ಜೋಗ ಜಲಪಾತದ ಆವರಣದಲ್ಲಿ ನಿರ್ಮಾಣವಾದ ವಾಣಿಜ್ಯ ಮಳಿಗೆಗಳು.  
ನ್ಯೂಸ್

ಮುಂದಿನ ವರ್ಷಕ್ಕೆ ಸರ್ವಋತು ಜೋಗ

ಕಾರ್ಗಲ್: ಎಲ್ಲವೂ ಅಂದುಕೊಂಡಂತೆ ಆದರೆ 2025ರ ಮಳೆಗಾಲದ ಆರಂಭಕ್ಕೆ ವಿಶ್ವ ವಿಖ್ಯಾತ ಜೋಗ ಜಲಪಾತವು ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವ ಒಂದು ಹೈಟೆಕ್ ಪ್ರವಾಸಿತಾಣವಾಗಿ ರೂಪುಗೊಳ್ಳಲಿದೆ. ಈ ಮೂಲಕ ಪ್ರವಾಸ ಪ್ರಿಯರನ್ನು ಕೈಬೀಸಿ ಕರೆಯಲಿದೆ.

ಜೋಗ ಜಲಪಾತವು ವಿಶ್ವ ಮಾನ್ಯತೆ ಪಡೆದಿದ್ದರೂ ಸಾಕಷ್ಟು ಮೂಲ ಸೌಕರ್ಯಗಳ ಕೊರತೆಯಿಂದ ಬಳಲಿತ್ತು. ಈ ಕಾರಣದಿಂದಲೇ ಪ್ರವಾಸಿಗರು ಹಾಗೂ ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಲೇ ಇದ್ದರು. ಇದೆಲ್ಲದರ ಪರಿಣಾಮವಾಗಿ ಸರ್ಕಾರ ಜೋಗ ಜಲಪಾತವನ್ನು 185 ಕೋಟಿ ರೂ. ವೆಚ್ಚದಲ್ಲಿ ವಿಶೇಷವಾಗಿ ಅಭಿವೃದ್ಧಿ ಪಡಿಸಲು ಕ್ಯಾಬಿನೆಟ್‌ನಲ್ಲಿ ಮಂಜೂರಾತಿ ನೀಡಿತು.

ಜೋಗ ಜಲಪಾತವನ್ನು ಅಭಿವೃದ್ಧಿಪಡಿಸಲು ಬೇಕಾದ ಡಿಪಿಆರ್ ಅನ್ನು ಪ್ರವಾಸೋದ್ಯಮ ಇಲಾಖೆಯು ಇಐ ಟೆಕ್ನಾಲಜಿ ಸಂಸ್ಥೆಗೆ ನೀಡಿತು. ಜೋಗದ ಸಂಪೂರ್ಣ ನೀಲಿನಕ್ಷೆ ಮತ್ತು ಅಂದಾಜು ವೆಚ್ಚವನ್ನು ನಿಗದಿಪಡಿಸಿ ಸಂಸ್ಥೆಯಿಂದ ಸಲ್ಲಿಕೆಯಾಯಿತು. ನಂತರ ಗುತ್ತಿಗೆಯ ಟೆಂಡರ್ ಕೆಲಸ ಹಾಗೂ ಕಾಮಗಾರಿಯ ಸಂಪೂರ್ಣ ಮೇಲುಸ್ತುವಾರಿಯನ್ನು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಗೆ ವಹಿಸಲಾಯಿತು.

185 ಕೋಟಿ ರೂ. ವೆಚ್ಚದ ಕಾಮಗಾರಿಗಳ ಗುತ್ತಿಗೆಯನ್ನು ಪಡೆದ ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಸಂಸ್ಥೆಯು 2023ರ ಅಕ್ಟೋಬರ್‌ನಲ್ಲಿ ಕಾಮಗಾರಿ ಆರಂಭಿಸಿತು. ಲೆಕ್ಕಾಚಾರದ ಪ್ರಕಾರ ಕಾಮಗಾರಿಯನ್ನು 2023ರ ನವೆಂಬರ್ ವೇಳೆಗೆ ಮುಗಿಸಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಇದು ಸಾಧ್ಯವಾಗಲಿಲ್ಲ. ಇದೀಗ 2025ರ ಮೇ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಕಂಪನಿಗೆ ತಿಳಿಸಲಾಗಿದೆ. ಜೋಗ ಜಲಪಾತದ ಕಾಮಗಾರಿಗಳು ಮುಂದಿನ ಮಳೆಗಾಲದೊಳಗೆ ಪೂರ್ಣವಾಗುವ ನಿರೀಕ್ಷೆಯಿದೆ.

