟ್ ಮಂಜೂರು ಮಾಡಿಸಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ದೂರು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ಹೆಚ್ಚಿನ ವಿವರಣೆ ಕೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕುಟುಂಬ ಸಿದ್ದಾರ್ಥ್ ಟ್ರಸ್ಟ್ಗೆ ಟ್ರಸ್ಟಿಗಳಾಗಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಪ್ರಭಾವವನ್ನು ಬಳಸಿ, ನಿಯಮಗಳನ್ನು ಗಾಳಿಗೆ ತೂರಿ ಕೆಐಎಡಿಬಿಯಿಂದ ಸಿದ್ದಾರ್ಥ ಟ್ರಸ್ಟ್ಗೆ ಐದು ಎಕರೆ ಸಿಎ ಸೈಟು ಅನ್ನು ಹಂಚಿಕೆ ಮಾಡಿಸಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರವನ್ನು ಬರೆದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆಯನ್ನು ನೀಡುವಂತೆ ಕೋರಿದ್ದಾರೆ.
ಇತ್ತ ರಾಜ್ಯಪಾಲರ ಆಕ್ರೋಶ ಹೊರಹಾಕಿರುವ ಪ್ರಿಯಾಂಕ್ ಖರ್ಗೆ, ರಾಜ್ಯಪಾಲರಿಗೆ ಎರಡು ಸಂವಿಧಾನ ಇದೆ. ಅವರು ಬಿಜೆಪಿಯನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಅಲ್ಲದೆ, ನನ್ನ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಮಾತ್ರ ಧ್ವನಿ ಎತ್ತಿದ್ದಾರೆ, ಇನ್ನುಳಿದ ಬಿಜೆಪಿ ನಾಯಕರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.