ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ₹2 ಕೋಟಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರ ಗೋಪಾಲ ಜೋಶಿ ಮತ್ತಿತರರ ವಿರುದ್ಧದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಪೊಲೀಸ್ ಕಸ್ಟಡಿಯಲ್ಲಿರುವ ಅರ್ಜಿದಾರರನ್ನು ಕಾನೂನಿನ ಅನ್ವಯ ಬಿಡುಗೊಳಿಸುವಂತೆ ಆದೇಶಿಸಿದೆ.
ಹುಬ್ಬಳ್ಳಿಯ ಗೋಪಾಲ ಜೋಶಿ ಮತ್ತಿಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಹಣ ಹಿಂದಿರುಗಿಸಲು ತಯಾರಿದ್ದಾರೆ. ಮಾರ್ಚ್‌ನಲ್ಲಿ ಲೋಕಸಭಾ ಟಿಕೆಟ್ ಪಡೆಯಲು ಚೆಕ್ ಮೂಲಕ ₹25 ಲಕ್ಷ ನೀಡಲಾಗಿದೆ. ತದನಂತರ ₹1.75 ಕೋಟಿ ಕೈ ಸಾಲ ಪಡೆಯಲಾಗಿದೆ. ಇದಕ್ಕೆ ಮೂರನೇ ಆರೋಪಿ ಅಜಯ್ ಜೋಶಿ ಗ್ಯಾರಂಟಿ ನೀಡುವುದಾಗಿ ಹೇಳಿದ್ದಾರೆ ಎಂದು ನ್ಯಾಯಪೀಠದ ಮುಂದೆ ವಿವರಿಸಿದರು.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ತನಿಖಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ.ಆ ವರದಿಯನ್ನು ಪರಿಶೀಲಿಸಿ. ಕೃತ್ಯಕ್ಕೆ ಕೇಂದ್ರ ಸಚಿವರ ಕಚೇರಿಯನ್ನು ಬಳಕೆ ಮಾಡಲಾಗಿದೆ. ತನಿಖೆಯ ಸಂದರ್ಭದಲ್ಲಿ ಕೆಲವು ವಿಡಿಯೋ ಮತ್ತು ಆಡಿಯೋಗಳು ಲಭ್ಯವಾಗಿವೆ. ಹಣ ಕೇಳಿದಾಗ ಆರೋಪಿಗಳು ಜಾತಿ ಹೆಸರಿಡಿದು ನಿಂದನೆ ಮಾಡಿದ್ದಾರೆ. ಆರೋಪಿಗಳು ಒಬ್ಬೇ ಒಬ್ಬ ವ್ಯಕ್ತಿಯಿಂದ ಮಾತ್ರ ಹಣ ಸಂಗ್ರಹಿಸಿಲ್ಲ ಎಂದರು.
ಈ ನಡುವೆ, ಪೀಠವು ಹಣ ಕೊಡಲು ದೂರುದಾರರಿಗೆ ಹೇಳಿದವರಾರು? ಸಿವಿಲ್ ದಾವೆ ಹೂಡಿ, ಹಣ ಪಡೆದುಕೊಳ್ಳಬಹುದು. ಆರೋಪಿಗಳು ಹಣ ಪಡೆದಿರುವುದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ, ಇದು ಸಿವಿಲ್ ಪ್ರಕರಣ. ಇದು ಸಿವಿಲ್ ನ್ಯಾಯಾಲಯಕ್ಕೆ ಹೋಗಬೇಕು. ದೂರುದಾರರು ರಾಜಕೀಯಕ್ಕೆ ಹೊಸಬರೇ? ಈ ರೀತಿ ಪ್ರಕರಣದ ಆಗು-ಹೋಗುಗಳ ಬಗ್ಗೆ ತಿಳಿದಿಲ್ಲವೇನು ಎಂದಿತು.
