ನ್ಯೂಸ್

ಉದ್ಯಮಿಗೆ ಬೆದರಿಕೆ ಆರೋಪ: ಎಚ್​.ಡಿ ಕುಮಾರಸ್ವಾಮಿ ವಿರುದ್ಧ FIR ದಾಖಲು

ಬೆಂಗಳೂರು: 50 ಕೋಟಿ ರೂಪಾಯಿ ಬೇಡಿಕೆ ಹಾಗೂ ಜೀವ ಬೆದರಿಕೆ ಆರೋಪದಲ್ಲಿ ಕೇಂದ್ರ ಕೈಗಾರಿಕಾ ಸಚಿವ ಎಚ್‌ ಡಿ ಕುಮಾರಸ್ವಾಮಿ ವಿರುದ್ಧ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಉದ್ಯಮಿ ವಿಜಯ್ ಟಾಟಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಇದರಿಂದ ಡಿನೋಟಿಫಿಕೇಷನ್, ಗಣಿಗಾರಿಕೆಗೆ ಅನುಮತಿ ಪ್ರಕರಣಗಳಲ್ಲಿ ಕಾನೂನು ಸಮರ ನಡೆಸುತ್ತಿರುವ ಕೇಂದ್ರ ಸಚಿವ ಎಚ್.​ಡಿ. ಕುಮಾರಸ್ವಾಮಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ವಿರುದ್ಧ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಎಂಬವರು ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಕುಮಾರಸ್ವಾಮಿ ಹಾಗೂ ರಮೇಶ್ ​ಗೌಡ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಲಾಗಿತ್ತು.

ನಂತರ ಆ ಬಗ್ಗೆ ಹೇಳಿಕೆ ನೀಡಿ, 50 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದರು. ಈ ದೂರಿನ ಮೇರೆಗೆ ಇದೀಗ ಕುಮಾರಸ್ವಾಮಿ ಮತ್ತು ಎಂಎಲ್‌ಸಿ ರಮೇಶ್ ಗೌಡ ಬಿಎನ್‌ಎಸ್‌ ಸೆಕ್ಷನ್ 3(5), 308(2), 351 (2) ಅಡಿ ಪ್ರಕರಣ ದಾಖಲಾಗಿದೆ.

ಜೆಡಿಎಸ್ ಮುಖಂಡರಾದ ರಮೇಶ್ ಗೌಡ ನಮ್ಮ ಮನೆಗೆ ಬಂದಿದ್ದರು. ನಿಖಿಲ್ ಚನ್ನಪಟ್ಟಣ ಉಪ ಚುನಾವಣೆ ನಿಲ್ಲುತ್ತಿದ್ದಾರೆ ಎಂದು ಹೇಳಿದ್ದರು. ಇದೇ ವೇಳೆ, ಎಚ್​​ಡಿ ಕುಮಾರಸ್ವಾಮಿ ಕೂಡ ದೂರವಾಣಿ ಕರೆ ಮಾಡಿದ್ದರು. ಚುನಾವಣೆಗಾಗಿ 50 ಕೋಟಿ ರೂಪಾಯಿ ಹಣ ನೀಡುವಂತೆ ನನ್ನನ್ನು ಕೇಳಿದ್ದರು. ನಾನು ಹಣ ಕೊಡಲಾಗದು ಎಂದಿದ್ದಕ್ಕೆ ಕುಮಾರಸ್ವಾಮಿ ಕೋಪಿಸಿಕೊಂಡಡು ಎಂದು ದೂರಿನಲ್ಲಿ ತಿಳಿಸಿದ್ದರು.