ಮುಂದಳೂರಿಗೆ ಬಟ್ಟೆಯಿದೆ ಹೋಗೆಂದರೆ/ಅಂಧಕನೇನು ಬಲ್ಲನು ಹೇಳಾ?/ಸಂಗ್ರಾಮದಲ್ಲಿ ಓಡಿದ ಹಂದೆ ಗೆಲ್ಲಬಲ್ಲನೆ ಹೇಳಾ?/ಗುಹೇಶ್ವರನೆಂಬ ನಿರಾಳದ ಘನವ ಪಂಚೇಂದ್ರಿಕನೆತ್ತ ಬಲ್ಲನು ಹೇಳಾ? (ಅಲ್ಲ.ವ.ಚಂ 463)
ನಾವು ಲೋಕವನ್ನು ನೋಡಲು ನಮ್ಮ ಭೌತಿಕವಾದ ಐದು ಇಂದ್ರಿಯಗಳನ್ನು ಬಳಸುತ್ತಿದ್ದೇವೆ. ಕಣ್ಣಿಲ್ಲದವನು ಬೆಳಕಿನ ದಾರಿಯನ್ನು ಹೇಗೆ ಹಿಡಿಯಬಲ್ಲ? ಯುದ್ಧದಲ್ಲಿ ಓಡಿಹೋದವನು ಶತ್ರುಗಳನ್ನು ಎದುರಿಸಬಲ್ಲನೆ? ಆಳವಾದ ಮಡುವಿನಲ್ಲಿ ನಿಂದ ನಿಲುವಿನಲ್ಲಿ ಮಗುವು ಈಜಾಡಲು ಸಾಧ್ಯವೆ? ಇದು ಅಲ್ಲಮನ ವಾಚ್ಯಾರ್ಥದ ಪ್ರಶ್ನೆಗಳು. ನಾವು ಈ ಪ್ರಶ್ನೆಗಳನ್ನು ಆಧ್ಯಾತ್ಮಿಕ ಸಂಕೇತದಲ್ಲಿ ಗ್ರಹಿಸಬೇಕು. ಇಲ್ಲಿ ಅಂಧಕ, ಹಂದೆ, ಕಂದ ಮತ್ತು ಪಂಚೇಂದ್ರಿಯಗಳು ಇವೆ. ವಿದ್ಯೆ, ಭಯ, ಕತ್ತಲು ಇವು ಇಲ್ಲಿಯ ಸಂಕೇತಗಳಾಗಿವೆ. ಅಲ್ಲಮನು ದಾರಿ ತಪ್ಪಿದವರಿಗೆ ದಾರಿಯನ್ನು ತೋರಿಸುತ್ತಿದ್ದಾನೆ. ಸಂಸಾರದ ನಿತ್ಯ ಸಂಗ್ರಾಮವನ್ನು ಪಾರಾಗುವ ಕ್ರಮವನ್ನು ತಿಳಿಸುತ್ತಿದ್ದಾನೆ. ಇಂದ್ರಿಯಗಳ ಸೆರೆಯಿಂದ ತಪ್ಪಿಸಿಕೊಳ್ಳುವ ಬಗೆಯನ್ನು ತೋರಿಸುತ್ತಿದ್ದಾನೆ. ಇದು ಅಲ್ಲಮಪ್ರಭುವಿನ ನಿರಂತರ ಅನ್ವೇಷಣದ ಕ್ರಮ. ಇದು ಅವನ ಪರ್ಯಟಣದ ಉದ್ದೇಶವೂ ಹೌದು!