ಪ್ರಮುಖವಾಗಿ 185 ಕೋಟಿ ರೂ. ಅನುದಾನದಲ್ಲಿ 24 ಪ್ರಮುಖ ಕಾಮಗಾರಿಗಳು ಸೇರಿವೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕ ಅಗತ್ಯವಿರುವ ಕಾಮಗಾರಿಗಳನ್ನು ಅಳವಡಿಸಿದ್ದಾರೆ. ಈಗಿನ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ.

ಕೈಗೊಂಡಿರುವ ಕಾಮಗಾರಿಗಳು: 24 ಕಾಮಗಾರಿಗಳ ಪೈಕಿ ಪ್ರಮುಖವಾಗಿ ಆಕರ್ಷಣೆ ಮುಖ್ಯದ್ವಾರದ ಗೋಪುರ ಹಾಗೂ 12 ಎತ್ತರದ ಶರಾವತಿ ವಿಗ್ರಹ, ವಿಜ್ಞಾನ ಮತ್ತು ಮಕ್ಕಳ ಉದ್ಯಾನ, ಜೋಗ ಜಲಪಾತದ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ವಿಶಿಷ್ಟವಾಗಿ ನಿರ್ಮಿಸಿರುವ ಮುಖ್ಯ ವೀಕ್ಷಣಾ ಗೋಪುರ, ಹವಾ ನಿಯಂತ್ರಿತ ಹೈಟೆಕ್ ಶಾಪಿಂಗ್ ಕಾಂಪ್ಲೆಕ್ಸ್, ಯುವ ಪೀಳಿಗೆಯನ್ನು ಸೆಳೆಯುವ ರೈನ್ ಡಾನ್ಸ್, ರಾಣಿಾಲ್ಸ್ ಸಮೀಪ ಸುಮಾರು 4 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ವಿಶಾಲ ವಾಹನಗಳ ನಿಲುಗಡೆಗೆ ಪಾರ್ಕಿಂಗ್, ತಳಕಳಲೆ ಅಣೆಕಟ್ಟಿನ ಹಿನ್ನೀರಿನ 6 ಕಿ.ಮೀ. ಅಂತರದ ಜಂಗಲ್ ಲಾಡ್ಜ್‌ನಿಂದ ವಡನಬೈಲು ಶ್ರೀಕ್ಷೇತ್ರ ಪದ್ಮಾವತಿ ದೇವಾಲಯದವರೆಗೆ ಪ್ರವಾಸಿಗರಿಗೆ ಸುತ್ತುವರಿಯಲು ಬೋಟಿಂಗ್ ವ್ಯವಸ್ಥೆ ಹಾಗೂ ಜೆಎಲ್‌ಆರ್‌ವರೆಗೆ ತಲುಪಲು ಹೊಸದಾಗಿ ನಿರ್ಮಾಣಗೊಂಡ ರಸ್ತೆ, ಈ ಹಿಂದೆ ರಾಣಿಾಲ್ಸ್ ನೆತ್ತಿಯ ಮೇಲಿಂದ ಮುಖ್ಯ ವೀಕ್ಷಣಾ ಗೋಪುರದವರೆಗೆ ಜೋಡಣೆಯಾದ ಜಿಪ್‌ಲೈನ್, ಸಂಗೀತ ನೃತ್ಯ ಕಾರಂಜಿ, ಲ್ಯಾಂಡ್ ಸ್ಕೇಪಿಂಗ್ (ಭೂದೃಶ್ಯ ವಿನ್ಯಾಸ) ನಿರ್ಮಾಣ, ಕೊಳಚೆ ನೀರು ಶುದ್ಧೀಕರಣ ಘಟಕ ಹಾಗೂ ನೀರಿನ ಮರುಬಳಕೆ, ಇಡೀ ಆವರಣದಲ್ಲಿ ಪೂರಕವಾದ ಸುಂದರ ಕಾಲುದಾರಿ ನಿರ್ಮಾಣ ಸೇರಿ ಒಟ್ಟು 24 ಕಾಮಗಾರಿಗಳು ಇದರಲ್ಲಿ ಸೇರಿದ್ದು ಎಲ್ಲವೂ ಅಂತಿಮ ಹಂತದಲ್ಲಿವೆ.

