ನ್ಯೂಸ್

ಆಲ್ ದಿ ಬೆಸ್ಟ್ ಮಕ್ಕಳೇ; ಪರೀಕ್ಷೆಯಲ್ಲಿ ಗೆದ್ದು ಜೀವನದಲ್ಲೂ ಗೆಲ್ಲಿ

ಪ್ರೀತಿಯ ಮಕ್ಕಳೇ..

ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗುತ್ತಿವೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಪ್ರಮುಖ ಹಂತ. ನಿಮ್ಮ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಮುಂದುವರಿಸಲು ಇದು ಹೆಬ್ಬಾಗಿಲು. ಪರೀಕ್ಷೆಯೆಂದಾಕ್ಷಣ ಭಯ, ಆತಂಕ, ಉದ್ವೇಗ ಸಹಜ. ಇವುಗಳನ್ನು ಮೀರಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯಬೇಕು ಎಂಬುದು ನನ್ನ ಆಶಯ. ಶಿಸ್ತು, ಪರಿಶ್ರಮ ಮತ್ತು ಆಸಕ್ತಿ ಇದ್ದರೆ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ. ಕಠಿಣ ಪರಿಶ್ರಮವೊಂದೇ ಸಾಧನೆಗೆ ಇರುವ ಏಕೈಕ ಮಾರ್ಗ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಸುವರ್ಣ ಕ್ಷಣವಿದು. ಹಾಗಾಗಿ ಆತಂಕ ಬೇಡ. ಆತ್ಮವಿಶ್ವಾಸವಿರಲಿ.

ಭವಿಷ್ಯದ ಕನಸುಗಳನ್ನು ಹೊತ್ತ ನಿಮ್ಮ ಮುಂದೆ ನಿಮ್ಮ ಇಡೀ ಜೀವನವೇ ಇದೆ. ನಮ್ಮ ದೇಶದ ಉಜ್ವಲ ಭವಿಷ್ಯವೂ ನಿಮ್ಮ ಕೈಗಳಲ್ಲಿದೆ. ಓದಿ ವಿದ್ಯಾವಂತರಾಗಿ, ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ವಣದಲ್ಲಿ ಪಾಲುದಾರರಾಗಿ.ನಿಮ್ಮಿಂದ ಸಾಧ್ಯವಾಗದೆ ಇರುವುದು ಯಾವುದೂ ಇಲ್ಲ. ನಿಮ್ಮೊಳಗೊಬ್ಬ ಭಗತ್ ಸಿಂಗ್, ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್ ಅಡಗಿರಬಹುದು. ದೇಶದ ಆರ್ಥಿಕತೆಗೆ ಕೊಡುಗೆ ನೀಡುವ ಶಕ್ತಿವುಳ್ಳ ಕೈಗಾರಿಕೋದ್ಯಮಿ ಇರಬಹುದು. ಜನರ ಕಾಯಿಲೆಗಳನ್ನು ಗುಣಪಡಿಸಬಲ್ಲ ವೈದ್ಯನಿರಬಹುದು. ಉತ್ತಮ ವ್ಯಕ್ತಿಗಳನ್ನು ರೂಪಿಸಬಲ್ಲ ಶಿಕ್ಷಕನಿರಬಹುದು. ಜನರನ್ನು ಮೇಲೆತ್ತುವ ಸಮಾಜ ಸೇವಕನಿರಬಹುದು. ನಿಮ್ಮ ಭವಿಷ್ಯದ ಕನಸುಗಳನ್ನು ಕೇವಲ ನೀವಷ್ಟೇ ಅಲ್ಲ. ನಿಮ್ಮನ್ನು ಹೆತ್ತ ತಂದೆ- ತಾಯಿ, ಪೋಷಕರೂ ಕಾಣುತ್ತಿರುತ್ತಾರೆ. ನಿಮಗಾಗಿ ಅವರು ಹಗಲಿರುಳೆನ್ನದೆ ದುಡಿಯುತ್ತಾರೆ. ನಿಮ್ಮ ವಿದ್ಯಾರ್ಜನೆಗೆ ಪೂರಕವಾದ ವಾತಾವರಣ ನಿರ್ವಿುಸಿ ಎಲ್ಲ ನೆರವು ನೀಡುತ್ತಾರೆ.

ನಿಮ್ಮ ಸಾಧನೆಯ ಬಗ್ಗೆ ಅವರಷ್ಟು ಸಂತೋಷ, ಹೆಮ್ಮೆ ಪಡುವವರು ಬೇರೆ ಯಾರೂ ಇಲ್ಲ. ಬದುಕಿನ ಪ್ರಮುಖ ತಿರುವಿನಲ್ಲಿ ನಿಂತಿದ್ದೀರಿ. ಪರೀಕ್ಷೆ ಬರೆಯಲು ನಿಮ್ಮ ಮಾನಸಿಕ ಹಾಗೂ ದೈಹಿಕ ಸ್ಥಿತಿ ಬಹಳ ಮುಖ್ಯ. ಆದಷ್ಟು ತಾಳ್ಮೆಯಿಂದ, ಶಾಂತಿಯಿಂದ ಪರೀಕ್ಷೆಗಳನ್ನು ಎದುರಿಸಿ. ಹಿಂದೆ ಗುರು, ಮುಂದೆ ಗುರಿಯಿರಲು ನಿಮ್ಮನ್ನು ತಡೆಯುವ ಶಕ್ತಿ ಜಗತ್ತಿನಲ್ಲಿ ಯಾರಿಗೂ ಇಲ್ಲ. ನಿಮ್ಮ ಮೇಲೆ ನನಗೆ ಅತ್ಯಂತ ಹೆಚ್ಚಿನ ಭರವಸೆ ಇದೆ.

ಮಕ್ಕಳೆ, ಮತ್ತೊಂದು ಕಿವಿ ಮಾತು. ಪರೀಕ್ಷೆಯಲ್ಲಿ ಗೆದ್ದು ಯಶಸ್ಸು ಸಾಧಿಸಿ. ದೃತಿಗೆಡದೇ ಗುರಿ ತಲುಪುವವರೆಗೆ ಪ್ರಯತ್ನಿಸಿ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮಹತ್ವದ ಘಟ್ಟವನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸು ಸಾಧಿಸಿ. ನೀವು ಆ ಸಾಧನೆ ಮಾಡುತ್ತೀರಿ ಎನ್ನುವ ಅಚಲ ನಂಬಿಕೆ ನನ್ನದು. ಆಲ್ ದಿ ಬೆಸ್ಟ್!