ಬೆಂಗಳೂರು: ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಬಗ್ಗೆ ಸಾಕ್ಷ್ಯ ಲಭ್ಯವಿದ್ದಲ್ಲಿ ಪೂರ್ಣ ಪ್ರಮಾಣದ ವಿಚಾರಣೆ ನಡೆಸಿದ ನಂತರವಷ್ಟೇ ಪ್ರಕರಣವನ್ನು ಅರ್ಥೈಸಿಕೊಳ್ಳಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾದ ಮಾತ್ರಕ್ಕೆ ಆರೋಪಿ ವಿರುದ್ಧದ ವಿಚಾರಣೆ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿನ ಎಲ್ಲ ವಿಚಾರಣಾ ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ ಬೆಂಗಳೂರಿನಲ್ಲಿ ನೆಲೆಸಿರುವ ಪಶ್ಚಿಮ ಬಂಗಾಳ ಮೂಲದ ಮಯೂಕ್ ಮುಖರ್ಜಿ ಎಂಬಾತ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ ವಜಾಗೊಳಿಸಿ ಆದೇಶಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಸಂತ್ರಸ್ತೆಯೂ ಖಿನ್ನತೆಯಿಂದ ಬಳಲುತ್ತಿದ್ದಳು. ಆಕೆ ಆತ್ಮಹತ್ಯೆಯ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು ಕುಟುಂಬದ ಯಾವೊಬ್ಬ ಸದಸ್ಯನ ಮೇಲು ಆರೋಪ ಹೊರಿಸಿಲ್ಲ ಎಂದರು.
ಅಲ್ಲದೆ ದೂರಿನಲ್ಲಿ ಹೇಳಿರುವ ಹಾಗೆ ಅರ್ಜಿದಾರರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಸಾಭೀತುಪಡಿಸುವಲ್ಲಿ ಯಾವುದೇ ಸಾಕ್ಷಾೃಧಾರ ಲಭ್ಯವಾಗಿಲ್ಲ. ಇದೆಲ್ಲವೂ ಸತ್ಯಕ್ಕೆ ದೂರವಾದ ಸಂಗತಿ. ಸಂತ್ರಸ್ತೆಯೂ ಡೈರಿಯಲ್ಲಿ ಆಗೊಮ್ಮೆ-ಇಗೊಮ್ಮೆ ಪತಿಯಿಂದ ಕಿರುಕುಳ ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ ಹೊರತಾಗಿ ಬೇರೆನೂ ಇಲ್ಲ.ಆತ್ಮಹತ್ಯಗೆ ಒಳಗಾಗುವಂತೆ ಯಾವುದೇ ರೀತಿಯಲ್ಲಿ ಪತಿಯೂ ಪ್ರಚೋದನೆ ನೀಡಿಲ್ಲ. ಹಾಗಾಗಿ ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯದ ಎಲ್ಲ ವಿಚಾರಣಾ ಪ್ರಕ್ರಿಯೆ ರದ್ದುಗೊಳಿಸುವಂತೆ ಮನವಿ ಮಾಡಿದರು.
ದೂರುದಾರರ ಪರ ವಕೀಲರು ವಾದ ಮಂಡಿಸಿ, ದೋಷರೋಪ ಪಟ್ಟಿಯಲ್ಲಿ ಲಭ್ಯವಾದ ಅನೇಕ ಅಂಶಗಳು ಅರ್ಜಿದಾರರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎನ್ನುವ ಸಂಗತಿಯನ್ನು ಬಹಿರಂಗಪಡಿಸುತ್ತದೆ. ಸಂತ್ರಸ್ತೆಯೂ ತನ್ನ ಡೈರಿಯಲ್ಲಿ ಪತಿಯಿಂದ ಅನುಭವಿಸುತ್ತಿರುವ ಕಿರುಕುಳದ ಬಗ್ಗೆ ಬರೆದುಕೊಂಡಿದ್ದಾಳೆ. ಪತಿಗೆ ವಿವಾಹೇತರ ಸಂಬಂಧವಿದ್ದು, ಈ ನಿಟ್ಟಿನಲ್ಲಿ ಆತ ತನಗೆ ವಿವಿಧ ರೀತಿಯಲ್ಲಿ ಹಿಂಸೆ ನೀಡುತ್ತಿರುವ ಬಗ್ಗೆ ಆಕೆ ಹೇಳಿಕೊಂಡಿದ್ದಾಳೆ ಎಂಬುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು.
