ನ್ಯೂಸ್

ಸಚಿವ ಪ್ರಿಯಾಂಕ್ ವಿರುದ್ಧ ರಾಜಕೀಯ ದ್ವೇಷದ ಆರೋಪ: ಸಿಎಂ ಸಿದ್ದರಾಮಯ್ಯ ಕಿಡಿ | There is no question of Priyank resigning

ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೂ ಸಚಿವ ಪ್ರಿಯಾಂಕ್ ಖರ್ಗೆಗೂ ಯಾವುದೇ ಸಂಬಂಧವಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಗುತ್ತಿಗೆದಾರ ಸಚಿನ್ ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿಲ್ಲ. ಯಾವುದೇ ಸಾಕ್ಷ್ಯ, ಪುರಾವೆಗಳಿಲ್ಲ. ಆದರೂ ಯಾವುದೇ ವಿಚಾರಣೆ ಎದುರಿಸಲು ಸಿದ್ಧವೆಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ರಾಜಕೀಯ ದ್ವೇಷದಿಂದ ಅವರ ಮೇಲೆ ಆರೋಪಿಸಲಾಗುತ್ತಿದೆ ಎಂದು ಕಿಡಿಕಾರಿದರು. ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಸಿಐಡಿ ತನಿಖಾ ವರದಿ ಸಲ್ಲಿಸಿದ ನಂತರ ಮುಂದಿನ ಕ್ರಮವಾಗಲಿದೆ ಎಂದು ತಿಳಿಸಿದರು.

ಆದರೆ ಇಂತಹುದೇ ಪ್ರಕರಣದ ಡೆತ್‌ನೋಟ್‌ನಲ್ಲಿ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಹೆಸರು ಬರೆಯಲಾಗಿತ್ತು. ಆ ರೀತಿಯಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಬರೆದಿಲ್ಲ, ಸಾಕ್ಷಾೃಧಾರಗಳು ಇಲ್ಲದೇ ರಾಜಕೀಯ ದ್ವೇಷಕ್ಕಾಗಿ ಪ್ರತಿಪಕ್ಷ ಆರೋಪಿಸುತ್ತಿದೆ ಎಂದರು.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಯಾವೊಂದು ಪ್ರಕರಣವನ್ನು ಸಿಬಿಐಗೆವಹಿಸಿರಲಿಲ್ಲ. ಈಗಿನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂಬ ಬೇಡಿಕೆ ಮಂಡಿಸುವ ನೈತಿಕತೆಯೇ ಬಿಜೆಪಿಯವರಿಗೆ ಇಲ್ಲವೆಂದು ಟೀಕಿಸಿದರು.

ಹೈಕಮಾಂಡ್ ಜತೆಗೆ ಚರ್ಚೆ

ಹೊಸ ವರ್ಷದಲ್ಲಿ ಸಚಿವ ಸಂಪುಟ ಪುನಾರಚನೆ ಸಾಧ್ಯತೆಯಿದೆಯೆ ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಹೈಕಮಾಂಡ್ ಜತೆಗೆ ಚರ್ಚಿಸಲಾಗುವುದು ಎಂದು ಚುಟುಕಾಗಿ ಉತ್ತರಿಸಿದರು.

ಮಹಿಳಾ ಸಚಿವರಿಗೆ ಅವಹೇಳನ ಆರೋಪದಡಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ಎ್ಐಆರ್ ದಾಖಲಾಗಿದೆ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.