75 ದಿನಗಳ ಕಾಲ ಪ್ರವೇಶ ನಿಷಿದ್ಧ: ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಈಗಾಗಲೆ ಕೆಲಸ ಭರದಿಂದ ಸಾಗುತ್ತಿದೆ. ಆದರೆ ಇನ್ನಷ್ಟು ಶೀಘ್ರವೇ ಕಾಮಗಾರಿ ಮುಗಿಸಬೇಕು ಎಂಬ ಉದ್ದೇಶವಿದೆ. ಜಲಪಾತದ ಪ್ರವೇಶದ್ವಾರದಲ್ಲಿ ಗೋಪುರ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಕೆಲಸವನ್ನು ನಿರ್ವಹಿಸುತ್ತಿರುವ ಎಸ್‌ಎನ್‌ಸಿ ಸಂಸ್ಥೆಯು, ಪ್ರವಾಸಿಗರು ಮತ್ತು ಸಾರ್ವಜನಿಕರ ಓಡಾಟಕ್ಕೆ ಮೂರು ತಿಂಗಳ ಕಾಲ ನಿರ್ಬಂಧ ವಿಧಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಏಕೆಂದರೆ ಪ್ರವಾಸಿಗರು ಒಳಗೆ ಓಡಾಡಿದರೆ ಕೆಲಸಕ್ಕೆ ತೊಂದರೆಯಾಗಲಿದೆ ಎಂಬುದು ಇದರ ಉದ್ದೇಶ. ಡಿಸೆಂಬರ್ ಅಂತ್ಯದವರೆಗೆ ಶಾಲಾ ಮಕ್ಕಳ ಪ್ರವಾಸ ಸಮಯವಾದ್ದರಿಂದ ಇಲ್ಲಿಗೆ ಆಗಮಿಸುವ ಮಕ್ಕಳಿಗೆ ವೀಕ್ಷಣೆಗೆ ತೊಂದರೆ ಆಗದಂತೆ ಈ ತಿಂಗಳು ಅವಕಾಶ ನೀಡಿ, ಮೂರು ತಿಂಗಳ ಬದಲಿಗೆ ಜ.1ರಿಂದ ಜಾರಿಗೆ ಬರುವಂತೆ ಮಾ.15ರವರೆಗೆ 75 ದಿನಗಳ ಕಾಲ ಪ್ರವಾಸಿಗರಿಗೆ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಐದು ಗೋಪುರಗಳು: ಜೋಗ ಜಲಪಾತದ ಪ್ರವೇಶದ್ವಾರವು ಐದು ಗೋಪುರಗಳನ್ನು ಒಳಗೊಂಡಿದೆ. ಇದರ ಮಧ್ಯೆ ಸೆಕ್ಯೂರಿಟಿ ಸೆಲ್ ಹಾಗೂ ಟಿಕೆಟ್ ಕೌಂಟರ್ ಇರಲಿದೆ. ಮೊದಲ ಎರಡು ದ್ವಾರಗಳು ಪ್ರವಾಸಿಗರಿಗೆ ಒಳಪ್ರವೇಶಕ್ಕೆ, ಮೂರು ಮತ್ತು ನಾಲ್ಕನೇ ದ್ವಾರಗಳು ಪ್ರವಾಸೋದ್ಯಮ ಇಲಾಖೆ, ಹಾಗೂ ವಿಐಪಿಗಳಿಗೆ ಮೀಸಲಾಗಿದೆ. ಐದನೇ ದ್ವಾರದಿಂದ ಹೊರಬರಲು ಅವಕಾಶ ಕಲ್ಪಿಸುವ ಮಾಹಿತಿ ಇದೆ.