ವಾದ -ಪ್ರತಿವಾದ ಆಲಿಸಿದ ಮತ್ತು ಸಂತ್ರಸ್ತೆ ಆತ್ಮಹತ್ಯೆ ವಿಡಿಯೋ,ದೂರು ಹಾಗೂ ದೋಷರೋಪಣಾ ಪಟ್ಟಿಯನ್ನು ಪರಿಶೀಲಿಸಿದ ನ್ಯಾಯಪೀಠವೂ ದಂಪತಿಗಳು ಮದುವೆಯಾದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದರು. ಪತ್ನಿಯೂ ತನ್ನ ಡೈರಿಯ ಹಲವೆಡೆ ಪತಿಗೆ ವಿವಾಹೇತರ ಸಂಬಂಧವಿರುವ ಬಗ್ಗೆ ಬರೆದುಕೊಂಡು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಇದು ಕೇವಲ ಕಲ್ಪನೆಯಾಗಿದ್ದರೆ ಸನ್ನಿವೇಶವೂ ಸಂಪೂರ್ಣ ಭಿನ್ನವಾಗಿರುತ್ತಿತ್ತು. ಆದರೆ ಆಕೆಯೂ ತನ್ನ ವೈವಾಹಿಕ ಜೀವನದ ಪ್ರತಿ ಹಂತದಲ್ಲೂ ಗಂಡನಿಗೆ ಅಕ್ರಮ ಸಂಬಂಧವಿರುವ ಬಗ್ಗೆ ಹೇಳಿಕೊಂಡಿದ್ದಾಳೆ.
ದಂಪತಿಗಳು 10 ವರ್ಷಗಳ ಹಿಂದೆ ಮದುವೆ ಆಗಿದ್ದಲ್ಲ. ಸಂತ್ರಸ್ತೆಯ ಸಾವಿನ ವೇಳೆ ಆಕೆ ಮದುವೆಯಾಗಿ ಕೇವಲ 24 ತಿಂಗಳು ಕಳೆದಿದೆ ಅಷ್ಟೇ. ಗಂಡನ ಕಡೆಯಿಂದ ಪ್ರಾಥಮಿಕವಾಗಿ ಪತ್ನಿಯ ಆತ್ಮಹತ್ಯೆಗೆ ಸ್ಪಷ್ಟವಾದ ಪ್ರಚೋದನೆ ಇತ್ತು ಎಂಬುವುದು ವೀಡಿಯೋ ಮತ್ತು ಬರಹಗಳು ಸ್ಪಷ್ಟಪಡಿಸುತ್ತದೆ. ಈ ಹಿನ್ನಲೆ ಪೂರ್ಣ ಪ್ರಮಾಣದ ವಿಚಾರಣೆಯ ಅಗತ್ಯವಿದೆ ಎಂದಿದೆ.
ಅರ್ಜಿದಾರರ ವಿರುದ್ಧ ಅಪರಾಧವೂ ಐಪಿಸಿಯ ಸೆಕ್ಷನ್ 306 ರ ( ಆತ್ಮಹತ್ಯೆಗೆ ಪ್ರಚೋದನೆ) ಜತಗೆ ಐಪಿಸಿಯ ಸೆಕ್ಷನ್ 498 ಎ ( ಪತ್ನಿಯ ವಿರುದ್ಧ ಕೌರ್ಯ ) ಅನ್ವಯವಾಗುತ್ತದೆ ಎಂದಿರುವ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