ಅಲ್ಲಮನು ಉತ್ತರದಿಂದ ದಕ್ಷಿಣಾಭಿಮುಖವಾಗಿ ಪ್ರಯಾಣ ಬೆಳೆಸಿದ. ಅವನು ಬರುವಾಗ ಪರ್ವತ, ಗುಡ್ಡ, ಏರಿ, ಕೆರೆ, ಹೊಳೆ, ಕಾಲುವೆ ಮುಂತಾದ ಸಹಜ ಪ್ರಕೃತಿ ಪರಿಸರವನ್ನು ಕಂಡ. ಅಲ್ಲಲ್ಲಿ ಕಾಡುಗಳಿದ್ದವು. ಆ ಕಾಡಿನಲ್ಲಿ ಬೇಡರು ಇದ್ದರು. ಇನ್ನೊಂದೆಡೆ ಋಷಿ-ಮುನಿಗಳ ಆಶ್ರಮಗಳು ಶೋಭಿಸುತ್ತಿದ್ದವು. ಅಲ್ಲಿರುವ ಸಾಧಕ ತಪೋನಿಧಿಗಳಿಗೆ ಉಪಮಾತೀತವಾದ ಶೂನ್ಯಸ್ಥಿತಿಯನ್ನು ಅಲ್ಲಮ ನೇರವಾಗಿಯೇ ಅನುಗ್ರಹಿಸಿದ. ಅವನು ಅಲ್ಲಿಂದ ನಡೆಯುತ್ತ ಚಿಗುರಿದ ಮರ, ಬಳ್ಳಿ ಪೊದರು, ಹುಲ್ಲು ಇವುಗಳ ಎಡೆಗಳಲ್ಲಿ ಸಂಚರಿಸುವ ಪಕ್ಷಿ-ಮೃಗಗಳ ಸಂಕುಲದಿಂದ ಕೂಡಿರುವ ಕಾಡಿನ ಮಧ್ಯದಲ್ಲಿ ಬರುತ್ತಿದ್ದ.
ಹಾಗೆ ಬರುತ್ತಿರುವಾಗ, ನಾಯಿಗಳ ಹಿಂಡಿನ ಜೊತೆ ಕಾಡಿನ ಬೇಡನೊಬ್ಬನನ್ನು ಅಲ್ಲಮ ಕಂಡ. ‘ಇವನೊಬ್ಬ ಮೂಢ. ನಾನು ಇವನಿಗೆ ಬೋಧಿಸದೆ ಹೋಗುವುದು ತರವಲ್ಲ. ಸಿದ್ಧರಸವು ಕಬ್ಬಿಣದಂಥ ದುಷ್ಟನನ್ನು ಒಳ್ಳೆಯ ಚಿನ್ನವನ್ನಾಗಿ ಮಾಡುತ್ತದೆ’ ಎಂದು ಮನಸ್ಸಿನಲ್ಲಿಯೇ ಯೋಚಿಸಿಕೊಂಡ. ಈ ಬೇಡನಲ್ಲಿ ಅಹಂಕಾರವೆಂಬ ಮೃಗವು ನೆಲೆಸಿದೆ. ಮನೋಹರವಾದ ಅಂತಃಕರಣವೆಂಬ ನಾಯಿಯನ್ನು ಪಕ್ಕಕ್ಕೆ ಸರಿಸಬೇಕು. ವಾಯುವೆಂಬ ಶರಾಸನವನ್ನು ಬಿಗಿಯಬೇಕು. ಏಕೋಭಾವವೆಂಬ ಬಾಣದಿಂದ ಕೊಲ್ಲುವ ರೀತಿಯನ್ನು ಅವನಿಗೆ ತಿಳಿಹೇಳಬೇಕೆಂದು ನಿಶ್ಚಯಿಸಿಕೊಂಡ. ಅಲ್ಲಮ ಮತ್ತು ಬೇಡನ ಪ್ರಸಂಗವನ್ನು ಚಾಮರಸ ಕವಿಯು ಬೇಟೆಗಾರನ ಭಾಷೆಯಲ್ಲೇ ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾನೆ. ಅವನ ಪದ್ಯವೊಂದು ಹೀಗಿದೆ:
