ತಗಡಿನ ಶೆಡ್‌ನಲ್ಲಿರುವ ಅಲ್ಲಮಪ್ರಭು ಗದ್ದುಗೆ. 
ನ್ಯೂಸ್

ಅಭಿವೃದ್ಧಿಗೆ ಕಾದಿರುವ ಅಲ್ಲಮಪ್ರಭು ಸಮಾಧಿ

ಶಿವಕುಮಾರ ಎಸ್.ಪಿ.

ಶಿಕಾರಿಪುರ: ಅಲ್ಲಮಪ್ರಭು ಮಹಾನ್ ವಿರಾಗಿ ಹಾಗೂ ಮಹಾಯೋಗಿ. ಕಲ್ಯಾಣದ ಶಿವಾನುಭವ ಮಂಟಪದ ಸಭಾಪತಿಯಾಗಿ ಸಮರ್ಥವಾಗಿ ಶರಣರ ಚಿಂತನೆಗಳನ್ನು ಮಂಥನ ಮಾಡಿ ನಿಭಾಯಿಸಿದವರು. ಅವರು ಶಿಕಾರಿಪುರ ತಾಲೂಕಿನಲ್ಲಿ ಜನಿಸಿದವರು ಎನ್ನುವುದೇ ಹೆಮ್ಮೆ. ಅಂತಹ ಮಹಾಶಿವಶರಣನ ಗದ್ದುಗೆ ಇಂದು ಅವ್ಯವಸ್ಥೆಯಿಂದ ಕೂಡಿದೆ. ಗದ್ದುಗೆಯ ಹಿಂದಿನ ಗೋಡೆ ಬಿರುಕು ಬಿಟ್ಟು ಈಗಲೋ ಆಗಲೋ ಬಿದ್ದು ಹೋಗುವ ಸ್ಥಿತಿಯಲ್ಲಿದೆ.

ಅವರ ಸಮಾಧಿ ಸ್ಥಳವನ್ನು ಗಮನಿಸಿದರೆ ಯಾರಿಗಾದರೂ ಬೇಸರವಾಗದೇ ಇರದು. ಒಂದೆಡೆ ತಾಲೂಕಿನ ಬಹುತೇಕ ಮಠ ಮಂದಿರಗಳಿಗೆ ಅನುದಾನ ದೊರೆತಿದೆ. ಕ್ಷೇತ್ರಗಳು ಅಭಿವೃದ್ಧಿಯಾಗಿವೆ. ಕೇವಲ ಐದು ಮೈಲಿ ದೂರದಲ್ಲಿರುವ ಮಹಾಶರಣೆ ಅಕ್ಕಮಹಾದೇವಿ ಜನ್ಮಸ್ಥಳ ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಸುಮಾರು 59 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಆಗುತ್ತಿದೆ. ಆದರೆ ಶೂನ್ಯ ಸಿಂಹಾಸನಾಧೀಶ್ವರ ಅಲ್ಲಮರ ಜನ್ಮಸ್ಥಳದ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ. ಅನುದಾನದ ಕೊರತೆ ಪ್ರಮುಖ ಕಾರಣ ಎನ್ನುತ್ತಾರೆ ಸ್ಥಳೀಯರು.

ಅಭಿವೃದ್ಧಿಗೆ ಚಾಲನೆ: ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ 1 ಕೋಟಿ ರೂ. ಅನುದಾನ ನೀಡಿ ಕಾಮಗಾರಿ ಆರಂಭಿಸಲಾಯಿತು. ಅಲ್ಲಮಪ್ರಭುಗಳ ಹೆಸರಿನಲ್ಲಿ ಒಂದು ಅನುಭವ ಮಂಟಪ ಮಾದರಿಯ ಕಲ್ಲಿನ ಮಂಟಪ, ಅವರ ತಂದೆ-ತಾಯಿಗಳ ಗದ್ದುಗೆಗಳನ್ನು ನೂತನವಾಗಿ ನಿರ್ಮಿಸಿ ಸಂರಕ್ಷಿಸಲು ಅನುದಾನ ಮಂಜೂರಾಗಿತ್ತು. ಆದರೆ ಈಗ ಅನುದಾನ ಬಾರದಿರುವುದರಿಂದ ಯೋಜನೆ ಸ್ಥಗಿತಗೊಂಡಿದೆ. ಇನ್ನಾದರೂ ಸರ್ಕಾರ ಅನುದಾನ ದೊರಕಿಸಿ ಕೂಡಲಸಂಗಮದ ಮಾದರಿಯಲ್ಲಿ ಪ್ರವಾಸಿ ಕೇಂದ್ರವಾಗಿಸಲಿ ಎಂಬುದು ಬಹುತೇಕರ ಒತ್ತಾಯ.

ಆಸಕ್ತಿ ತೋರಲಿ ಸಚಿವರು: ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಅಲ್ಲಮ ಪ್ರಭುಗಳನ್ನು ಸ್ಮರಿಸುವ ಜತೆಗೆ ಅವರ ಜನ್ಮಸ್ಥಳ ಅಭಿವೃದ್ಧಿಗೊಳಿಸುತ್ತೇವೆ ಎಂದಿದ್ದರು. ಈ ಹೇಳಿಕೆ ಅನೇಕ ಶರಣರ ಸಂತಸಕ್ಕೆ ಕಾರಣವಾಗಿತ್ತು. ಇದು ಕೇವಲ ಆಶ್ವಾಸನೆಯಾಗದೆ ಕಾರ್ಯಗತವಾಗಬೇಕು. ಈ ಸ್ಥಳ ಪ್ರಸಿದ್ಧ ಪ್ರವಾಸಿ ತಾಣವಾಗಲಿ ಎಂಬುದು ಜನರ ಆಶಯ.