ಅಲ್ಲದೆ, ಕಳೆದ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಅರ್ಜಿ ಮೂವ್ ಮಾಡಿದ್ದರು. ಕಡತಗಳನ್ನು ನೋಡಿರಲಿಲ್ಲ. ಇಲ್ಲವಾದಲ್ಲಿ ಅಂದೇ ತಡೆ ನೀಡುವ ಪ್ರಕರಣ ಇದು. ಹಣವನ್ನು ಪಡೆದಿದ್ದೇವೆ. ಅದನ್ನು ಮರಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇಲ್ಲಿ ಅಪರಾಧವೆಲ್ಲಿದೆ? ಜಾತಿ ನಿಂದನೆ ಅನ್ವಯಿಸುವಾಗ ಎಲ್ಲಿ (ಸ್ಥಳ) ಎಂಬುದು ಮುಖ್ಯವಾಗುತ್ತದೆ. ದಾಖಲೆಗಳನ್ನು (ಸರ್ಕಾರಕ್ಕೆ) ಸಲ್ಲಿಸಿ, ಅದನ್ನು ಪರಿಶೀಲಿಸಲಾಗುವುದು ಎಂದಿತು.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿಸಲು ₹25 ಲಕ್ಷ ಹಣ ಪಡೆದಿದ್ದಾರೆ ಎನ್ನಲಾಗಿದೆ. ಇದು ಚುನಾವಣೆಗೂ ಮುನ್ನ ನಡೆದಿರುವ ಘಟನೆ. ಟಿಕೆಟ್ ಸಿಗದೇ ಇದ್ದುದು ಗೊತ್ತಾದ ನಂತರ ಸುನೀತಾ ಚವ್ಹಾಣ್ ದೂರು ದಾಖಲಿಸಬಹುದಿತ್ತು. ಆದರೆ, ಆರು ತಿಂಗಳ ಬಳಿಕ ಅ.17ರಂದು ದೂರು ದಾಖಲಿಸಲಾಗಿದೆ.
ಈ ನಡುವೆ, ಪಡೆದಿರುವ ಹಣವನ್ನು ಹಿಂದಿರುಗಿಸುವುದಾಗಿ ಆರೋಪಿಗಳು ಹೇಳುತ್ತಲೇ ಬಂದಿದ್ದಾರೆ. ಹೀಗಾಗಿ, ಇದು ಹಣದ ವಿವಾದವಾಗಿದೆ. ಇದಕ್ಕೆ ಈಗ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ದೌರ್ಜನ್ಯ ನಿಷೇಧ ಕಾಯ್ದೆಯ ಬಣ್ಣ ಬಡಿಯಲಾಗಿದೆ. ಅರ್ಜಿದಾರರ ಮನೆಯಲ್ಲಿ ಜಾತಿ ನಿಂದನೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದು ನಾಲ್ಕು ಗೋಡೆಗಳ ನಡುವೆ ನಡೆದಿರುವ ಘಟನೆ. ಅದು ಸಾರ್ವಜನಿಕ ಸ್ಥಳವಲ್ಲ. ಹೀಗಾಗಿ, ಎಸ್‌ಸಿ ಅಥವಾ ಎಸ್‌ಟಿ ಕಾಯ್ದೆಯ ಸೆಕ್ಷನ್ 3(1) ಆರ್ ಮತ್ತು ಎಸ್ ಅಡಿ ಅಪರಾಧವಾಗುವುದಿಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.
ಹೀಗಾಗಿ, ಮುಂದಿನ ಪ್ರಕ್ರಿಯೆ ಅಥವಾ ತನಿಖೆಗೆ ಅನುಮತಿಸುವುದು ಲಲಿತ್ ಚತುರ್ವೇದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಲಾಗಿದೆ. ತನಿಖೆ ಹಾಗೂ ದೂರಿನ ಆಧಾರದಲ್ಲಿ ಆನಂತರ ಕೈಗೊಂಡಿರುವ ಎ್ಲ ಕ್ರಮಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅರ್ಜಿದಾರರನ್ನು ಕಾನೂನಿನ ಅನ್ವಯ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಒಮ್ಮೆ ದಾಖಲೆಗಳನ್ನು ನೋಡಿ ಎಂಬ ಜಗದೀಶ್ ಕೋರಿಕೆಯನ್ನು ತಿರಸ್ಕರಿಸಿದ ಪೀಠವು ನಿರ್ಧಾರ ಕೈಗೊಂಡು, ಆನಂತರ ತನಿಖಾ ದಾಖಲೆಗಳನ್ನು ನೋಡುತ್ತೇನೆ ಎಂದು ತನಿಖೆಗೆ ತಡೆಯಾಜ್ಞೆ ವಿಧಿಸಿದೆ.