ಉಸುರುವಲೆ, ಮೈಗಾಡು, ಬುದ್ಧಿಯ/ಬೆಸುಗೆ ಮೈ, ನಿಶ್ಚಲದ ಮನವೇ/ಮಿಸುಪ ಕಂಗಳು, ತಿಳಿವೆ ಲುಬ್ಜಕನಾಗಿ, ಹಮ್ಮೆಂಬ/ಅಸಮ ಖಗ ಮೃಗ ಜಲಚರವನೊಂ/ದಿಸುತ ಸುಜ್ಞಾನಾಗ್ನಿಯಲಿ ಪಚನಿಸಿಯೆ/ ದಡಿಯುಣಕಲಿಸಿದನು ಪ್ರಭು ಬೇಂಟೆಕಾರಂಗೆ (ಪ್ರಭು.ಲೀ.20-11)
ಈ ಪದ್ಯದ ತಾತ್ಪರ್ಯವನ್ನು ಮೊದಲು ಗ್ರಹಿಸೋಣ : ‘ಉಸಿರೆ ಬಲೆ, ದೇಹವೇ ಕಾಡು, ಬುದ್ಧಿಯ ಕೂಟವೇ ಮೈ, ನಿಶ್ಚಲವಾದ ಮನಸ್ಸೇ ಪ್ರಕಾಶಭರಿತವಾದ ಕಣ್ಣುಗಳು. ಜ್ಞಾನವೇ ಬೇಡನಾಗಿ ಅಹಂಕಾರವೆಂಬ ಸಮನಲ್ಲದ ಪಕ್ಷಿ-ಮೃಗ-ಜಲಚರ ಪ್ರಾಣಿಗಳನ್ನು ಒಟ್ಟುಗೂಡಿಸುತ್ತ ಸುಜ್ಞಾನವೆಂಬ ಬೆಂಕಿಯಿಂದ ಬೇಯಿಸಿ ತೃಪ್ತಿ ಹೊಂದುವಂತೆ ಉಣ್ಣಲು ಬೇಟೆಗಾರನಿಗೆ ಪ್ರಭುವು ಕಲಿಸಿದನು’. ಅಲ್ಲಮನು ಬೇಡನ ಭಾಷೆಯ ಮೂಲಕವೇ ಆಧ್ಯಾತ್ಮಿಕ ನೆಲೆಯನ್ನು ತೋರಿಸಿದ್ದು ಇಲ್ಲಿಯ ವಿಶೇಷ. ಅಲ್ಲಮನು ಶಿವಾನುಭವವನ್ನು ಬೇಡನು ತಿಳಿದ, ಬಳಸುತ್ತಿದ್ದ ಭಾಷೆಯಲ್ಲೇ ಅನುಗ್ರಹಿಸಿದ್ದು ಇಲ್ಲಿಯ ವಿಶೇಷ ಸಂಗತಿ. ಅಲ್ಲಮನು ಆಯಾಯ ಸಾಧಕರಿಗೆ ಅವರವರ ರೀತಿಗಳಲ್ಲಿ ಶಿವತತ್ತ್ವವನ್ನು ಬೋಧಿಸಿದ್ದುದನ್ನು ನಾವು ಗಮನಿಸಬೇಕಾಗುತ್ತದೆ.
ಅಲ್ಲಮನು ಪರಬ್ರಹ್ಮಸ್ವರೂಪನೇ ಆದವನು. ಆ ಬೇಡನಿಗೆ ಸಂಸಾರದ ಅನಿತ್ಯತೆಯನ್ನು ಬೋಧಿಸಿದ. ಬೇಡನ ರೀತಿ-ನೀತಿಯೇ ಬೇರೆ. ಆ ರೀತಿ-ನೀತಿಯನ್ನು ತೆಗೆದುಕೊಂಡು, ಅವನು ಬಳಸುವ ಭಾಷೆಯಲ್ಲೇ ಅಲ್ಲಮನು ತಿಳಿ ಹೇಳಿದ್ದಾನೆ. ಹೀಗಾಗಿ ಬೇಡನಲ್ಲಿದ್ದ ಮಲಿನಭಾವವು ತೊಲಗಿತು. ಅವನಲ್ಲಿ ಸುಜ್ಞಾನವೆಂಬ ದೀಪವು ಬೆಳಗಿತು. ಅಲ್ಲಮನು ಬೇಡನಿಗೆ ಬೆಳಕಿನ ದಾರಿಯನ್ನು ತೋರಿಸಿ, ತನ್ನ ಪಯಣವನ್ನು ಮುಂದುವರಿಸಿದನು.
(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು. ಪ್ರತಿಕ್ರಿಯಿಸಿ: vvsudina@gmail.com, mallepuram@gmail.com)