ಬೆಂಗಳೂರು: ದುರ್ವರ್ತನೆ, ಕರ್ತವ್ಯಲೋಪ ಮತ್ತು ಭ್ರಷ್ಟಚಾರದ ಆರೋಪದ ಮೇಲೆ ಪೂರ್ವವಿಭಾಗದ ರಾಮಮೂರ್ತಿನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸೇರಿ ಆರು ಸಿಬ್ಬಂದಿಯನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ.
ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಮುತ್ತುರಾಜ್, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಉಮೇಶ್, ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳಾದ ೈರೋಜ್ ಖಾನ್ ಮತ್ತು ಮಹೇಶ್ ಮತ್ತು ಹೆಡ್ ಕಾನ್‌ಸ್ಟೆಬಲ್ ಮಂಜುನಾಥ್, ಕಾನ್‌ಸ್ಟೇಬಲ್ ಬಸವರಾಜ ಅಳ್ಳೊಳ್ಳಿ ಅಮಾನತುಗೊಂಡವರು.
ಕೊಲೆ ಪ್ರಕರಣವೊಂದರಲ್ಲಿ ಆರೋಪಿಯನ್ನ ಬಂಧಿಸದೆ ಕೈಬಿಟ್ಟಿರುವುದು, ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಹಣ ಪಡೆದು ಬಿಟ್ಟಿರುವುದು. ಅಲ್ಲದೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯಿಂದ ಹಣ ಪಡೆದು ಬಿಟ್ಟಿರುವುದು ಸೇರಿದಂತೆ ಹಲವು ಆಪಾದನೆಗಳು ಕೇಳಿಬಂದಿದ್ದವು. ಈ ಸಂಬಂಧ ಮೇಲಾಧಿಕಾರಿಗಳು ವರದಿ ತಯಾರಿಸಿ ಪೊಲೀಸರಿಗೆ ಆಯುಕ್ತರಿಗೆ ನೀಡಿದ್ದರು. ಪರಿಶೀಲನೆಯಲ್ಲಿ ಆರು ಮಂದಿ ಕೃತ್ಯವೆಸಗಿರುವುದು ಆಂತರಿಕ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.